ಬನ್ನಿ ವಿನಿಮಯ: ವಿಜಯದಶಮಿ ಸಂಭ್ರಮ

Contributed by: saleem.balabatti@timesofindia.com|Vijaya Karnataka•
banni vinimaya celebration of vijayadashami festival
ಬನ್ನಿ ವಿನಿಮಯ : ವಿಜಯದಶಮಿ ಸಂಭ್ರಮ

ವಿಕ ಸುದ್ದಿಲೋಕ ಗದಗ
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಿರಿಯರು-ಕಿರಿಯರೆನ್ನದೆ ಪರಸ್ಪರ ಬನ್ನಿ ಪತ್ರಿ ವಿನಿಮಯ ಮಾಡಿಕೊಂಡು ವಿಜಯದಶಮಿ ಹಬ್ಬವನ್ನು ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಗರದ ಹಳೇ ಸರಾಫ್ ಬಜಾರ್ ನ ಜಗದಂಬಾ ದೇವಸ್ಥಾನ ಹಾಗೂ ತುಳಜಾಭವಾನಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿದಸರಾ ಉತ್ಸವ ಸಮಿತಿ, ಮಹಿಳಾ ಮಂಡಳ ಹಾಗೂ ತರುಣ ಸಂಘದ ವತಿಯಿಂದ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ನವರಾತ್ರಿ ಆರಂಭದಿಂದಲೇ ನಸುಕಿನಜಾವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕುತ್ತಿದ್ದ ಮಹಿಳೆಯರು, ವಿಜಯದಶಮಿಯಂದು ವಿಶೇಷ ಪೂಜೆ ನೆರವೇರಿಸಿ ಮಹಿಳೆಯರಿಗೆ ಉಡಿ ತುಂಬಿ ಹರಸಿದರು. ಒಂಬತ್ತು ದಿನಗಳ ಕಾಲ ದೇವಿಯ ಸನ್ನಿಧಿಯಲ್ಲಿನಡೆದ ಆದಿಶಕ್ತಿಯ ಕುರಿತಾದ ಪುರಾಣ ಪ್ರವಚನಗಳು ಮಂಗಲಗೊಂಡವು.

ಬಂಗಾರದಂಥ ಜೀವನದ ಹಾರೈಕೆ: ತೋಂಟದಾರ್ಯ ಮಠದ ಆವರಣ, ಶಂಕರಲಿಂಗ ದೇವಸ್ಥಾನ, ರಾಜೀವಗಾಂಧಿ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನ, ಬೆಟಗೇರಿಯ ಟರ್ನಲ್ ಪೇಟೆ, ರಂಗಪ್ಪಜ್ಜನ ಮಠದ ಮುಂಭಾಗ ಹಾಗೂ ನರಸಾಪುರ ಬಸ್ ನಿಲ್ದಾಣದ ಸಮೀಪ ಸೇರಿದಂತೆ ವಿವಿಧೆಡೆ ಬನ್ನಿ ಗಿಡಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬನ್ನಿ ಮುಡಿದ ಬಳಿಕ ‘ಬನ್ನಿ ತಗೊಂಡು ನಾವು-ನೀವು ಬಂಗಾರದಂಗ ಇರೋಣ’ ಎಂಬ ಹಾರೈಕೆಯೊಂದಿಗೆ ಸಾರ್ವಜನಿಕರು ಪರಸ್ಪರ ಬನ್ನಿ ಪತ್ರಿ ವಿನಿಮಯ ಮಾಡಿಕೊಂಡರು. ಕಿರಿಯರು ಹಿರಿಯರಿಗೆ ಬನ್ನಿ ನೀಡಿ ಆಶೀರ್ವಾದ ಪಡೆದರು. ಸ್ನೇಹಿತರು, ಬಂಧುಗಳು ಹಾಗೂ ನೆರೆಹೊರೆಯವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬದ ಸಂಭ್ರಮ ಹಂಚಿಕೊಂಡರು.

