ರಜನೀಕಾಂತ್

Contributed by: netravati.krishnamurthy@timesgroup.com|Vijaya Karnataka•
concept given by superstar rajinikanth for optimum health
ಚರ್ಚೆಗೊಳಗಾದ ರಜಿನಿ ಆಹಾರ ಸೂತ್ರ

ಬಿಳಿ ಆಹಾರ ದೂರವಿಡಿ ಎಂದ ಸೂಪರ್ ಸ್ಟಾರ್
----

75 ನೇ ವಯಸ್ಸಿನಲ್ಲಿಯೂ ಅಚ್ಚರಿಯ ಫಿಟ್ ನೆಸ್ ಮತ್ತು ಯಂಗ್ ಲುಕ್ ಕಾಯ್ದುಕೊಂಡಿರುವ ನಟ ರಜಿನೀಕಾಂತ್ ಅವರ ಆರೋಗ್ಯದ ಗುಟ್ಟು ಸದಾ ಚರ್ಚಿತ. ಅವರ ಇತ್ತೀಚಿನ ‘ ಜೈಲರ್ 2 ’ ಚಿತ್ರದ ಬಿಡುಗಡೆಯ ಬೆನ್ನಲ್ಲೇ ಸುಮಾರು ಎರಡು ದಶಕಗಳ ಹಿಂದೆ ಅವರು ನೀಡಿದ್ದ ಒಂದು ಅಚ್ಚರಿಯ ಆಹಾರ ಸಲಹೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

----

ಲವಲವಿಕೆ ಸುದ್ದಿಲೋಕ

--

ಸೂಪರ್ ಸ್ಟಾರ್ ರಜಿನೀಕಾಂತ್ ಕೇವಲ ತಮ್ಮ ಸ್ಟೈಲ್ ಮತ್ತು ನಟನೆಯಿಂದ ಮಾತ್ರವಲ್ಲದೇ ಫಿಟ್ನೆಸ್ ವಿಷಯದಲ್ಲೂಅನೇಕರಿಗೆ ಸ್ಫೂರ್ತಿ. ಅಕ್ಟೋಬರ್ 15ರಂದು ಬಿಡುಗಡೆಯಾದ ಅವರ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿದಾಖಲೆ ಸೃಷ್ಟಿಸುತ್ತಿದೆ. ಈ ನಡುವೆ ರಜಿನೀಕಾಂತ್ ಅವರ ಆಹಾರ ಪದ್ಧತಿ ಮುನ್ನೆಲೆಗೆ ಬಂದಿದ್ದು, ವಿಶೇಷವಾಗಿ ಸುಮಾರು ಎರಡು ದಶಕಗಳ ಹಿಂದೆ ಅವರು ಮಾತನಾಡಿದ್ದ ಒಂದು ಆಹಾರ ನಿಯಮ ಈಗ ಸೋಶಿಯಲ್ ಮೀಡಿಯಾದಲ್ಲಿಚರ್ಚೆಗೊಳಗಾಗಿದೆ. 40 ವರ್ಷ ದಾಟಿದವರು ಅನ್ನ, ಹಾಲು, ಮೊಸರು ಮತ್ತು ಸಕ್ಕರೆಯಂತಹ ಬಿಳಿ ಬಣ್ಣದ ಆಹಾರ ಪದಾರ್ಥಗಳಿಂದ ದೂರವಿರಬೇಕು ಎಂದು ಹೇಳಿದ್ದ ಅವರ ಮಾತು ನಿಜಕ್ಕೂ ಆರೋಗ್ಯಕರವೇ ಅಥವಾ ವೈಜ್ಞಾನಿಕವಾಗಿ ಇದು ಎಷ್ಟರ ಮಟ್ಟಿಗೆ ಸರಿ ಎಂಬುದರ ಬಗ್ಗೆಯೂ ಚರ್ಚೆಯಾಗುತ್ತಿದೆ.

2008ರಲ್ಲಿ‘ಕುಚೇಲನ್ ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿಮಾತನಾಡಿದ್ದ ಸೂಪರ್ ಸ್ಟಾರ್ , ಫಿಟ್ ಆಗಿರಲು ತಾವು ಅನುಸರಿಸುವ ಆಹಾರ ರಹಸ್ಯವನ್ನು ಹಂಚಿಕೊಂಡಿದ್ದರು. ಅನ್ನ, ಹಾಲು, ಮೊಸರು ಮತ್ತು ಉಪ್ಪು, ಸಕ್ಕರೆಯಂತಹ ಆಹಾರಗಳನ್ನು ‘ಬಿಳಿ ಆಹಾರ’ ಎಂದು ಕರೆದಿದ್ದ ಅವರು, 40 ವರ್ಷ ವಯಸ್ಸಾಗುವವರೆಗ ಏನು ಬೇಕಾದರೂ ತಿನ್ನಬಹುದು. ಆದರೆ ಅನಂತರ ಇಂತಹ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದಿದ್ದರು.

