ಕಟ್ಟಡದ ಟೆರೇಸ್ , ಮಾಳಿಗೆ ಮೇಲ್ಛಾವಣಿ ಅಥವಾ ಬಾಲ್ಕನಿಯ ಸುತ್ತಲೂ ಸುರಕ್ಷತೆ ಮತ್ತು ಅಲಂಕಾರಕ್ಕಾಗಿ ಅಳವಡಿಸುವ ತಡೆಗೋಡೆಯಾಗಿರುವ ಟೆರೇಸ್ ರೇಲಿಂಗ್ ಮನೆಯ ಹೊರನೋಟಕ್ಕೆ ಆಧುನಿಕ ಹಾಗೂ ಸುಂದರ ಸ್ಪರ್ಶ ನೀಡುತ್ತದೆ.
--------------------
ಮನೆಯ ಟೆರೇಸ್ ಅಥವಾ ಬಾಲ್ಕನಿ ಎಂದರೆ ಕೇವಲ ಖಾಲಿ ಜಾಗವಲ್ಲ, ಅದು ಮನೆಮಂದಿಗೆ ಇಡೀ ದಿನದ ಆಯಾಸ ಕಳೆದು ಸಂಜೆಯ ತಂಗಾಳಿ ಆಸ್ವಾದಿಸುವ ನೆಚ್ಚಿನ ತಾಣವಾಗಿದೆ. ಆದ್ದರಿಂದ ಆಧುನಿಕ ಮನೆ ವಿನ್ಯಾಸದಲ್ಲಿಟೆರೇಸ್ ರೇಲಿಂಗ್ ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಭಾರತೀಯ ಮನೆಗಳಿಗೆ ಒಪ್ಪುವ ಹಾಗೂ ಟೆರೇಸ್ ನ ಲುಕ್ ಅನ್ನೇ ಬದಲಾಯಿಸುವ ಅನೇಕ ಆಸಕ್ತಿದಾಯಕ ರೇಲಿಂಗ್ ವಿನ್ಯಾಸಗಳು ಗಮನ ಸೆಳೆಯುತ್ತಿವೆ. ಅದರ ಕೆಲವು ಜನಪ್ರಿಯ ಪ್ರಕಾರಗಳು ಇಲ್ಲಿವೆ.
ವರ್ಟಿಕಲ್ ಐರನ್ ರಾಡ್ : ಸರಳತೆ ಇಷ್ಟಪಡುವವರ ಮನೆಯ ಟೆರೇಸ್ ಗೆ ಲಂಬವಾಗಿರುವ ಕಬ್ಬಿಣದ ಸರಳುಗಳ ರೇಲಿಂಗ್ ಉತ್ತಮ. ನಿರ್ವಹಣೆ ಮಾಡಲು ಬಹಳ ಸುಲಭವಾಗಿರುವ ಇದು ಸಣ್ಣ ಮತ್ತು ದೊಡ್ಡ ಟೆರೇಸ್ ಗಳಿಗೂ ಹೊಂದುತ್ತದೆ. ಕಪ್ಪು, ಬಿಳಿ ಅಥವಾ ಆಯಾ ಮನೆಯ ಬಣ್ಣಕ್ಕೆ ತಕ್ಕಂತೆ ಇದಕ್ಕೆ ಪೇಂಟ್ ಮಾಡಬಹುದು.
ಬ್ರಿಕ್ ಮತ್ತು ಮೆಟಲ್ : ಮನೆಗೆ ಮಣ್ಣಿನ ಮತ್ತು ನೈಸರ್ಗಿಕ ಲುಕ್ ಬೇಕೆಂದರೆ ಇಟ್ಟಿಗೆಯ ಮತ್ತು ಲೋಹದ ರೇಲಿಂಗ್ ವಿನ್ಯಾಸ ಆಯ್ಕೆ ಮಾಡಬಹುದು. ಇದರ ಕೆಳಭಾಗದಲ್ಲಿಇಟ್ಟಿಗೆಯ ಗೋಡೆ ಮತ್ತು ಮೇಲ್ಭಾಗದಲ್ಲಿಸರಳವಾದ ಮೆಟಲ್ ರೇಲಿಂಗ್ ಇರುತ್ತದೆ. ಫಾಮ್ ರ್ ಹೌಸ್ ಅಥವಾ ವೀಕೆಂಡ್ ಮನೆಗಳಿಗೆ ಇದು ಹೇಳಿ ಮಾಡಿಸಿದ ವಿನ್ಯಾಸ.
ಕ್ಲಾಸಿಕ್ ಕಮಾನು: ನೇರ ಗೆರೆಗಳ ಬದಲಿಗೆ ಕಮಾನುಗಳಿರುವ ರೇಲಿಂಗ್ ವಿನ್ಯಾಸವು ಮನೆಗೆ ಸಾಂಪ್ರದಾಯಿಕ ಹಾಗೂ ರಾಯಲ್ ಕಳೆ ನೀಡುತ್ತದೆ. ಮನೆಯ ಕಿಟಕಿ ಹಾಗೂ ಬಾಗಿಲುಗಳ ವಿನ್ಯಾಸಕ್ಕೆ ಹೊಂದುವಂತೆ ಇದನ್ನು ನಿರ್ಮಿಸಿದರೆ ಸಂಪೂರ್ಣ ