ಮಕ್ಕಳ ಕತ

Contributed by: shubha.hegde@timesofindia.com|Vijaya Karnataka•
the tale of the struggling ants and the medicinal bird
ಪುಟಾಣಿ ಕಂಡ ಇರುವೆ ಪ್ರಪಂಚ

ಅಂದು ಕೈತೋಟದಲ್ಲಿಅಡ್ಡಾಡುತ್ತಿದ್ದ ಏಳು ವರ್ಷದ ಪುಟಾಣಿಗೆ ನೆಲದ ಮೇಲೆ ಒಬ್ಬರ ಹಿಂದೊಬ್ಬರಂತೆ ಸಾಲಾಗಿ ಚಲಿಸುತ್ತಿದ್ದ ಇರುವೆಗಳು ಕಾಣಿಸಿದವು. ಪ್ರತಿಯೊಂದು ಇರುವೆಯೂ ತನ್ನ ಗಾತ್ರಕ್ಕಿಂತ ಎರಡರಷ್ಟು ದೊಡ್ಡ ಸಕ್ಕರೆಯನ್ನು ಹೊತ್ತು ಸಾಗುತ್ತಿದ್ದವು. ಕೆಲ ಸಮಯ ಇರುವೆಗಳ ಓಡಾಟವನ್ನು ಗಮನಿಸುತ್ತಾ ನಿಂತವಳು, ಅವುಗಳ ದಾರಿಗೆ ಅಡ್ಡಲಾಗಿ ಸಣ್ಣಕಡ್ಡಿ ಇಟ್ಟಳು. ಇರುವೆಗಳು ಕಡ್ಡಿಯನ್ನು ಹತ್ತಿಳಿದು ಮುಂದೆ ಸಾಗಿದವು. ಅವುಗಳ ನಡೆಗೆ ಅಚ್ಚರಿಗೊಂಡವಳು ಅಂಗೈ ಗಾತ್ರದ ಕಲ್ಲೊಂದನ್ನು ಅವುಗಳ ದಾರಿಗೆ ಇಟ್ಟಳು. ಪಾಪದ ಇರುವೆಗಳು ತಮ್ಮ ಬೆನ್ನಿನ ಮೇಲಿದ್ದ ಭಾರದೊಟ್ಟಿಗೆ ಬಲುಶ್ರಮದಿಂದ ಆ ಕಲ್ಲನ್ನು ಏರಿಳಿದು ನಡೆಯನ್ನು ಮುಂದುವರಿಸಿದವು. ಅವರನ್ನು ತಡೆಯಲೇಬೇಕು ಎಂದುಕೊಂಡ ಪುಟಾಣಿ, ಅವುಗಳ ದಾರಿಗೆ ಅಡ್ಡವಾಗಿ ಕುಳಿತುಬಿಟ್ಟಳು. ಅವಳನ್ನು ದಿಟ್ಟಿಸಿ ನೋಡಿದ ಇರುವೆಗಳ ನಾಯಕ ‘ಪುಟಾಣಿ, ಭಾರ ಹೊತ್ತುಕೊಂಡು ಹೋಗ್ತಾ ಇರುವ ನಮ್ಮ ದಾರಿಯನ್ನು ಯಾಕೆ ತಡೆಯುತ್ತಿದ್ದೀಯ?’ ಗದರಿದ.
‘ನೀವೆಲ್ಲಾಯಾಕೆ ಇಷ್ಟು ಕಷ್ಟಪಡಬೇಕು? ಗಾಳಿ-ಮಳೆ-ಬಿಸಿಲಿದ್ದರೂ ವಿಶ್ರಾಂತಿ ಪಡೆಯದೆ ಓಡಾಡುತ್ತೀರಿ. ಇನ್ನು ಮುಂದೆ ನೀವೆಲ್ಲಾಆರಾಮವಾಗಿ ಗೂಡಲ್ಲೇ ಇರಿ. ನಿಮಗೆ ಬೇಕಾದ ಊಟವನ್ನು ಗೂಡಿನ ಹತ್ತಿರ ತಂದುಕೊಡ್ತೀನಿ’ ಅಕ್ಕರೆಯಿಂದ ಹೇಳಿದಳು. ‘ಹಾಗೆಲ್ಲಾಯಾರಾದರೂ ಊಟ ತಂದುಕೊಡಲಿ ಅಂತ ಸುಮ್ಮನೆ ಕುಳಿತುಕೊಳ್ಳಬಾರದು. ನಮ್ಮ ಅವಶ್ಯಕತೆಗಳನ್ನು ನಾವೇ ನೋಡಿಕೊಂಡರೆ ಮಾತ್ರ ಆರೋಗ್ಯ ಸರಿಯಾಗಿರುತ್ತದೆ. ನಮ್ಮ ಶರೀರದಲ್ಲಿಉತ್ಪತ್ತಿಯಾಗುವ ರಾಸಾಯನಿಕಗಳ ಅವಶ್ಯಕತೆ ಮುಖ್ಯ. ನಾವು ಕುಳಿತಲ್ಲೇ ಕುಳಿತರೆ, ಆ ರಾಸಾಯನಿಕಗಳು ಉತ್ಪತ್ತಿ ನಿಲ್ಲಿಸಿಬಿಡುತ್ತವೆ. ಆಗ ನಾವು ಇದ್ದರೂ ಪ್ರಯೋಜನವಿರಲ್ಲ’ ನಾಯಕ ಹೇಳಿದ.

