ವಿಕ ಸುದ್ದಿಲೋಕ ಮಂಗಳೂರುಕಂಕನಾಡಿ ಹೂವಿನ ಮಾರುಕಟ್ಟೆ ಎದುರಿನ ಮುಖ್ಯ ರಸ್ತೆಯಲ್ಲಿರುವ ಗುಂಡಿಗೆ ಶನಿವಾರ ಸ್ಕೂಟರ್ ಸವಾರೆ ಯುವತಿ ಬಿದ್ದಿದ್ದು, ಹಿಂಬದಿ ಬರುತ್ತಿದ್ದ ಕಾರು ಸಮಯಪ್ರಜ್ಞೆಯಿಂದ ತಕ್ಷಣ ಬ್ರೇಕ್ ಹಾಕಿದ್ದರಿಂದ ಭಾರಿ ದುರಂತವೊಂದು ಅದೃಷ್ಟವಶಾತ್ ತಪ್ಪಿ ಹೋಗಿದೆ.
ಮುಖ್ಯ ಕಾಂಕ್ರಿಟ್ ರಸ್ತೆ ಮಧ್ಯೆ ಸ್ವಲ್ಪ ಭಾಗ ಹಳೆಯ ಹೊಂಡಕ್ಕೆ ಇಂಟರ್ ಲಾಕ್ ಅಳವಡಿಸಿದ್ದು, ಅದು ಭಾಗಶಃ ಎದ್ದು ಹೋಗಿದೆ. ಕಂಕನಾಡಿ- ಪಂಪ್ ವೆಲ್ ನಡುವಿನ ಒಂದು ಬದಿಯ ಕಾಂಕ್ರಿಟ್ ಕಾಮಗಾರಿ ಇನ್ನೂ ಮುಗಿಯದೆ, ಏಕಮುಖ ಸಂಚಾರ ಇರುವುದರಿಂದ ಹೂವಿನ ಮಾರುಕಟ್ಟೆ ಎದುರಿನ ರಸ್ತೆಯಲ್ಲಿವಾಹನ ದಟ್ಟಣೆ ಹೆಚ್ಚಿದೆ. ಹಲವು ಸಮಯವಾದರೂ ಗುಂಡಿ ಮುಚ್ಚದೆ ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ.
ಒಂದು ಕಡೆ ಕಂಕನಾಡಿ ಮಾರುಕಟ್ಟೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದರ ಎದುರಿನ ಸುಮಾರು 200 ಮೀ. ಬಸ್ ಬೇ ನಿರ್ಮಾಣ ಕಾಮಗಾರಿ ಒಂದೂವರೆ ವರ್ಷವಾದರೂ ಮುಗಿಯುತ್ತಿಲ್ಲ. ತಿಂಗಳಿಗೊಮ್ಮೆ ಕಾರ್ಮಿಕರು ಒಂದೊಂದೇ ಕೆಲಸ ಮಾಡಿ ಹೋಗುತ್ತಾರೆ. ಕಾಮಗಾರಿಗೆ ತಂದು ಹಾಕುವ ಮರಳು, ಜೆಲ್ಲಿಹುಡಿಯನ್ನು ಬೀದಿ ನಾಯಿಗಳ ಮಲಗುವ ಜಾಗವಾಗಿ ಧೂಳಿನಿಂದ ಸಂಚಾರ ಕಷ್ಟವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
‘‘ಪುತ್ತೂರು, ಉಳ್ಳಾಲ ಕಡೆಯಿಂದ ಬರುವ ಎಲ್ಲಬಸ್ ಗಳೂ ಈ ಮುಖ್ಯ ರಸ್ತೆ ಮೂಲವೇ ಸಂಚರಿಸುತ್ತಿವೆ. ಕೆಲವು ಸರ್ವಿಸ್ ಹಾಗೂ ಸಿಟಿ ಬಸ್ ಗಳನ್ನು ಇಲ್ಲಿರಸ್ತೆ ಮಧ್ಯೆ ಅರ್ಧರ್ಧ ಗಂಟೆ ನಿಲ್ಲಿಸಲಾಗುತ್ತದೆ. ಕೆಲವು ಈ ಬಸ್ ಗಳಲ್ಲಿನಿದ್ದೆ ಮಾಡುತ್ತಿರುತ್ತಾರೆ. ಇದರ ಮಧ್ಯೆ ಸಾಗುವ ದ್ವಿಚಕ್ರ ವಾಹನ ಸವಾರರು ಹೊಂಡಕ್ಕೆ ಬೀಳುತ್ತಿದ್ದಾರೆ. ಅಧಿಕಾರಿ, ಎಂಜಿನಿಯರ್ ಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ’’ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.