ಸೌತಡ್ಕ ದೇವಸ್ಥಾನದ ಜಮೀನು ಅತಿಕ್ರಮಣ ತೆರವಿಗೆ ಸಂರಕ್ಷಣಾ ವೇದಿಕೆ ಆಗ್ರಹ

Contributed by: prashantha.n17@gmail.com|Vijaya Karnataka•
sautadka temple land encroachment assault on women violence and demand from government officials
ವಿಕ ಸುದ್ದಿಲೋಕ ನೆಲ್ಯಾಡಿ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿನಡೆದ ಗಲಾಟೆ, ಹೊಡೆದಾಟ ಹಾಗೂ ಮಹಿಳೆಯರಿಗೆ ಹಲ್ಲೆಖಂಡನೀಯ. ಅಲ್ಲದೆ ದೇವಸ್ಥಾನದ ಬಳಕೆಗಾಗಿ ಕಾಯ್ದಿರಿಸಿರುವ ಜಮೀನಿನ ಅತಿಕ್ರಮಣ ತಕ್ಷಣ ತೆರವುಗೊಳಿಸಬೇಕು ಎಂದು ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಅಧ್ಯಕ್ಷ ಪ್ರಶಾಂತ ರೈ ಹೇಳಿದ್ದಾರೆ.
ಕೊಕ್ಕಡ ಗ್ರಾಮದಲ್ಲಿ1.29 ಎಕರೆ ಜಮೀನು ದೇವಸ್ಥಾನದ ಹೆಸರಿನಲ್ಲಿಯೇ ಪಹಣಿಯಾಗಿದ್ದು, ಅದೇ ಸರ್ವೆ ನಂಬರ್ ನ ಉಳಿದ 1.99 ಎಕರೆ ಜಮೀನನ್ನು 1993ರಲ್ಲಿಯೇ ಅಂದಿನ ಸಹಾಯಕ ಆಯುಕ್ತರು ದೇವಸ್ಥಾನದ ಬಳಕೆಗಾಗಿ ಕಾಯ್ದಿರಿಸಿದ್ದರು. ಆದರೆ, ಈ ಕಾಯ್ದಿರಿಸಿದ ಜಮೀನನ್ನು ಕಳೆದ 14-15 ವರ್ಷಗಳಿಂದ ಖಾಸಗಿ ಟ್ರಸ್ಟ್ ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡು, ಅಲ್ಲಿರುವ ಅಂಗಡಿಗಳನ್ನು ಬಾಡಿಗೆಗೆ ನೀಡಿ ಆದಾಯ ಪಡೆಯುತ್ತಿದೆ. ಈ ರೀತಿ ಬಾಡಿಗೆಗೆ ನೀಡಿರುವ ಅಂಗಡಿಗಳ ವ್ಯಾಪಾರಸ್ಥರ ನಡುವೆ ನಡೆದ ಗಲಾಟೆಯೇ ದೇವಸ್ಥಾನದ ಮುಂಭಾಗದ ಅಹಿತಕರ ಘಟನೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಕಾಯ್ದಿರಿಸಿದ ಜಮೀನಿನ ಅತಿಕ್ರಮಣದ ವಿಚಾರ ಒಂದೆಡೆಯಾದರೆ, ದೇವಸ್ಥಾನದ ಮುಂಭಾಗದಲ್ಲಿಯೇ ಮಹಿಳೆಯರಿಗೆ ಹಲ್ಲೆನಡೆಸಿ ಗಲಾಟೆ ಮಾಡಿರುವುದು ಖಂಡನೀಯ. ಈ ಘಟನೆಯಿಂದ ಭಕ್ತಾದಿಗಳಲ್ಲಿಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಧಾರ್ಮಿಕ ಕ್ಷೇತ್ರದ ಆವರಣದಲ್ಲಿಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

ಈ ದುರ್ಘಟನೆಗೆ ದೇವಸ್ಥಾನಕ್ಕೆ ಕಾಯ್ದಿರಿಸಿದ ಜಮೀನನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದೆ ಎನ್ನಲಾದ ಖಾಸಗಿ ಟ್ರಸ್ಟ್ ಹಾಗೂ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳದ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ. ಕಂದಾಯ ಇಲಾಖೆ ಕೂಡಲೇ ಕಾರ್ಯಪ್ರವೃತ್ತವಾಗಿ ದೇವಸ್ಥಾನದ ಬಳಕೆಗಾಗಿ ಕಾಯ್ದಿರಿಸಿರುವ ಜಮೀನಿನ ಅತಿಕ್ರಮಣ ತೆರವುಗೊಳಿಸಬೇಕು. ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಫೋಟೋ :21ಕೆಎನ್ ಪ್ರಶಾಂತ ರೈ

ಓದಲೇ ಬೇಕಾದ ಸುದ್ದಿ