ವಿಕ ಸುದ್ದಿಲೋಕ ತಿ.ನರಸೀಪುರಗ್ರಾಮೀಣ ಪ್ರದೇಶಗಳ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೇತಹಳ್ಳಿ ಗ್ರಾಮದಲ್ಲಿಆಯೋಜಿಸಿದ್ದ ಎರಡನೇ ಹಂತದ ಪ್ರಜಾಸೇವಾ ಆಂದೋಲನದಲ್ಲಿವಿವಿಧ ಇಲಾಖೆಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಒಟ್ಟು 42 ಅರ್ಜಿಗಳು ಸಲ್ಲಿಕೆಯಾದವು.
ತಾಲೂಕಿನ ಮೂಗೂರು ಹೋಬಳಿಯ ಕರೋಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇತಹಳ್ಳಿ ಸರಕಾರಿ ಶಾಲೆಯ ಆವರಣದಲ್ಲಿನಡೆದ ಕಾರ್ಯಕ್ರಮದಲ್ಲಿಗ್ರಾಮಸ್ಥರು ರಸ್ತೆ, ಸ್ಮಶಾನ, ಕುಡಿಯುವ ನೀರು ಹಾಗೂ ಆರೋಗ್ಯ ಸೌಲಭ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
‘‘ಸಲ್ಲಿಕೆಯಾದ ಅರ್ಜಿಗಳಲ್ಲಿಕಂದಾಯ ಇಲಾಖೆಗೆ 9, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 22, ಸರ್ವೇ ಇಲಾಖೆಗೆ 2, ಸೆಸ್ಕ್ ಗೆ 1, ಶಿಕ್ಷಣ ಇಲಾಖೆಗೆ 1, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 5 ಹಾಗೂ ಲೋಕೋಪಯೋಗಿ ಇಲಾಖೆಗೆ 2 ಅರ್ಜಿಗಳು ಸೇರಿವೆ. ಕೇತಹಳ್ಳಿ ಗ್ರಾಮದಲ್ಲಿಪರಿಶಿಷ್ಟ ಜಾತಿ ಸಮುದಾಯದವರಿಗೆ ಪ್ರತ್ಯೇಕ ಸ್ಮಶಾನ ಇಲ್ಲದೆ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಸ್ಮಶಾನಕ್ಕೆ ಜಾಗ ಮಂಜೂರು ಮಾಡಬೇಕು,’’ ಎಂದು ಗ್ರಾಮಸ್ಥರು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ,‘‘ಸರಕಾರದ ಆದೇಶದಂತೆ ಒಂದು ಗ್ರಾಮಕ್ಕೆ ಒಂದು ಸಮುದಾಯದ ಸ್ಮಶಾನ ಒದಗಿಸಲು ಅವಕಾಶವಿದ್ದು, ಪ್ರತ್ಯೇಕವಾಗಿ ಜನಾಂಗವಾರು ಸ್ಮಶಾನ ಮಂಜೂರಾತಿಗೆ ಅವಕಾಶವಿಲ್ಲ,’’ಎಂದರು.
‘‘ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದರಿಂದ ದುರಸ್ತಿಗೊಳಿಸಬೇಕು ಅಥವಾ ಅನುಕೂಲಕರ ಸ್ಥಳಕ್ಕೆ ಸ್ಥಳಾಂತರಿಸಬೇಕು,’’ಎಂದು ಗ್ರಾಮಸ್ಥರು ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಇಒ ಡಾ.ಕೆ.ರಂಗಸ್ವಾಮಿ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿತೋಟಗಾರಿಕೆ ಸಹಾಯಕ ನಿರ್ದೇಶಕಿ ಶಾಂತ, ಅಬಕಾರಿ ಇನ್ಸ್ ಪೆಕ್ಟರ್ ಸುಧಾರಾಣಿ, ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ.ಮಲ್ಲಿಕಾರ್ಜುನ ಸ್ವಾಮಿ, ನೀರಾವರಿ ಎಇಇ ದಿನೇಶ್ ಕುಮಾರ್ , ಅರಣ್ಯ ಇಲಾಖೆಯ ಮಹದೇವಸ್ವಾಮಿ, ಮೀನುಗಾರಿಕೆ ಸಹಾಯಕ ನಿರ್ದೇಶಕಿ ಶ್ವೇತಾ, ಲೋಕೋಪಯೋಗಿ ಎಇಇ ಸತೀಶ್ ಚಂದ್ರನ್ , ಸಿಡಿಪಿಒ ಗೋವಿಂದರಾಜು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜಣ್ಣ, ಆಹಾರ ನಿರೀಕ್ಷಕ ದಿವಾಕರ್ , ಕಾರ್ಮಿಕ ಇಲಾಖೆಯ ಸದಾನಂದ್ , ಉಪತಹಸೀಲ್ದಾರ್ ಲಕ್ಷ್ಮಿ, ಪಿಡಿಒ ಗಿರಿಧರ್ , ಕೃಷಿ ಇಲಾಖೆಯ ಶೈಲೂ, ವಿಎ ಪ್ರಮೋದ್ , ಸಂತೋಷ್ , ಬಿಲ್ ಕಲೆಕ್ಟರ್ ರಾಜು, ಕರೋಹಟ್ಟಿ ಯಾದವ್ ಸೇರಿದಂತೆ ವಿವಿಧ ಇಲಾಖೆಗಳ ಅಧಿ ಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಜಾತಿ ಪ್ರಮಾಣ ಪತ್ರ ವಿಳಂಬಕ್ಕೆ ಆಕ್ಷೇಪ:
ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆಯಲು ವಿಳಂಬವಾಗುತ್ತಿದ್ದು, ಕೆಲವು ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ , ಮೂಲ ವಾಸ ಸ್ಥಳದಲ್ಲಿಯೇ ಜನಿಸಿರುವುದಕ್ಕೆ ಸೂಕ್ತ ದಾಖಲೆಗಳಿದ್ದರೆ ಪರಿಶೀಲಿಸಿ ಪ್ರಮಾಣಪತ್ರ ನೀಡಲು ಅವಕಾಶವಿದೆ. ಬೇರೆ ಪ್ರದೇಶಗಳಿಂದ ವಲಸೆ ಬಂದವರ ಅರ್ಜಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.