ವಿಕ ಸುದ್ದಿಲೋಕ ಮಾಗಡಿ: ಹೇಮಾವತಿ ಯೋಜನೆಯ ನೀರನ್ನು ಮಾಗಡಿ ತಾಲೂಕಿಗೆ ಬಿಡುವುದಿಲ್ಲಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಕುಣಿಗಲ್ ನ ಮಾಜಿ ಸಚಿವನಾಗರಾಜಯ್ಯ ಅವರ ಪುತ್ರ ತಾ.ಪಂ. ಮಾಜಿ ಸದಸ್ಯ ಜಗದೀಶ್ ಅವರಿಗೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್ .ಎನ್ . ಅಶೋಕ್ ತೀವ್ರ ತಿರುಗೇಟು ನೀಡಿದ್ದಾರೆ.
ಪಟ್ಟಣದ ಬಿಡಿಸಿಸಿ ಬ್ಯಾಂಕ್ ಕಚೇರಿಯಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಮಾಗಡಿಗೆ ಹಂಚಿಕೆಯಾಗಿರುವ ನೀರನ್ನು ತಡೆಯಲು ನೀವ್ಯಾರು ಎಂದು ಪ್ರಶ್ನಿಸಿದರು ಹೈಪÜವರ್ ಕಮಿಟಿ ತೀರ್ಮಾನ ಮತ್ತು ಮಾಗಡಿಯ ಹಕ್ಕು ಹೇಮಾವತಿ ನೀರಿನ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಇಂದಿನ ಸರಕಾರದ ತೀರ್ಮಾನವಲ್ಲವೀರಪ್ಪ ಮೊಯ್ಲಿಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿರಚನೆಯಾದ ಹೈಪವರ್ ಕಮಿಟಿ ಕುಣಿಗಲ್ ತಾಲೂಕಿಗೆ 3 ಟಿಎಂಸಿ ಹಾಗೂ ಮಾಗಡಿ ತಾಲೂಕಿನ ಕೆರೆಗಳನ್ನು ತುಂಬಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 0.676 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು. ಈ ಯೋಜನೆಯ ರೂಪುರೇಷೆ ಸಿದ್ಧವಾಗುವಲ್ಲಿಎಚ್ .ಎಂ. ರೇವಣ್ಣ, ದಿ.ಟಿ.ಎ. ರಂಗಯ್ಯ, ವೈ.ಕೆ. ರಾಮಯ್ಯ,
ಹುಚ್ಚಮಾಸ್ತಿಗೌಡ, ಎಸ್ .ಎಂ. ಕೃಷ್ಣ ಹಾಗೂ ಜೆ.ಎಚ್ . ಪಟೇಲ್ ಅವರಂತಹ ಹಿರಿಯ ನಾಯಕರ ಪಾತ್ರ ದೊಡ್ಡದಿದೆ ಎಂದು ಅಶೋಕ್ ಸ್ಮರಿಸಿದರು.
ಎಕ್ಸ್ ಪ್ರೆಸ್ ಕೆನಾಲ್ ಅಗತ್ಯತೆ ಮತ್ತು ಡಿ.ಕೆ. ಸಹೋದರರ ಶ್ರಮ: ತೆರೆದ ಕಾಲುವೆಗಳ ಮೂಲಕ 150 ರಿಂದ 170 ಕಿ.ಮೀ ದೂರ ನೀರು ಹರಿದು ಬರುವಾಗ
ಮಾರ್ಗಮಧ್ಯೆಯೇ ನೀರು ಪೋಲಾಗಿ ಮಾಗಡಿ ಕೊನೆ ಭಾಗಕ್ಕೆ ತಲುಪುವುದು ಕಷ್ಟಸಾಧ್ಯವಾಗಿತ್ತು. ಇದನ್ನು ಮನಗಂಡ ಅಂದಿನ ಮಾಜಿ ಸಂಸದ ಡಿ.ಕೆ. ಸುರೇಶ್ ಮತ್ತು ಉಪಮುಖ್ಯಮಂತ್ರಿ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಯಾವುದೇ ಅಡೆತಡೆಯಿಲ್ಲದೆ ಮಾಗಡಿ 63 ಕೆರೆಗಳಿಗೆ ನೀರು ತಲುಪಿಸಲು ‘ಎಕ್ಸ್ ಪ್ರೆಸ್ ಕೆನಾಲ್ ’ (ಪೈಪ್ ಲೈನ್ ) ಯೋಜನೆಗೆ ಹೆಚ್ಚಿನ ಒತ್ತು ನೀಡಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಹೈಕೋರ್ಟ್ ಕೂಡ ಮಾಗಡಿಯ ಪಾಲಿನ ನೀರಿಗೆ ಅಡ್ಡಿಪಡಿಸದಂತೆ ಆದೇಶ ನೀಡಿದೆ.
