ಜಿಲ್ಲಾಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗಲು ಜಿಲ್ಲಾವಾರು ಉಸ್ತುವಾರಿ ನೇಮಿಸಿ ಚುನಾವಣಾ ನಿರ್ವಹಣಾ ಸಮಿತಿ ರಚಿಸಲು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಿರ್ಧರಿಸಿದೆ.ರಾಜ್ಯ ಬಿಜೆಪಿಯ ನೂತನ ಸಹ ಉಸ್ತುವಾರಿ ಕಾಸಂ ವೆಂಕಟೇಶ್ವರಲು ಸಮ್ಮುಖ ಭಾನುವಾರ ನಡೆದ ಸಭೆಯಲ್ಲಿಸಂಘಟನಾತ್ಮಕವಾಗಿ ಹಲವು ವಿಚಾರ ಚರ್ಚಿಸಲಾಯಿತು. ಈ ಜವಾಬ್ದಾರಿ ಸಿಕ್ಕಿದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ ಕಾಸಂ ಇಲ್ಲಿನ ನಾಯಕರೊಂದಿಗೆ ಪರಿಚಯಾತ್ಮಕ ಮಾತುಕತೆ ನಡೆಸಿದರು. ಕೋರ್ ಕಮಿಟಿ ನಂತರ ಪದಾಧಿಕಾರಿಗಳ ಸಭೆಯನ್ನೂ ನಡೆಸಲಾಯಿತು.
‘‘ಜಿಲ್ಲಾ, ತಾಲೂಕು ಪಂಚಾಯಿತಿ ಮೀಸಲು ಪಟ್ಟಿಯಲ್ಲಿಕೆಲವು ಗೊಂದಲ ಕಂಡು ಬಂದಿವೆ. ಕೆಲ ನಿರ್ಧಾರಗಳು ಆಡಳಿತ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿವೆ ಎಂಬ ಆತಂಕವಿದೆ. ಆದರೆ, ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಿದೆ. ಪ್ರತಿ ಜಿಲ್ಲೆಗೂ ಉಸ್ತುವಾರಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಯನ್ನು ತಕ್ಷಣವೇ ರಚಿಸುವ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿತೀರ್ಮಾನಿಸಲಾಗಿದೆ,’’ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.
ಹೊಸ ಉಸ್ತುವಾರಿಗಳು ಜವಾಬ್ದಾರಿ ವಹಿಸಿಕೊಂಡಿದ್ದರಿಂದ ಹಾಲಿ ಕೋರ್ ಕಮಿಟಿಯನ್ನು ಮುಂದುವರಿಸಬೇಕೇ ಅಥವಾ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿಕೊಳ್ಳಬೇಕೇ ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನಿರ್ಧಾರ ಕೈಗೊಳ್ಳುತ್ತಾರೆ,’’ ಎಂದರು.
ಜೆಡಿಎಸ್ ನೊಂದಿಗೆ ಹೆಜ್ಜೆ
ಜೆಡಿಎಸ್ ನೊಂದಿಗೆ ಮೈತ್ರಿಧರ್ಮ ಪಾಲನೆ ಬಗ್ಗೆಯೂ ಪ್ರಸ್ತಾಪವಾಯಿತು. ಮೇಲ್ಮನೆಯ ಶಿಕ್ಷಕ-ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿಒಗ್ಗಟ್ಟಿನಿಂದ ಕೆಲಸ ಮಾಡಿ ಎನ್ ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಬಗ್ಗೆ ಚರ್ಚೆಯಾಯಿತು. ಹಿರಿಯೂರು ಕ್ಷೇತ್ರದ ಉಪ ಚುನಾವಣೆ ಸಂಬಂಧ ಜೆಡಿಎಸ್ ನೊಂದಿಗೆ ಚರ್ಚಿಸಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳಬೇಕು ಎಂಬ ನಿಲುವಿಗೂ ಬರಲಾಯಿತು. ಈ ವಿಚಾರಕ್ಕೆ ಪ್ರತಿಕ್ರಿಸಿದ ವಿಜಯೇಂದ್ರ, ‘‘ಯಾವಾಗ ಬೇಕಾದರೂ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈತ್ರಿಯ ಸಮನ್ವಯದೊಂದಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಕೋರ್ ಕಮಿಟಿ ಸಭೆಯಲ್ಲಿಚರ್ಚಿಸಲಾಗಿದೆ,’’ ಎಂದರು.
ಎಫ್ ಐಆರ್ ಹಾಕಿದ್ರೆ ಹೋರಾಟ
‘‘ಎಸ್ ಐಆರ್ ಫಾರಂ-7 ವಿಚಾರದಲ್ಲಿಕಾಂಗ್ರೆಸ್ ಸರಕಾರ ಗೊಂದಲ ಸೃಷ್ಟಿಸುತ್ತಿದೆ. ನಿಯಮಾನುಸಾರ ಫಾರಂ-7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ ಐಆರ್ ದಾಖಲಿಸುವ ಮೂಲಕ ಸರಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ವಿಚಾರದಲ್ಲಿಕೋರ್ಟ್ ಕೂಡ ಸರಕಾರಕ್ಕೆ ಚಾಟಿ ಬೀಸಿದೆ. ಇಷ್ಟಾದರೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ ಐಆರ್ ದಾಖಲಿಸುವುದನ್ನು ಮುಂದುವರಿಸಿದರೆ ಪಕ್ಷ ಸುಮ್ಮನೆ ಕೂರುವುದಿಲ್ಲ. ಸಂಬಂಧಪಟ್ಟ ಠಾಣೆಗಳಿಗೆ ಹಾಗೂ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗಳಿಗೆ ಮುತ್ತಿಗೆ ಹಾಕುವ ನಿರ್ಧಾರವನ್ನು ಕೋರ್ ಕಮಿಟಿ ಕೈಗೊಂಡಿದೆ,’’ ಎಂದು ತಿಳಿಸಿದರು.
‘‘ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ ನೀಡುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಮುನ್ಸಿಪಲ್ ಕಮಿಷನರ್ ಗಳಿಗೆ ನೀಡಿರುವ ರಾಜ್ಯ ಸರಕಾರದ ಕ್ರಮ ಸರಿಯಲ್ಲ. ಇಂತಹ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ತಹಸೀಲ್ದಾರ್ ಮತ್ತು ಅವರ ಮೇಲಿನ ಹಂತದ ಅಧಿಕಾರಿಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಈ ಸಂಬಂಧ ಸರಕಾರಕ್ಕೆ ಪತ್ರ ಬರೆಯುವುದರ ಜೊತೆಗೆ ಚುನಾವಣಾ ಆಯೋಗದ ಗಮನಕ್ಕೂ ತರಲು ಕೋರ್ ಕಮಿಟಿ ಸಭೆಯಲ್ಲಿಚರ್ಚಿಸಲಾಗಿದೆ,’’ ಎಂದರು.
‘‘ಕೆಪಿಎಸ್ ಸಿ ನೇಮಕಾತಿ ವಿಚಾರದಲ್ಲಿಬಿಜೆಪಿ ನಿಲುವು ಸ್ಪಷ್ಟವಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿಅಕ್ರಮ ನಡೆದಿದ್ದರೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಯಾಗಬೇಕು. ತಪ್ಪು ಮಾಡಿದವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,’’ ಎಂದು ಆಗ್ರಹಿಸಿದರು.
ಮೀಸಲು ಗೊಂದಲ ನಿವಾರಿಸಿ
ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ವಿಚಾರದಲ್ಲಿಮೀಸಲು ಗೊಂದಲ ನಿವಾರಿಸಬೇಕು. ಚುನಾವಣೆ ಮುಂದೂಡುವ ಪ್ರಯತ್ನವನ್ನು ಸರಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ .ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ .ಅಶೋಕ್ , ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್ .ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಸಿ.ಟಿ.ರವಿ, ಮುಖಂಡರಾದ ನಳಿನ್ ಕುಮಾರ್ ಕಟೀಲ್ , ನಿರ್ಮಲ್ ಕುಮಾರ್ ಸುರಾಣಾ ಸಭೆಯಲ್ಲಿದ್ದರು.