‘ಅದೆಂತಹ ರಾಸಾಯನಿಕ ಗಳು? ಅವುಗಳಿಂದ ಏನು ಪ್ರಯೋಜನ?’ ಕುತೂಹಲದಿಂದ ಪ್ರಶ್ನಿಸಿದಳು. ತನ್ನ ಬೆನ್ನ ಮೇಲಿದ್ದ ಸಕ್ಕರೆಯನ್ನು ಕೆಳಗಿಟ್ಟು, ‘ನೋಡು ನಾವೀಗ ಸಾಲುಸಾಲಾಗಿ ಹೋಗ್ತಾ ಇದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮ ಶರೀರದಲ್ಲಿಉತ್ಪತ್ತಿಯಾಗುವ ಫೆರಮೋನ್ ಎನ್ನುವ ರಾಸಾಯನಿಕ. ಆಹಾರವನ್ನು ಹುಡುಕಲು ಹೊರಟ ನಮ್ಮಲ್ಲಿಯಾರಿಗಾದರೂ ಎಲ್ಲಾದರೂ ಆಹಾರದ ತುಣುಕು ಸಿಕ್ಕರೆ ಆಹಾರದ ಸಣ್ಣ ಭಾಗವನ್ನು ತೆಗೆದುಕೊಂಡು ಗೂಡಿನ ಕಡೆಗೆ ಹೋಗುತ್ತೇವೆ. ಹಾಗೆ ಹೋಗುವಾಗ ನಮ್ಮ ಹೊಟ್ಟೆಯ ಭಾಗವನ್ನು ನೆಲಕ್ಕೆ ಉಜ್ಜುತ್ತಾ ‘ಟ್ರಯಲ್ ಫೆರಮೋನ್ ’ ರಾಸಾಯನಿಕವನ್ನು ಹಾದಿಯಲ್ಲಿಪಸರಿಸುತ್ತಾ ಸಾಗುತ್ತೇವೆ. ನಮ್ಮ ಗುಂಪಿನ ಉಳಿದ ಇರುವೆಗಳು ಈ ವಾಸನೆಯ ಹಾದಿಯನ್ನು ಹಿಡಿದು ಆಹಾರವಿರುವ ಜಾಗಕ್ಕೆ ತಲುಪುತ್ತವೆ. ಇದರಿಂದ ಆ ದಾರಿಯ ಗುರುತು ನಮಗೆ ಆರಾಮವಾಗಿ ಸಿಗುತ್ತದೆ. ಆಹಾರ ಖಾಲಿಯಾದ ಮೇಲೆ ನಾವು ರಾಸಾಯನಿಕ ಬಿಡುವುದನ್ನು ನಿಲ್ಲಿಸುತ್ತೇವೆ. ಉಳಿದಿದ್ದ ಫೆರಮೋನ್ ಕೆಲವೇ ನಿಮಿಷಗಳಲ್ಲಿನೈಸರ್ಗಿಕವಾಗಿ ಆವಿಯಾಗುತ್ತದೆ. ಇದರಿಂದ ನಮ್ಮ ಉಳಿದ ಸಂಗಡಿಗರು ಆ ಹಾದಿಯಲ್ಲಿಹೋಗಿ, ಸಮಯವನ್ನು ವ್ಯಥ್ ರ್ ಮಾಡುವುದು ತಪ್ಪುತ್ತದೆ. ಇರುವೆಗೆ ಅಪಾಯ ಬಂದರೆ ತಕ್ಷಣವೇ ಅಲರ್ಮ$್ಸ ಫೆರಮೋನ್ ಬಿಡುಗಡೆ ಮಾಡುತ್ತದೆ. ಇದರ ವಾಸನೆ ಅತ್ಯಲ್ಪ ಪ್ರಮಾಣದಲ್ಲಿದ್ದರೆ ಅದು ಎಚ್ಚರಿಕೆಯ ಸಂಕೇತ ಎಂದು ಇದ್ದ ಜಾಗದಲ್ಲೇ ಇದ್ದುಬಿಡುತ್ತೇವೆ ಅಥವಾ ಅಲ್ಲಿಂದ ಓಡಿ ಹೋಗುತ್ತೇವೆ. ವಾಸನೆ ತೀವ್ರವಾಗಿದ್ದರೆ ಅದು ಆಕ್ರೋಶವನ್ನು ಉಂಟುಮಾಡುತ್ತದೆ. ಆಗ ನಮಗೆ ತೊಂದರೆ ಉಂಟುಮಾಡಲು ಮುಂದಾಗಿರುವ ಪ್ರಾಣಿಯ ಮೇಲೆ ತಕ್ಷಣ ದಾಳಿ ಮಾಡಿ ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ.

