ಅಕ್ಷರ ದಾಸೋಹ ಖಾಸಗೀಕರಣಕ್ಕೆ ಅವಕಾಶ ನೀಡೆವು: ಸಿಐಟಿಯು ಎಚ್ಚರಿಕೆ
ವಿಕ ಸುದ್ದಿಲೋಕ ಪುತ್ತೂರುಇಪ್ಪತ್ತೈದು ವರ್ಷಗಳಿಂದ ಬಿಸಿಯೂಟ ತಯಾರಕರನ್ನು ಅತೀ ಕಡಿಮೆ ವೇತನದಲ್ಲಿದುಡಿಸಿ, ಈಗ ಅವರನ್ನು ಬೀದಿಪಾಲು ಮಾಡುವ ಹುನ್ನಾರವನ್ನು ಸರಕಾರ ಮಾಡುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ದ.ಕ. ಜಿಲ್ಲಾ ಮುಖಂಡ ಶ್ಯಾಮರಾಜ್ ಪಟ್ರಮೆ ಹೆಳಿದರು.
ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರ ದಾಸೋಹ ಯೋಜನೆಯ ನೌಕರರು ಪುತ್ತೂರು ಸಹಾಯಕ ಕಮಿಷನರ್ ಕಚೇರಿ ಎದುರು ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿಅವರು ಮಾತನಾಡಿದರು.
ಬದುಕಲು ತಕ್ಕ ವೇತನ ಕೊಡಬೇಕೆಂಬ ಪರಿಜ್ಞಾನ ಇಲ್ಲದ ಸರಕಾರದ ಅಡಿಯಲ್ಲಿನಾವು ಬದುಕುತ್ತಿದ್ದೇವೆ ಎಂದು ಆಪಾದಿಸಿದ ಅವರು, ಕೇಂದ್ರ ಸರಕಾರ ಕಳೆದ 12 ವರ್ಷದಿಂದ ಬಿಸಿಯೂಟ ನೌಕರರಿಗೆ ಸಂಬಳವನ್ನೇ ಏರಿಸಿಲ್ಲ. ರಾಜ್ಯ ಸರಕಾರ ಇಡೀ ಯೋಜನೆಯನ್ನೇ ಖಾಸಗೀಕರಣ ಮಾಡಲು ಹುನ್ನಾರ ನಡೆಸುತ್ತಿದೆ. ನೀಡುವ ಕನಿಷ್ಟ ಸಂಬಳ 4,600ನ್ನೂ ಪ್ರತೀ ತಿಂಗಳು ನೀಡಲು ಯೋಗ್ಯತೆ ಇಲ್ಲದ ಸರಕಾರಗಳು ಶಾಸಕ -ಮಂತ್ರಿಗಳ ಸಂಬಳ ಮಾತ್ರ ಬಾಕಿ ಮಾಡುವುದಿಲ್ಲ. ಒಬ್ಬ ಶಾಸಕರಿಗೆ ಮಾಸಿಕ 2 ಲಕ್ಷ ರೂ.ಗಳನ್ನು ಪ್ರತೀ ತಿಂಗಳ 1ನೇ ತಾರೀಕಿನಂದೇ ನೀಡಲಾಗುತ್ತದೆ. ಇದಕ್ಕೆ ಸರಕಾರದ ಬಳಿ ಹಣ ಇದೆಯೇ ಎಂದವರು ಪ್ರಶ್ನಿಸಿದರು.
ಸಿಐಟಿಯು ದ.ಕ. ಜಿಲ್ಲಾ ಸಹಕಾರ್ಯದರ್ಶಿ, ದ.ಕ. ಜಿಲ್ಲಾ ಅಕ್ಷರ ದಾಸೋಹ ಸಂಘದ ಉಪಾಧ್ಯಕ್ಷೆ ಈಶ್ವರಿ ಪದ್ಮುಂಜ ಮಾತನಾಡಿ, ಮಕ್ಕಳ ಪೌಷ್ಟಕತೆಗಾಗಿ ಬಿಸಿಯೂಟ ಯೋಜನೆ ಜಾರಿಗೆ ಬಂದಿದ್ದರೂ ಅದನ್ನು ಅತೀ ಕಡಿಮೆ ವೇತನದಲ್ಲಿಜಾರಿ ಮಾಡಲಾಗುತ್ತಿದೆ. ಸರಕಾರದ ವಿರುದ್ಧ ನಮ್ಮ ಗಟ್ಟಿ ಧ್ವನಿ ಮೊಳಗಬೇಕಿದೆ. ಯಾವುದೇ ಕಾರಣಕ್ಕೂ ಬಿಸಿಯೂಟದವರನ್ನು ಕೆಲಸದಿಂದ ತೆಗೆಯಲು ಬಿಡುವುದಿಲ್ಲಎಂದರು.
ಅಕ್ಷರ ದಾಸೋಹ ನೌಕರ ಸಂಘದ ಪುತ್ತೂರು ತಾಲೂಕು ಕಾರ್ಯದರ್ಶಿ ಲತಾ ಸ್ವಾಗತಿಸಿದರು. ಕಡಬ ತಾಲೂಕು ಅಧ್ಯಕ್ಷೆ ಹೇಮಾವತಿ ವಂದಿಸಿದರು. ಸಿಐಟಿಯು ಪುತ್ತೂರು ತಾಲೂಕು ಮುಖಂಡರಾದ ನ್ಯಾಯವಾದಿ ಪಿ.ಕೆ.ಸತೀಶನ್ , ಅಕ್ಷರ ದಾಸೋಹ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ರಂಜಿತಾ ಕೋಡಿಬಾಡಿ, ಜಿಲ್ಲಾ ಸಮಿತಿ ಮುಖಂಡರಾದ ರೇವತಿ ಕಡಬ, ಸುಲೋಚನ ಕಡಬ, ರೈತ ಮುಖಂಡ ಮಹಮ್ಮದ್ ಅನಸ್ , ಸಿಐಟಿಯು ಮುಖಂಡರಾದ ಪುಷ್ಪ, ಡಿವೈಎಫ್ ಐ ಮುಖಂಡ ಮಹೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ: 17ಪಿ-ಬಿಸಿ
ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರ ದಾಸೋಹ ಯೋಜನೆಯ ನೌಕರರು ಎ.ಸಿ. ಕಚೇರಿ ಎದುರು ಪ್ರತಿಭಟನೆ ನಡೆಸಿದರು.