ಅರ್ಜಿದಾರರಿಗೆ ಕೋರ್ಟ್ ಕಲಾಪದ ರೆಕಾರ್ಡಿಂಗ್ ಪಡೆಯುವ ಹಕ್ಕಿಲ್ಲ: ಹೈಕೋರ್ಟ್

Contributed by: srikanth.g@timesofindia.com|Vijaya Karnataka•
applicants do not have the right to obtain court proceedings recordings high court verdict
ಬೆಂಗಳೂರು: ನ್ಯಾಯಾಲಯದ ನೇರ ಕಲಾಪಗಳ ಸಂಗ್ರಹ (ಆರ್ಕೈವ್ ) ಮಾಡಲಾದ ಆಡಿಯೊ-ವಿಡಿಯೊ ದಾಖಲೆಗಳ ಪ್ರತಿಗಳನ್ನು ಪಡೆಯಲು ಅರ್ಜಿದಾರರಿಗೆ ಸ್ವಯಂಚಾಲಿತ ಹಕ್ಕಿಲ್ಲಎಂದು ಹೈಕೋರ್ಟ್ ತೀರ್ಪು ನೀಡಿದೆ.

ಕರ್ನಾಟಕ ನ್ಯಾಯಾಲಯಗಳ ಕಲಾಪಗಳ ನೇರ ಪ್ರಸಾರ ಮತ್ತು ರೆಕಾರ್ಡಿಂಗ್ ನಿಯಮಗಳು- 2021ರ ನಿಯಮ 8 ಮತ್ತು 10ರ ಪ್ರಕಾರ ನ್ಯಾಯಪೀಠವು ನಿರ್ದಿಷ್ಟವಾಗಿ ಆದೇಶಿಸದ ಹೊರತು ದಾಖಲೆಗಳ ಪ್ರತಿಗಳನ್ನು ಪಡೆಯುವ ಹಕ್ಕು ಅರ್ಜಿದಾರರಿಗೆ ಲಭ್ಯವಿಲ್ಲಎಂದು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಅಲ್ಲದೆ, ‘‘ನಿಯಮ 8 ಮತ್ತು ನಿಯಮ 10ರ ಸಂಯೋಜಿತ ಓದಿನಿಂದ, ನ್ಯಾಯಾಲಯವು ನಿರ್ದಿಷ್ಟವಾಗಿ ಆದೇಶಿಸದ ಹೊರತು, ಸದರಿ ರೆಕಾರ್ಡಿಂಗ್ ಪ್ರತಿಗಳನ್ನು ಕೋರುವ ಯಾವುದೇ ಹಕ್ಕನ್ನು ಅರ್ಜಿದಾರರಿಗೆ ಈ ನಿಯಮಗಳು ಒದಗಿಸುವುದಿಲ್ಲ,’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯದ ಮೇಲ್ಮನವಿ ವಿಚಾರಣೆಯ ರೆಕಾರ್ಡಿಂಗ್ ಪ್ರತಿ ನೀಡಲು ನಿರಾಕರಿಸಿದ ಹೈಕೋರ್ಟ್ ನ ಆಡಳಿತ ವಿಭಾಗದ ನಿರ್ಧಾರ ಪ್ರಶ್ನಿಸಿ 72 ವರ್ಷದ ಎ.ಸತ್ಯನಾರಾಯಣಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಪ್ರಕರಣದ ಬಗ್ಗೆ ಪರಿಶೀಲಿಸಿದ ನ್ಯಾಯಾಲಯ, 2021ರ ನಿಯಮಗಳ ನಿಯಮ 10(1)(ಜಿಜಿ) ಉಲ್ಲೇಖಿಸಿತು. ಅದರ ಪ್ರಕಾರ, ‘‘ಪೀಠವು ಬೇರೆ ರೀತಿಯಲ್ಲಿನಿರ್ದೇಶಿಸದ ಹೊರತು ಸಂಗ್ರಹ ದತ್ತಾಂಶವು ನ್ಯಾಯಾಲಯದ ಕಲಾಪಗಳ ಅಧಿಕೃತ ದಾಖಲೆಯಾಗುವುದಿಲ್ಲ. ಸಂಗ್ರಹ ಮಾಡಲಾದ ರೆಕಾರ್ಡಿಂಗ್ ಗಳ ಪ್ರತಿಗಳನ್ನು ಪಡೆಯಲು ಅರ್ಜಿದಾರರಿಗೆ ಜಾರಿಗೊಳಿಸಬಹುದಾದ ಯಾವುದೇ ಸ್ವತಂತ್ರ ಹಕ್ಕು ಇಲ್ಲ,’’ ಎಂದು ಹೇಳಿದೆ.