ಇತ್ತೀಚೆಗೆ ‘ಜೈಲರ್ 2’ ಚಿತ್ರದ ನಟಿ ಮಿರ್ನಾ ಮೆನನ್ ಅವರು ಸಂದರ್ಶನ ಒಂದರಲ್ಲಿರಜಿನೀಕಾಂತ್ ಅವರ ಆಹಾರ ಮತ್ತು ಫಿಟ್ನೆಸ್ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ‘ರಜಿನೀಕಾಂತ್ ಅವರು ಅತಿಯಾದ ಮಸಾಲೆ ಪದಾರ್ಥಗಳು, ಅನ್ನ, ಹಾಲು, ಮೊಸರು, ಸಕ್ಕರೆ ಮತ್ತು ಉಪ್ಪನ್ನು ಸೇವಿಸುವುದಿಲ್ಲ. ಅಲ್ಲದೆ, ಶೂಟಿಂಗ್ ಗೆ ಬರುವ ಮುನ್ನ ಅವರು ಈಜು ಮತ್ತು ಟ್ರೆಡ್ ಮಿಲ್ ವ್ಯಾಯಾಮಗಳನ್ನು ಮಾಡುತ್ತಾರೆ’ ಎಂದು ಹೇಳಿದ್ದಾರೆ.

ಅನ್ನ, ಹಾಲು ಮತ್ತು ಮೊಸರನ್ನು ಸಂಪೂರ್ಣವಾಗಿ ಬಿಡಬೇಕೇ?

ಆರೋಗ್ಯಕರ ಆಹಾರ ಪದ್ಧತಿಯ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಸಮತೋಲನ, ಮಿತ ಹಾಗೂ ವಿವಿಧತೆಯ ಮೇಲೆ ಒತ್ತು ನೀಡುತ್ತದೆ. ಸಕ್ಕರೆ ಮತ್ತು ಅತಿಯಾದ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಲು ಹಾಗೂ ಪೋಷಕಾಂಶಯುಕ್ತ ಧಾನ್ಯಗಳು, ತರಕಾರಿಗಳು, ಹಣ್ಣುಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಲು ಶಿಫಾರಸು ಮಾಡುತ್ತದೆ. ಉದಾಹರಣೆಗೆ, ಬಿಳಿ ಅನ್ನವು ಸಮತೋಲಿತ ಆಹಾರದ ಒಂದು ಭಾಗವಾಗಬಹುದು. ನಾವು ಸೇವಿಸುವ ಪ್ರಮಾಣ, ಅದರೊಂದಿಗೆ ಸೇವಿಸುವ ಇತರ ಪದಾರ್ಥಗಳು ಹಾಗೂ ವ್ಯಕ್ತಿಯ ಒಟ್ಟಾರೆ ಆಹಾರ ಪದ್ಧತಿ ಬಹಳ ಮುಖ್ಯವಾಗುತ್ತದೆ. ನಾರುಯುಕ್ತ ಧಾನ್ಯಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದೇ ಆದರೂ, ಪ್ರತಿಯೊಬ್ಬರೂ ಅನ್ನ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದರ್ಥವಲ್ಲ.

ಹಾಲು ಮತ್ತು ಮೊಸರು ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಅನ್ನು ಒದಗಿಸುತ್ತವೆ. ಲ್ಯಾಕ್ಟೋಸ್ ಅಲರ್ಜಿ ಇರುವವರು ಅಥವಾ ಹಾಲಿನ ಉತ್ಪನ್ನಗಳನ್ನು ಇಷ್ಟಪಡದವರು ಇತರ ಮೂಲಗಳಿಂದ ಈ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು. ಆದರೆ ಕೇವಲ ಹಾಲಿನ ಉತ್ಪನ್ನಗಳನ್ನು ಬಿಡುವುದರಿಂದ ಮಾತ್ರ ಆರೋಗ್ಯ ಸುಧಾರಿಸುತ್ತದೆ ಎಂದೇನಿಲ್ಲ.

ಉಪ್ಪು ಕೂಡ ಅತ್ಯವಶ್ಯಕ ಪೋಷಕಾಂಶವಾಗಿದೆ. ಆದರೆ ಇದರ ಅತಿಯಾದ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ವಯಸ್ಕರು ದಿನಕ್ಕೆ ಐದು ಗ್ರಾಂಗಳಿಗಿಂತ ಕಡಿಮೆ ಉಪ್ಪನ್ನು ಸೇವಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುತ್ತದೆ.

ಸಕ್ಕರೆಯ ವಿಷಯಕ್ಕೆ ಬಂದರೆ, ಸಂಸ್ಕರಿಸಿದ ಅಥವಾ ಹೆಚ್ಚುವರಿಯಾಗಿ ಸೇರಿಸುವ ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ. ದಿನನಿತ್ಯದ ಶಕ್ತಿಯ ಅಗತ್ಯತೆಯ ಶೇಕಡಾ 10ಕ್ಕಿಂತ ಕಡಿಮೆ ಮುಕ್ತ ಸಕ್ಕರೆಯನ್ನು ಸೇವಿಸುವುದು ಸೂಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

40 ವರ್ಷ ವಯಸ್ಸಿನ ನಂತರ ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸಬೇಕು ಎಂಬ ನಟ ರಜನೀಕಾಂತ್ ಅವರ ಮಾತುಗಳಲ್ಲಿಹುರುಳಿದೆ. ಆದರೂ ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ, ಈ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು ಮಿತವಾಗಿ ಸೇವಿಸುವುದು ಹೆಚ್ಚು ಪ್ರಾಯೋಗಿಕ ಮತ್ತು ಉತ್ತಮ ಮಾರ್ಗ.

ಓದಲೇ ಬೇಕಾದ ಸುದ್ದಿ