ವಾಟದಹೊಸಹಳ್ಳಿ ಕೆರೆ ಬೋಟಿಂಗ್ ಕಾರ್ಯಾದೇಶದಲ್ಲಿಅಕ್ರಮ | ತೋಟಗಾರಿಕೆ ಇಲಾಖೆ ನಿರ್ದೇಶಕರಿಂದ ಅಮಾನತು ಆದೇಶ
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರಜಿಲ್ಲಾಧಿಕಾರಿ ಸಹಿಯನ್ನೇ ಫೋರ್ಜರಿ ಮಾಡಿ ಸರಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಪ್ರವಾಸೋದ್ಯಮ ಇಲಾಖೆಯ ಹಿಂದಿನ ಸಹಾಯಕ ನಿರ್ದೇಶಕ ಬಿ.ಟಿ. ಯಶವಂತ್ ಕುಮಾರ್ ರನ್ನು ಸೇವೆಯಿಂದ ಅಮಾನತುಗೊಳಿಸಿ ತೋಟಗಾರಿಕೆ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ?: ಮೂಲತಃ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಬಿ.ಟಿ. ಯಶವಂತ್ ಕುಮಾರ್ , 2023ರ ಆ.10ರಿಂದ 2026ರ ಏ.2ರವರೆಗೆ ಎರವಲು ಸೇವೆ ಮೇಲೆ ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಕೆರೆಯಲ್ಲಿಬೋಟಿಂಗ್ ಹಾಗೂ ಜಲಸಾಹಸ ಚಟುವಟಿಕೆಗಳನ್ನು ನಡೆಸಲು ಮೆ. ಆಕ್ಷಾ ಎಸ್ಕೇಪ್ ಅಡ್ವೆಂಚರ್ಸ್ ಸಂಸ್ಥೆಗೆ 2025ರ ಸೆ.8ರಂದು ಕಾರ್ಯಾದೇಶ ನೀಡಲಾಗಿತ್ತು. ಈ ಕಾರ್ಯಾದೇಶ ಮತ್ತು ಕರಾರು ಒಪ್ಪಂದ ಪತ್ರಗಳಿಗೆ ಅಂದಿನ ಜಿಲ್ಲಾಧಿಕಾರಿ ಪಿ.ಎನ್ . ರವೀಂದ್ರ ಅವರ ಸಹಿಯನ್ನು ನಕಲಿ ಮಾಡಿ ದಾಖಲೆಗಳನ್ನು ತಿದ್ದುಪಡಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಎಫ್ ಎಸ್ ಎಲ್ ನಲ್ಲಿಸಹಿ ನಕಲಿ ಸಾಬೀತು: ಈ ಕುರಿತು ದೂರು ಸ್ವೀಕೃತವಾದ ಹಿನ್ನೆಲೆಯಲ್ಲಿಸರಕಾರದ ಸೂಚನೆಯಂತೆ ತನಿಖೆ ನಡೆಸಲಾಗಿತ್ತು. ವಿವಾದಿತ ಕಾರ್ಯಾದೇಶ ಮತ್ತು ಕರಾರು ಪತ್ರಗಳನ್ನು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಖಾಸಗಿ ಹಾಗೂ ಸರಕಾರಿ ವಿಧಿ ವಿಜ್ಞಾನ ಪ್ರಯೋಗಾಲಯಗಳ ವರದಿಯಲ್ಲಿಜಿಲ್ಲಾಧಿಕಾರಿ ಸಹಿಯನ್ನು ಫೋರ್ಜರಿ ಮಾಡಿರುವುದು ಸಾಬೀತಾಗಿತ್ತು. ಈ ಸಂಬಂಧ 2026ರ ಸೆ.8ರಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಬಿಎನ್ ಎಸ್ ಕಾಯಿದೆಯ ನಾನಾ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾಧಿಕಾರಿ ಪತ್ರದ ಬೆನ್ನಲ್ಲೇ ಅಮಾನತು: ಈ ನಡುವೆ ಯಶವಂತ್ ಕುಮಾರ್ ಅವರು ತಮ್ಮ ಮಾತೃ ಇಲಾಖೆಯಾದ ತೋಟಗಾರಿಕೆ ಇಲಾಖೆಗೆ ಮರಳಿದ್ದು, ಬೆಂಗಳೂರಿನ ಕೆ.ಆರ್ . ಪುರಂನಲ್ಲಿಸಹಾಯಕ ತೋಟಗಾರಿಕೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಹಾಲಿ ಜಿಲ್ಲಾಧಿಕಾರಿ ಪ್ರಭು ಜಿ. ಅವರು, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿ 2026ರ ಸೆ.23ರಂದು ತೋಟಗಾರಿಕೆ ಇಲಾಖೆಗೆ ಪತ್ರ ಬರೆದಿದ್ದರು.
ಜಿಲ್ಲಾಧಿಕಾರಿ ಪತ್ರ ಹಾಗೂ ಎಫ್ ಎಸ್ ಎಲ್ ವರದಿಯನ್ನು ಆಧರಿಸಿ, ಇಲಾಖೆ ವಿಚಾರಣೆಯನ್ನು ಬಾಕಿ ಇರಿಸಿ ಬಿ.ಟಿ. ಯಶವಂತ್ ಕುಮಾರ್ ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ತೋಟಗಾರಿಕೆ ನಿರ್ದೇಶಕರು ಆದೇಶಿಸಿದ್ದಾರೆ. ಅಲ್ಲದೆ, ಅಮಾನತು ಅವಧಿಯಲ್ಲಿಇವರ ಲೀನ್ ಅನ್ನು ಮಡಿಕೇರಿಯ ತೋಟಗಾರಿಕೆ ಉಪ ನಿರ್ದೇಶಕರ (ಜಿಪಂ) ಅದೀನ ಹುದ್ದೆಗೆ ಸ್ಥಳಾಂತರಿಸಲಾಗಿದ್ದು, ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.