ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು | ಚಿಗುರಿದ ಹಿಂಗಾರಿನ ಆಸೆ
ಜಿಲ್ಲಾದ್ಯಂತ ಧಾರಾಕಾರ ಮಳೆ ವಿಕ ಸುದ್ದಿಲೋಕ ಹುಬ್ಬಳ್ಳಿ
ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿಹಿಂಗಾರು ಮಳೆ ಚುರುಕುಗೊಂಡಿದ್ದು, ಶುಕ್ರವಾರ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿರುವ ಹಿನ್ನೆಲೆಯಲ್ಲಿರೈತರಲ್ಲಿಹೊಸ ಭರವಸೆ ಮೂಡಿಸಿದೆ. ನೆಲದಲ್ಲಿತೇವಾಂಶ ಹೆಚ್ಚಿ ಕೃಷಿ ಚಟುವಟಿಕೆಗಳಿಗೆ ಇಂಬು ನೀಡಿದಂತಾಗಿದೆ. ಇತ್ತ ಹುಬ್ಬಳ್ಳಿ ಮಹಾನಗರದಲ್ಲಿಎರಡೂವರೆ ತಾಸಿಗೂ ಹೆಚ್ಚು ಸಮಯ ಸುರಿದ ಭಾರಿ ಮಳೆಯು ಅವಾಂತರ ಸೃಷ್ಟಿಸಿದೆ.
ಬೆಳಗ್ಗೆಯಿಂದ ಕಂಡು ಬಂದ ಮೋಡ ಕವಿದ ವಾತಾವರಣ ಸಂಜೆ ಮಳೆ ಸುರಿಯುವ ಲಕ್ಷಣಗಳನ್ನು ಗೋಚರಿಸಿತ್ತು. ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಕುಂದಗೋಳ, ಅಣ್ಣಿಗೇರಿ, ಅಳ್ನಾವರ ತಾಲೂಕಿನಲ್ಲಿಉತ್ತಮ ಮಳೆ ಆಗಿರುವ ಬಗ್ಗೆ ವರದಿಯಾಗಿದೆ.
ಹುಬ್ಬಳ್ಳಿ ಮಹಾನಗರದಲ್ಲಿಮೂರು ತಾಸಿಗೂ ಅಧಿಕ ಕಾಲ ಸುರಿದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ದಾಜೀಬಾನ ಪೇಟೆಯ ತುಳಜಾಭವಾನಿ ಸರ್ಕಲ್ , ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿಯ ವಾಣಿಜ್ಯ ಸಂಕೀರ್ಣ ಸೇರಿದಂತೆ ಹಲವೆಡೆ ಬಹುಮಡಿ ಕಟ್ಟಡಗಳ ನೆಲಮಹಡಿಯಲ್ಲಿಭಾರಿ ಪ್ರಮಾಣದ ನೀರು ಸಂಗ್ರಹಗೊಂಡು ಜನರು ತಾಪತ್ರಯ ಅನುಭವಿಸುವಂತಾಯಿತು.
ಫ್ಲೈಓವರ್ ಕಾಮಗಾರಿ ಪರಿಣಾಮ ರಸ್ತೆ ಅಗೆದಿದ್ದರಿಂದ ಸಂಗೊಳ್ಳಿರಾಯಣ್ಣ ಸರ್ಕಲ್ ಬಳಿಯ ಆಸ್ಪತ್ರೆ ಮತ್ತು ಪಕ್ಕದ ಬಿಲ್ಡಿಂಗ್ ನ ಕೆಳಗಡೆ ಸಿಕ್ಕಾಪಟ್ಟೆ ನೀರು ನುಗ್ಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೀರು ಹೊರತೆಗೆದು ಸುರಕ್ಷತಾ ಕ್ರಮಕೈಗೊಂಡಿದ್ದರಿಂದ ಕಟ್ಟಡದಲ್ಲಿನ ಜನರು, ರೋಗಿಗಳು ಹಾಗೂ ಸುತ್ತಲಿನ ಬಿಲ್ಡಿಂಗ್ ನ ಜನರು ನಿಟ್ಟುಸಿರು ಬಿಟ್ಟರು. ಉಣಕಲ್ಲಬಳಿಯ ಬಿಆರ್ ಟಿಎಸ್ ಕಾರಿಡಾರ್ ದಲ್ಲಿಭಾರೀ ಪ್ರಮಾಣದ ಮಳೆ ನೀರು ಶೇಖರಣೆಗೊಂಡಿತ್ತು. ಇದರಿಂದ ಕೆಲ ಕಾಲ ಚಿಗರಿ ಬಸ್ ಸಂಚಾರ ಕೊಂಚ ಅಸ್ತವಸ್ತವಾಗಿತ್ತು. ತುಳಜಾ ಭವಾನಿ ಸರ್ಕಲ್ ನಲ್ಲಿಅಪಾರ ನೀರು ಸೇರಿದ್ದಂತೆ ಅಂಗಡಿಗಳಿಗೆ ನೀರು ನುಗ್ಗಿದ್ದರ ಬಗ್ಗೆ ಪಾಲಿಕೆಯ ಕಂಟ್ರೋಲ್ ರೂಂ ಗೆ ದೂರುಗಳು ಬಂದಿದ್ದವು.
ಬಾಕ್ಸ್
ಹಿಂಗಾರಿನ ಮೇಲೆ ಚಿಗುರಿದ ಆಸೆ
ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿನಿರೀಕ್ಷಿತ ಪ್ರಮಾಣದಲ್ಲಿಮಳೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಬೆಳೆ ನಷ್ಟ, ನೀರಿನ ಕೊರತೆಯಿಂದ ಕಂಗಾಲಾಗಿದ್ದ ಅನ್ನದಾತರಿಗೆ ಹಿಂಗಾರು ಹಂಗಾಮು ಆರಂಭದಲ್ಲೇ ಸುರಿದ ಮಳೆಯು ರೈತರಲ್ಲಿಆಶಾಭಾವನೆ ಚಿಗುರಿಸುವಂತೆ ಮಾಡಿದೆ. ಶ್ರುಕವಾರ ಸುರಿದ ಮಳೆಯು ಬಿತ್ತನೆಗೆ ಪೂರಕ ವಾತಾವರಣ ಸೃಷ್ಟಿಸಿದ್ದರೂ, ಹಿಂಗಾರು ಹಂಗಾಮಿನ ಪೂರ್ಣ ಪ್ರಮಾಣದ ಬಿತ್ತನೆ ಕಾರ್ಯ ಚುರುಕುಗೊಳ್ಳಲು ಇನ್ನೂ ಒಂದೆರಡು ಉತ್ತಮ ಮಳೆಯ ಅಗತ್ಯವಿದೆ ಎಂದು ರೈತರು ಹೇಳುತ್ತಾರೆ. ಮುಂದಿನ ನಾಲ್ಕು ದಿನ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಜಮೀನು ಹದಗೊಳ್ಳಲಿದ್ದು, ಬೀಜಧಿಗೊಬ್ಬರ ಸಿದ್ಧತೆ ಮಾಡಿಕೊಳ್ಳಲು ರೈತರು ಮುಂದಾಗಿದ್ದಾರೆ.
ಫೊಟೊ: ಸಂತೋಷ ರೇನ್ 3
ಹುಬ್ಬಳ್ಳಿ ತುಳಜಾಭವಾನಿ ಸರ್ಕಲ್ ನಲ್ಲಿಭಾರಿ ಪ್ರಮಾಣದ ನೀರು ಸಂಗ್ರಹಗೊಂಡ ದೃಶ್ಯ.