ದೇವಸ್ಥಾನಗಳಲ್ಲಿವಿಶೇಷ ಪೂಜೆ: ನಗರದ ಹಳೇ ಸರಾಫ್ ಬಜಾರ್ ನ ಜಗದಂಬಾ ದೇವಸ್ಥಾನ, ಗಂಗಾಪುರಪೇಟೆಯ ದುರ್ಗಾದೇವಿ ದೇವಸ್ಥಾನ, ಹುಡ್ಕೊ ಕಾಲೊನಿಯ ತುಳಜಾಭವಾನಿ ದೇವಸ್ಥಾನ, ಬೆಟಗೇರಿಯ ಅಂಬಾಭವಾನಿ ದೇವಸ್ಥಾನ, ಹಳೇ ಬನಶಂಕರಿ ದೇವಸ್ಥಾನ, ಶಿವಶರಣೆ ನೀಲಮ್ಮತಾಯಿ ಅಸುಂಡಿ ಅಧ್ಯಾತ್ಮ ವಿದ್ಯಾಶ್ರಮ, ರಾಜೀವಗಾಂಧಿ ನಗರದ ಶ್ರೀದೇವಿ ದೇವಸ್ಥಾನ, ಹರ್ಲಾಪುರದ ದಾನಮ್ಮದೇವಿ ದೇವಸ್ಥಾನ, ಡೋಹರ ಗಲ್ಲಿಯ ಶ್ರೀದೇವಿ ದೇವಸ್ಥಾನ, ಅಮರೇಶ್ವರ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನ, ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೇಶ್ವರಿ ಮಂದಿರ, ನರಸಾಪುರದ ಲಕ್ಕಮ್ಮದೇವಿ ದೇವಸ್ಥಾನ ಹಾಗೂ ಅಕ್ಕನ ಬಳಗದಲ್ಲಿಆದಿಶಕ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಭೀಷ್ಮ ಕೆರೆ ಆವರಣದಲ್ಲಿಪಲ್ಲಕ್ಕಿಗಳ ಸಮಾಗಮ: ಗದಗ-ಬೆಟಗೇರಿ ಅವಳಿ ನಗರದ ವಿವಿಧ ದೇವಸ್ಥಾನಗಳಲ್ಲಿಪ್ರತಿಷ್ಠಾಪಿಸಿದ್ದ ದೇವಿಯ ಮೂರ್ತಿಗಳನ್ನು ಹೊತ್ತ ಪಲ್ಲಕ್ಕಿಗಳು ಸಂಜೆ ಭೀಷ್ಮ ಕೆರೆ ಆವರಣದಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನದ ಬಯಲು ಪ್ರದೇಶಕ್ಕೆ ಆಗಮಿಸಿದವು. ಅಲ್ಲಿವೀರನಾರಾಯಣ ದೇವಸ್ಥಾನದ ಅರ್ಚಕರು ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಗಣ್ಯರು ಹಾಗೂ ಭಕ್ತರು ಬನ್ನಿ ಪತ್ರಿ ವಿನಿಮಯ ಮಾಡಿಕೊಂಡು ಪರಸ್ಪರ ಶುಭಾಶಯ ಕೋರಿದರು. ವಿವಿಧ ದೇವಾಲಯಗಳ ಪಲ್ಲಕ್ಕಿಗಳ ಸಮಾಗಮ ಹಾಗೂ ಬನ್ನಿ ವಿನಿಮಯ ಕಾರ್ಯಕ್ರಮವು ವಿಜಯದಶಮಿ ಸಂಭ್ರಮಕ್ಕೆ ಮೆರುಗು ನೀಡಿತು.

ಬಾಕ್ಸ್

ಆಯುಧ ಪೂಜೆ ಸಂಭ್ರಮ

ಗದಗ ಜಿಲ್ಲಾದ್ಯಂತ ಮಂಗಳವಾರ ಆಯುಧ ಪೂಜೆಯನ್ನು ಸಡಗರದಿಂದ ಆಚರಿಸಲಾಯಿತು. ನೇಕಾರರು ಮಗ್ಗಗಳಿಗೆ, ಮುದ್ರಣಕಾರರು ಮುದ್ರಣ ಯಂತ್ರಗಳಿಗೆ, ಪೀಠೋಪಕರಣ ತಯಾರಕರು ವೆಲ್ಡಿಂಗ್ ಯಂತ್ರಗಳಿಗೆ ಹಾಗೂ ವಿವಿಧ ಉದ್ಯಮಿಗಳು ತಾವು ಬಳಸುವ ವಾಹನಗಳು, ಯಂತ್ರೋಪಕರಣಗಳು ಮತ್ತು ಉಪಕರಣಗಳಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ಮನೆಗಳು, ಅಂಗಡಿಗಳು ಹಾಗೂ ಉದ್ಯಮಗಳಲ್ಲಿಯೂ ಆಯುಧ ಪೂಜೆಯ ಸಂಭ್ರಮ ಇತ್ತು.

ಫೋಟೊ: 21 ಜಿಡಿಜಿ 10, 10ಎ, 10ಬಿ, 10ಸಿ:

ಗದಗ ಬೆಟಗೇರಿ ಅವಳಿ ನಗರದಲ್ಲಿಬನ್ನಿ ವಿನಿಮಯ ಸಂಭ್ರಮ.

ಓದಲೇ ಬೇಕಾದ ಸುದ್ದಿ