ರಾಜಕೀಯ ಮತ್ಸರ ಸಲ್ಲದು: ‘‘ವಿದ್ಯಾವಂತರಾದ ಜಗದೀಶ್ ಅವರು ಪ್ರಬುದ್ಧತೆಯಿಂದ ಮಾತನಾಡಬೇಕು. ಕುಣಿಗಲ್ ಶಾಸಕ ರಂಗನಾಥ್ ಅವರ ಜನಪ್ರಿಯತೆಯನ್ನು ಸಹಿಸದೆ, ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾಂತೀಯ ಭಾವನೆ ಕೆರಳಿಸುವಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವುದು ಸರಿಯಲ್ಲ’’ ಎಂದು ಅಶೋಕ್ ಕಿಡಿಕಾರಿದರು.
ರಾಮನಗರ ಅಥವಾ ಕನಕಪುರಕ್ಕೆ ಈ ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂಬ ಅಪಪ್ರಚಾರ ಸತ್ಯಕ್ಕೆ ದೂರವಾದುದ್ದು, ಮಾಗಡಿ ಮತ್ತು ಕುಣಿಗಲ್ ತಾಲೂಕುಗಳ ನಡುವೆ ಸಾಮರಸ್ಯವಿದ್ದು, ರಾಜಕೀಯಕ್ಕಾಗಿ ನೀರಿನ ವಿಚಾರದಲ್ಲಿಮತ್ಸರ ಸಾಧಿಸಬಾರದು. ಇನ್ನು ಒಂದು ವರ್ಷದೊಳಗೆ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಪೂರ್ಣಗೊಂಡು ಮಾಗಡಿಗೆ ಹೇಮಾವತಿ ನೀರು ಹರಿಯುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಗೊರೂರು ಜಲಾಶಯದಿಂದ ಬಿಡುಗಡೆಯಾಗುವ ನೀರಿನಲ್ಲಿ388 ಕ್ಯೂಸೆಕ್ ನೀರನ್ನು 70ನೇ ಕಿ.ಮೀ ನಿಂದ 167ನೇ ಕಿ.ಮೀ ವರೆಗೆ 9 ಅಡಿ ವ್ಯಾಸದ ಬೃಹತ್ ಪೈಪ್ ಗಳ ಮೂಲಕ ಸುಮಾರು 34.5 ಕಿ.ಮೀ ಉದ್ದದ ಎಕ್ಸ್ ಪ್ರೆಸ್ ಕೆನಾಲ್ ನಲ್ಲಿಹರಿಸಲಾಗುವುದು. ಈ ಕಾಮಗಾರಿಗೆ ಈಗಾಗಲೇ ಶೇ. 70-80 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, 5,500ಕ್ಕೂ ಹೆಚ್ಚು ಪೈಪ್ ಗಳು ಸಿದ್ಧವಾಗಿವೆ.
ಹೇಮಾವತಿ (0.676 ಟಿಎಂಸಿ), ಎತ್ತಿನಹೊಳೆ (0.339 ಟಿಎಂಸಿ) ಮತ್ತು ಸತ್ತೇಗಾಲ ಯೋಜನೆಗಳ (0.859 ಟಿಎಂಸಿ) ಮೂಲಕ ಮಾಗಡಿ ತಾಲ್ಲೂಕಿಗೆ ಒಟ್ಟು 1.8 ಟಿಎಂಸಿ ನೀರು ಹಂಚಿಕೆಯಾಗಿದೆ. ಇದರಿಂದ ಮಾಗಡಿಯ ಕೆರೆಗಳಿಗೆ ನೀರು ತುಂಬಿಸುವುದಲ್ಲದೆ, ಅಂತರ್ಜಲವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಯೋಜನೆಗಳು ಅಧಿಕಾರಿಗಳ ಪರಿಶ್ರಮದಿಂದ ಸಾಗುತ್ತಿದ್ದು, ಯಾರೂ ಪ್ರಾಂತೀಯ ಭಾವನೆ ಕೆರಳಿಸುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಮೂರ್ತಿ, ಜೆ.ಪಿ.ಚಂದ್ರೇಗೌಡ, ಎಂ.ಕೆ.ಧನಂಜಯ್ಯ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಬೆಳ್ಳಿಯಪ್ಪ, ಪ್ರಕಾಶ್ , ಕುದೂರು ವಿನಯ್ , ಅಶ್ವಥ್ , ರೂಪೇಶ್ , ಜಯಮ್ಮ, ಶಾಂತರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.
12ಮಾಗಡಿ1 : ಮಾಗಡಿ ಪಟ್ಟಣದ ಬಿಡಿಸಿಸಿ ಬ್ಯಾಂಕ್ ಕಚೇರಿಯಲ್ಲಿಸುದ್ದಿಗಾರರೊಂದಿಗೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಎಚ್ . ಎನ್ .ಅಶೋಕ್ ಮಾತನಾಡಿದರು.