ಪ್ರತಿಯೊಂದು ಇರುವೆ ಗೂಡು ತನ್ನದೇ ಆದ ವಿಶಿಷ್ಟ ರಾಸಾಯನಿಕ ಮಿಶ್ರಣದ ವಾಸನೆಯನ್ನು ಹೊಂದಿರುತ್ತದೆ. ಎರಡು ಇರುವೆಗಳು ಎದುರಾದರೆ ಆ ರಾಸಾಯನಿಕ ಮಿಶ್ರಣವು ಹೊಂದಾಣಿಕೆಯಾದರೆ ಮುಂದೆ ಸಾಗುತ್ತೇವೆ. ಅದೇ ವಾಸನೆ ಬೇರೆಯದೇ ಆಗದಿದ್ದರೆ ಅವು ಒಂದೇ ತಳಿಯ ಇರುವೆಗಳಾಗಿದ್ದರೂ ಸಹ ಆ ಅಪರಿಚಿತ ಇರುವೆಯ ಮೇಲೆ ದಾಳಿ ಮಾಡುತ್ತೇವೆ. ಇದು ನಮ್ಮ ರಕ್ಷಣಾಕ್ರಮ. ಇಷ್ಟೆಲ್ಲಾಸಾಧ್ಯವಾಗುವುದು ನಾವು ನಿರಂತರವಾಗಿ ಓಡಾಡುವಾಗ ಮಾತ್ರ ಎಂದು ತಮ್ಮ ಶರೀರದ ವಿಷಯ ತಿಳಿಸಿದ ನಾಯಕ ಇರುವೆ. ‘ಅಬ್ಬಾ, ನಿಮ್ಮ ಶರೀರ ಇಷ್ಟು ಪುಟ್ಟದಾದರೂ ಎಷ್ಟೊಂದು ಕೆಲಸವನ್ನು ಮಾಡುತ್ತದೆ! ಇನ್ನು ನಿಮಗೆ ತೊಂದರೆ ಕೊಡುವುದಿಲ್ಲ. ನೀವು ಆರಾಮವಾಗಿ ನಿಮ್ಮ ಕೆಲಸ ಮಾಡಿ. ನನ್ನ ಸಹಾಯ ಬೇಕಾದರೆ ಕೇಳಿ’ ಎಂದು ಇರುವೆಗಳಿಗೆ ಮುಂದೆ ಸಾಗಲು ದಾರಿಬಿಟ್ಟಳು.

ರಮ್ಯಾ ಎಸ್ .