‘‘ಅರ್ಜಿದಾರರಲ್ಲಿಯಾವುದೇ ಹಕ್ಕು ನಿಹಿತವಾಗಿಲ್ಲದಿರುವುದರಿಂದ, ಪ್ರತಿಗಳನ್ನು ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿರುವುದನ್ನು ಅವರು ಪ್ರಶ್ನಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು.

....................................................

ಅರ್ಜಿದಾರರ ಪರ ವಕೀಲರು, ‘‘ನಿಯಮ 8(3)ರಡಿ ನ್ಯಾಯಾಲಯದ ವೆಬ್ ಸೈಟ್ ಅಥವಾ ಇತರ ಡಿಜಿಟಲ್ ವೇದಿಕೆಗಳಲ್ಲಿಅಪ್ ಲೋಡ್ ಮಾಡದ ರೆಕಾರ್ಡಿಂಗ್ ಗಳ ಪ್ರತಿಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಅಲ್ಲದೆ, ಆಡಳಿತ ವಿಭಾಗದ ನಿರ್ಧಾರವು ಸಂವಿಧಾನದ 14ನೇ ವಿಧಿಯಡಿ ಖಾತರಿಪಡಿಸಿರುವ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ’’ ಎಂದು ಆಕ್ಷೇಪಿಸಿದ್ದರು.

ಅಲ್ಲದೆ, ನಿಯಮ 8(3)ರಡಿ ಅಧಿಕಾರ ಚಲಾಯಿಸುವ ಸಂಬಂಧ ಸ್ಪಷ್ಟ ಮಾರ್ಗಸೂಚಿ ಅಥವಾ ಪ್ರಮಾಣಿತ ಕಾರ್ಯವಿಧಾನಗಳನ್ನು ರೂಪಿಸಿ ಪ್ರಕಟಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಅರ್ಜಿದಾರರು 2021ರ ನಿಯಮಗಳ ನಿಯಮ 8(3)ರಡಿ ಕಲಾಪಗಳ ರೆಕಾರ್ಡಿಂಗ್ ಗಳ ಪ್ರತಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮ 10(1)(ಜಿಜಿ) ಆಧರಿಸಿ ಹೈಕೋರ್ಟ್ ಆಡಳಿತ ವಿಭಾಗವು ಅವರ ಮನವಿಯನ್ನು ತಿರಸ್ಕರಿಸಿತ್ತು. ಸಂಗ್ರಹ ಮಾಡಲಾದ ದಾಖಲೆಗಳು ಪೀಠವು ನಿರ್ದಿಷ್ಟವಾಗಿ ನಿರ್ದೇಶಿಸದ ಹೊರತು ನ್ಯಾಯಾಲಯದ ಕಲಾಪಗಳ ಅಧಿಕೃತ ದಾಖಲೆಯ ಭಾಗವಾಗುವುದಿಲ್ಲಎಂದು ಆಡಳಿತ ವಿಭಾಗ ತಿಳಿಸಿತ್ತು. ಹಾಗಾಗಿ, ಅರ್ಜಿದಾರರು ಕೋರಿದ್ದ ದಾಖಲೆಗಳನ್ನು ಒದಗಿಸಲು ನಿರಾಕರಿಸಲಾಗಿತ್ತು. ಆ ನಿರ್ಧಾರದಿಂದ ಅಸಮಾಧಾನಗೊಂಡ ಅರ್ಜಿದಾರರು, ಆಡಳಿತ ವಿಭಾಗದ ಸಂವಹನ ರದ್ದುಗೊಳಿಸಿ ಸಂಗ್ರಹ ದಾಖಲೆ ಪಡೆಯಲು ಅವಕಾಶ ಅನುಮತಿಸುವಂತೆ ಹೈಕೋರ್ಟ್ ನ ಮೊರೆ ಹೋಗಿದ್ದರು.