ಅಕ್ಟೋಬರ್ 24, 1940ಕೈಗಾರಿಕಾ ಕ್ಷೇತ್ರದಲ್ಲಿನಡೆದ ಅತ್ಯಂತ ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳಲ್ಲಿವಾರಕ್ಕೆ 40 ಗಂಟೆಗಳ ಕೆಲಸದ ನಿಯಮ ಜಾರಿಗೆ ಬಂದುದ್ದು ಒಂದು. 1940ರ ಅಕ್ಟೋಬರ್ 24ರಂದು ಅಮೆರಿಕದಲ್ಲಿಜಾರಿಗೆ ಬಂದ ಈ ಕಾಯಿದೆಯು, ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ ಉದ್ಯೋಗ ಸೌಕರ್ಯಗಳ ಸುಧಾರಣೆಯಲ್ಲಿಹೊಸ ಶಕೆಯನ್ನು ಆರಂಭಿಸಿತು. ಇಂದಿನ ಆಧುನಿಕ ಕಾರ್ಪೊರೇಟ್ ಮತ್ತು ಕೈಗಾರಿಕಾ ಜಗತ್ತಿನಲ್ಲಿನಾವು ಕಾಣುವ ಐದು ದಿನಗಳ ಕೆಲಸ ಮತ್ತು ವಾರಾಂತ್ಯದ ರಜೆಗಳ ಪರಿಕಲ್ಪನೆಗೆ ಈ ಸುಧಾರಣೆಯೇ ಬಲವಾದ ಬಡಿಪಾಯವಾಗಿದೆ.
ಹತ್ತೊಂಬತ್ತನೇ ಶತಮಾನದ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿಕಾರ್ಮಿಕರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಕಾರ್ಮಿಕರು ದಿನಕ್ಕೆ 12ರಿಂದ 16 ಗಂಟೆಗಳ ಕಾಲ, ವಾರದಲ್ಲಿ6ರಿಂದ 7 ದಿನಗಳವರೆಗೆ ಶ್ರಮಿಸಬೇಕಾಗಿತ್ತು. ಇದು ಕಾರ್ಮಿಕರ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿತ್ತು. ಈ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಕಾರ್ಮಿಕ ಸಂಘಟನೆಗಳು, ದಿನಕ್ಕೆ 8 ಗಂಟೆಗಳ ಕೆಲಸ, 8 ಗಂಟೆಗಳ ಮನರಂಜನೆ ಹಾಗೂ 8 ಗಂಟೆಗಳ ವಿಶ್ರಾಂತಿ ಎಂಬ ತತ್ವವನ್ನು ಮುಂದಿಟ್ಟು ಸುದೀರ್ಘ ಹೋರಾಟ ನಡೆಸಿದವು.
ಇದರ ಫಲವಾಗಿ, 1938ರಲ್ಲಿಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ ವೆಲ್ಟ್ ಅವರ ಆಡಳಿತಾವಧಿಯಲ್ಲಿ‘ಫೇರ್ ಲೇಬರ್ ಸ್ಟ್ಯಾಂಡರ್ಡ್ಸ್ ಆ್ಯಕ್ಟ್’ ಅಂದರೆ ನ್ಯಾಯಯುತ ಕಾರ್ಮಿಕ ಮಾನದಂಡಗಳ ಕಾಯಿದೆಯನ್ನು ಜಾರಿಗೆ ತರಲಾಯಿತು. ಇದು ಆರಂಭದಲ್ಲಿವಾರಕ್ಕೆ 44 ಗಂಟೆಗಳ ಕೆಲಸದ ಮಿತಿಯನ್ನು ನಿಗದಿಪಡಿಸಿತು. ತದನಂತರ, 1940ರ ಅಕ್ಟೋಬರ್ 24ರಿಂದ ಈ ಮಿತಿಯನ್ನು ಅಧಿಕೃತವಾಗಿ ವಾರಕ್ಕೆ 40 ಗಂಟೆಗಳಿಗೆ ಇಳಿಸಲಾಯಿತು. ಈ ನಿಯಮದ ಪ್ರಕಾರ, ಒಬ್ಬ ಉದ್ಯೋಗಿ ವಾರದಲ್ಲಿ40 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದರೆ, ಆ ಹೆಚ್ಚುವರಿ ಸಮಯಕ್ಕೆ ಸಾಮಾನ್ಯ ವೇತನಕ್ಕಿಂತ 1.5 ಪಟ್ಟು ಹೆಚ್ಚಿನ ಓವರ್ ಟೈಮ್ ವೇತನವನ್ನು ನೀಡುವುದು ಕಡ್ಡಾಯವಾಯಿತು.
ಈ ಕಾಯಿದೆ ಕೇವಲ ಕೆಲಸದ ಅವಧಿಯನ್ನು ಮಾತ್ರ ನಿಗದಿಪಡಿಸಲಿಲ್ಲ. ಇದರೊಂದಿಗೆ ಕನಿಷ್ಠ ವೇತನದ ನಿಯಮಗಳನ್ನು ಜಾರಿಗೆ ತರಲಾಯಿತು ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ಕಾನೂನುಬಾಹಿರಗೊಳಿಸಲಾಯಿತು. ಕೆಲಸದ ಅವಧಿಯನ್ನು ಕಡಿಮೆ ಮಾಡುವುದರಿಂದ ಉತ್ಪಾದಕತೆ ಕಡಿಮೆಯಾಗುವುದಿಲ್ಲ, ಬದಲಿಗೆ ಉದ್ಯೋಗಿಗಳ ಕಾರ್ಯಕ್ಷಮತೆ ಮತ್ತು ಉತ್ಸಾಹ ಹೆಚ್ಚಾಗುತ್ತದೆ ಎಂಬುದನ್ನು ಈ ಬದಲಾವಣೆಯು ಜಗತ್ತಿಗೆ ನಿರೂಪಿಸಿತು. ಉದ್ಯೋಗಿಗಳಿಗೆ ಸೂಕ್ತ ವಿಶ್ರಾಂತಿ ದೊರೆತಾಗ ಅವರ ಆರೋಗ್ಯ ಸುಧಾರಿಸುತ್ತದೆ ಮತ್ತು ಕೆಲಸದ ಸ್ಥಳದಲ್ಲಿಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಅಂಶ ಸಾಬೀತಾಯಿತು.
ಅಮೆರಿಕದಲ್ಲಿಜಾರಿಗೆ ಬಂದ ಈ 40 ಗಂಟೆಗಳ ಕೆಲಸದ ಮಾನದಂಡವು ಕಾಲಕ್ರಮೇಣ ವಿಶ್ವದ ಇತರ ದೇಶಗಳ ಮೇಲೆಯೂ ಆಳವಾದ ಪ್ರಭಾವ ಬೀರಿತು. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ಕಾರ್ಮಿಕ ಕಾಯಿದೆಗಳಲ್ಲಿಈ ತತ್ತ$್ವವನ್ನು ಅಳವಡಿಸಿಕೊಂಡವು.