8,000 ಪಿಲಾಟೆಲಿ ಪಾಸ್ ಪೋರ್ಟ್ ಬಿಕರಿ

Contributed by: punyavathi.hp@timesgroup.com|Vijaya Karnataka•
100 tourist spots of the state 8000 philately passports honored
*ರಾಜ್ಯದ 100 ಪ್ರವಾಸಿ ತಾಣಗಳ ಸಂಕ್ಷಿಪ್ತ ವಿವರ

ವಿಕ ಸುದ್ದಿಲೋಕ ಬೆಂಗಳೂರು
ಕರ್ನಾಟಕ ಅಂಚೆ ವೃತ್ತವು ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ‘ಪಿಲಾಟೆಲಿ ಪಾಸ್ ಪೋರ್ಟ್ ’ ಮಾರಾಟಕ್ಕೆ ಯುವ ಗ್ರಾಹಕರಿಂದ ಹೆಚ್ಚು ಬೇಡಿಕೆ ಉಂಟಾಗಿದ್ದು, ಶನಿವಾರ ಮತ್ತು ಭಾನುವಾರ ಜಿಪಿಒ ಸೇರಿದಂತೆ ರಾಜ್ಯಾದ್ಯಂತ 8 ಸಾವಿರ ಫಿಲಾಟೆಲಿ ಪಾಸ್ ಪೋರ್ಟ್ ಪುಸ್ತಿಕೆಗಳು ಬಿಕರಿಯಾಗಿವೆ.

ಪಾಸ್ ಪೋರ್ಟ್ ಹೋಲುವ ಈ ಚಿಕ್ಕ ಪುಸ್ತಿಕೆ ರಾಜ್ಯದ 100 ಪ್ರವಾಸಿ ತಾಣಗಳ ಬಗ್ಗೆ ಸಂಕ್ಷಿಪ್ತ ವಿವರ ಒಳಗೊಂಡಿದೆ. ಈ ಪುಸ್ತಿಕೆಗಳನ್ನು ಖರೀದಿಸಿದ ಗ್ರಾಹಕರು 100 ದಿನದಲ್ಲಿನೂರು ಸ್ಥಳಗಳನ್ನು ವೀಕ್ಷಿಸಿ, ಆಯಾ ಸ್ಥಳದ ಅಂಚೆ ಇಲಾಖೆಯ ಶಾಖೆಗಳಿಗೆ ಭೇಟಿ ನೀಡಿ ಅಲ್ಲಿಒಂದು ಅಂಚೆ ಚೀಟಿ ಖರೀದಿಸಿದರೆ ಆ ಭಾಗದ ಐತಿಹಾಸಿಕ ತಾಣದ ಚಿತ್ರಿತ ಮುದ್ರೆ ಹಾಕಿಕೊಡುವರು. ದಿನಾಂಕವೂ ನಮೂದಾಗಲಿದೆ. ಪುಸ್ತಿಕೆಯಲ್ಲಿರುವ ಎಲ್ಲಾಸ್ಥಳಗಳನ್ನು ನಿಗದಿತ ಅವಧಿಯೊಳಗೆ ಪೂರೈಸಿದರೆ, ಅಂತಹವರಿಗೆ ಸನ್ಮಾನವೂ ಇರಲಿದೆ.

‘‘ಬೆಂಗಳೂರಿನ ಜಿಪಿಒ, ಮೈಸೂರು, ಬೆಳಗಾವಿ, ಮಂಗಳೂರು ಸೇರಿದಂತೆ ಆಯ್ದ ಪ್ರಮುಖ ಅಂಚೆ ಕಚೇರಿಗಳಲ್ಲಿಫಿಲಾಟೆಲಿ ಪಾಸ್ ಪೋರ್ಟ್ ಗಳನ್ನು ಮಾರಾಟ ಮಾಡಲಾಯಿತು. ಇದು ಮೂರನೇ ಆವೃತ್ತಿಯ ಕಾರ್ಯಕ್ರಮವಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎರಡು ದಿನಗಳಲ್ಲಿ8 ಸಾವಿರ ಫಿಲಾಟೆಲಿ ಪಾಸ್ ಪೋರ್ಟ್ ಗಳು ಮಾರಾಟವಾಗಿವೆ. ಮುಂದಿನ ವರ್ಷ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯಲ್ಲಿವಿತರಿಸಲಾಗುವುದು,’’ ಎಂದು ಕರ್ನಾಟಕ ಅಂಚೆ ವೃತ್ತದ ನಿರ್ದೇಶಕ ಸಂದೇಶ್ ಮಹದೇವಪ್ಪ ತಿಳಿಸಿದರು.

‘‘ಇದೊಂದು ಪ್ರವಾಸ ಕೋಶವಾಗಿದ್ದು, ಇದನ್ನು ಖರೀದಿಸಿದವರು ರಾಜ್ಯವನ್ನು ಸುತ್ತಬೇಕು. ಇಲ್ಲದಿದ್ದರೆ ಇದರ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಪ್ರಯಾಣ ದಾಖಲೆ (ಟ್ರಾವೆಲ್ ಡಾಕ್ಯುಮೆಂಟರಿ)ಯೊಂದಿಗೆ ಭಾವನಾತ್ಮಕ ಲೋಕಕ್ಕೆ ಕೊಂಡೊಯ್ಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ,’’ ಎಂದು ಅವರು ತಿಳಿಸಿದರು.

ಓದಲೇ ಬೇಕಾದ ಸುದ್ದಿ