ವಿಕ ಸುದ್ದಿಲೋಕ, ರಾಮನಗರ: ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಏಕೀಕರಣದ ಹೋರಾಟದಲ್ಲಿರಂಜಾನ್ ಸಾಬ್ ಅವರು ಪ್ರಾಣತ್ಯಾಗ ಮಾಡಿದರು. ಅವರ ಧರ್ಮ ಬೇರೆ, ಜಾತಿ ಬೇರೆ; ಆದರೆ, ಕನ್ನಡ ನಾಡಿನ ಅಸ್ಮಿತೆಗಾಗಿ ಪ್ರಾಣವನ್ನೇ ಅರ್ಪಿಸಿದ ಅವರು ಕನ್ನಡದ ಕುಲಕ್ಕೆ ಸೇರಿದವರು. ಕನ್ನಡವೆಂಬುದು ಯಾವುದೇ ಜಾತಿ, ಧರ್ಮದ ಬೇಲಿಯಲ್ಲಿಬಂಧಿಯಾಗದ, ಎಲ್ಲರನ್ನೂ ಒಳಗೊಳ್ಳುವ ಭಾವನಾತ್ಮಕ ಶಕ್ತಿ ಎಂಬುದಕ್ಕೆ ಇಂತಹ ಹೋರಾಟಗಾರರ ತ್ಯಾಗವೇ ಸಾಕ್ಷಿ ಎಂದು ಹಿರಿಯ ಸಾಹಿತಿ ಹಾಗೂ ವಿಮರ್ಶಕ ಡಾ. ಬಂಜಗೆರೆಜಯಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಗೌಸಿಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿಅವರು ಮಾತನಾಡಿದರು.
ಕನ್ನಡ ಭಾಷೆ ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಯಾರು ಬೇಕಾದರೂ ಕನ್ನಡಿಗರಾಗಬಹುದು. ಕವಿಗಳು ಕನ್ನಡವನ್ನು ‘ಕನ್ನಡ ಕುಲ’ ಎಂದು
ಕರೆಯುವುದಕ್ಕೂ ಇದೇ ಕಾರಣ. ಕನ್ನಡ ನಾಡಿನ ಏಕೀಕರಣದ ಹೋರಾಟದಲ್ಲಿಯೂ ಎಲ್ಲಜಾತಿ, ಧರ್ಮಗಳ ಜನರು ಭಾಗವಹಿಸಿದ್ದರು. ಬ್ರಿಟಿಷÜರ ಆಡಳಿತದ ವೇಳೆ ಕರ್ನಾಟಕದ ನಾನಾ ಭಾಗಗಳು ಹೈದ್ರಾಬಾದ್ ನಿಜಾಮರ, ಮದ್ರಾಸ್ , ಮರಾಠ ಪ್ರಾಂಥ ಮತ್ತು ಮೈಸೂರು ಸಂಸ್ಥಾನಗಳ ಆಡಳಿತಕ್ಕೆ ಒಳಪಟ್ಟಿದ್ದವು. ಇಂತಹ ಸಂದರ್ಭದಲ್ಲಿಕರ್ನಾಟಕ ಏಕೀಕರಣದ ಬೇಡಿಕೆಯನ್ನು ಮುಂದಿಟ್ಟುಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿಕನ್ನಡಿಗರು ಭಾಗವಹಿಸಿದ್ದರು ಎಂದು ವಿವರಿಸಿದರು.
1921ರಲ್ಲಿನಡೆದ ಕಾಂಗ್ರೆಸ್ ಅಧಿವೇಶನದಲ್ಲಿಯೂ ಕರ್ನಾಟಕ ಏಕೀಕರಣದ ಬೇಡಿಕೆಯನ್ನು ಮುಂದಿಡಲಾಗಿತ್ತು. ಏಕೀಕರಣದ ಬೇಡಿಕೆಗೆ ಸ್ಪಂದಿಸುವ ಷರತ್ತಿನೊಂದಿಗೆ ಕಾಂಗ್ರೆಸ್ ಗೆ ಬೆಂಬಲ ನೀಡಲಾಗಿತ್ತು. ಕವಿಗಳು, ವಿದ್ಯಾವಂತರು ಹಾಗೂ ರಾಜಕಾರಣಿಗಳು ಏಕೀಕರಣದ ಹೋರಾಟಕ್ಕೆ ಮುನ್ನಡೆ ನೀಡಿದರೆ, ಸಾಮಾನ್ಯ ಜನರು ಬೀದಿಗಿಳಿದು ಹೋರಾಡಿದ್ದರು. ಸುದೀರ್ಘ ಹೋರಾಟದ ಫಲವಾಗಿ 1956ರಲ್ಲಿಕರ್ನಾಟಕ ಏಕೀಕರಣ ಸಾಕಾರಗೊಂಡಿತು.
ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಲಿಖಿತ ಇತಿಹಾಸವಿದೆ. ದಕ್ಷಿಣ ಭಾರತದಲ್ಲಿತಮಿಳು ಮತ್ತು ಕನ್ನಡ ಪ್ರಮುಖ ಭಾಷೆಗಳಾಗಿವೆ. ಭಾಷೆಯೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಳೆಸುವ ಅಗತ್ಯವಿದೆ. ಕನ್ನಡ ಈಗಾಗಲೇ ಡಿಜಿಟಲ್ ಭಾಷೆಯಾಗಿ ಬೆಳೆಯುತ್ತಿದೆ. ಇತರ ಭಾಷೆಗಳಿಂದ ಪದಗಳನ್ನು ಎರವಲು ಪಡೆಯುವುದು ತಪ್ಪಲ್ಲ. ಆದರೆ, ಅವುಗಳನ್ನು ಕನ್ನಡದ ಸ್ವರೂಪಕ್ಕೆ ಹೊಂದಿಸಿಕೊಂಡು ಬಳಸಬೇಕು. ಜವಾಬ್ದಾರಿ, ಕಚೇರಿ, ಕುರ್ಚಿ, ಸಂಬಳ, ಜಿಲ್ಲೆ, ತಾಲೂಕು, ತಹಸೀಲ್ದಾರ್ ಸೇರಿದಂತೆ ಹಲವು ಪದಗಳು ಪಾರ್ಸಿ
ಭಾಷೆಗಳಿಂದ ಬಂದು ಕನ್ನಡದಲ್ಲಿಬಳಕೆಯಾಗುತ್ತಿವೆ. ಭಾಷೆæ ಶುದ್ಧವಾಗಿಯೇ ಉಳಿಯಬೇಕು ಎಂಬ ಹಠಕ್ಕಿಂತ, ಜ್ಞಾನ ಮತ್ತು ಬಳಕೆಯ ಮೂಲಕ ಅದು ಸಮೃದ್ಧವಾಗಿ
ಬೆಳೆಯಬೇಕು ಎಂದು ಹೇಳಿದರು.
ಎಲ್ಲಭಾಷೆæಗಳನ್ನು ಕಲಿತರೂ ಕನ್ನಡದ ಅಸ್ಮಿತೆಯನ್ನು ಕಳೆದುಕೊಳ್ಳಬಾರದು. ಕನ್ನಡ ಎಲ್ಲವನ್ನೂ ಅರಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಭಾಷೆæಯ ವಿಚಾರದಲ್ಲಿಕನ್ನಡಿಗರು
ಮತ್ತೊಂದು ಭಾಷೆಯ ಮೇಲೆ ದಾಳಿ ನಡೆಸಿದ ಇತಿಹಾಸವಿಲ್ಲ. ನಾವು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ವಿವೇಕಶೀಲ ಜನರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಗೌಸಿಯಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಎಜಾನ್ ಅಹಮದ್ ಕೆ.ಆರ್ . ಪ್ರಾಂಶುಪಾಲ ಡಾ. ಎನ್ .ಎಂ. ಕುಮಾರ್ , ಗೌರವ ಕಾರ್ಯದರ್ಶಿ ಉಮರ್ ಇಸ್ಮಾಯಿಲ್ , ಸಂಚಾಲಕ ಡಾ. ಸೈಫುಲ್ಲಾಖಾನ್ , ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ನಾನಾ ಕ್ರೀಡಾ ಹಾಗೂ
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಫೋಟೊ:
12ಆರ್ ಎನ್ ಆರ್ ಎಂ3:
ರಾಮನಗರ ಗೌಸಿಯಾ ಕಾಲೇಜಿನಲ್ಲಿಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಉದ್ಘಾಟಿಸಿದರು.