ನಟ ಧನ್ವೀರ್ ಗೌಡ ವಿರುದ್ಧ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಆಪ್ತ ಸಹಾಯಕ (ಮ್ಯಾನೇಜರ್ ) ನಾಗರಾಜ್ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.ಧನ್ವೀರ್ ಅವರು ದೂರವಾಣಿ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ನಾಗರಾಜ್ ದೂರಿನಲ್ಲಿಆರೋಪಿಸಿದ್ದಾರೆ. ಧನ್ವೀರ್ ಜೊತೆಗಿನ ಮೊಬೈಲ್ ಸಂಭಾಷಣೆಯ ಆಡಿಯೊ ದಾಖಲೆಯನ್ನು ಅವರು ಸಾಕ್ಷ್ಯಾಧಾರವಾಗಿ ಪೊಲೀಸರಿಗೆ ಸಲ್ಲಿಸಿದ್ದಾರೆ.
ಕೆಲ ವಿಷಯಗಳ ಕುರಿತು ಚರ್ಚಿಸಲು ವಿಜಯಲಕ್ಷ್ಮಿ ಅವರೊಂದಿಗೆ ನಟ ಧನ್ವೀರ್ ರ ಮನೆಗೆ ಹೋಗಿದ್ದೆವು. ಆದರೆ, ಆ ಸಂದರ್ಭದಲ್ಲಿಅವರು ಮನೆಯಲ್ಲಿಇರಲಿಲ್ಲ. ಹೀಗಾಗಿ, ತಾವು ಮನೆಗೆ ವಾಪಸ್ ಬಂದಿದ್ದೆವು. ಆ ನಂತರ ತನಗೆ ಕರೆ ಮಾಡಿದ್ದ ಧನ್ವೀರ್ , ಸಂಭಾಷಣೆ ವೇಳೆ ಏಕವಚನದಲ್ಲಿನಿಂದಿಸಿ, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎಂದು ನಾಗರಾಜ್ ದೂರಿನಲ್ಲಿಹೇಳಿದ್ದಾರೆ.
ನಾಗರಾಜ್ ರ ದೂರಿನ ಹಿನ್ನೆಲೆಯಲ್ಲಿಧನ್ವೀರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಗೆ ಬರುವಂತೆ ಅವರಿಗೆ ನೋಟಿಸ್ ಜಾರಿ ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಧ್ವನೀರ್ ತಂದೆಯ ಪ್ರತಿದೂರು:
ಈ ಬೆಳವಣಿಗೆ ಬೆನ್ನಲ್ಲೇ ಧನ್ವೀರ್ ರ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ, ನಾಗರಾಜ್ ಮತ್ತಿತರರ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಗೆ ಪ್ರತಿದೂರು ಕೊಟ್ಟಿದ್ದಾರೆ.
ಮಗ ಧನ್ವೀರ್ ಮನೆಯಲ್ಲಿಇಲ್ಲದ ಸಂದರ್ಭದಲ್ಲಿಅ.21ರಂದು ರಾತ್ರಿ ವಿಜಯಲಕ್ಷ್ಮಿ ಮತ್ತು ನಾಗರಾಜ್ ಮನೆಗೆ ಬಂದು ಗಲಾಟೆ ಮಾಡಿದರು. ವಿಜಯಲಕ್ಷ್ಮಿ ಅವರು ಗೌರವ್ ಎಂಬಾತನಿಗೆ ಕರೆ ಮಾಡಿ, ರೌಡಿ ಶೀಟರ್ ಗಳಾದ ಭೋಜ ಮತ್ತು ಬಾಟಲಿ ಪ್ರಮೋದ್ ಎಂಬಾತನನ್ನು ತಮ್ಮ ಮನೆಗೆ ಕರೆಸಿ ಜಗಳವಾಡಿದರು. ಆ ನಾಲ್ಕು ಮಂದಿ ತಮಗೆ ಹಾಗೂ ಕುಟುಂಬ ಸದಸ್ಯರಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದರು ಎಂದು ತಿಮ್ಮೇಗೌಡ ದೂರಿನಲ್ಲಿಆರೋಪಿಸಿದ್ದಾರೆ.
ತಿಮ್ಮೇಗೌಡರ ದೂರಿನ ಸಂಬಂಧ ಅಸಂಜ್ಞೆಯ ಪ್ರಕರಣ (ಎನ್ ಸಿಆರ್ ) ದಾಖಲಿಸಲಾಗಿದೆ ಎಂದು ರಾಜಾಜಿನಗರ ಠಾಣೆ ಪೊಲೀಸರು ಹೇಳಿದ್ದಾರೆ.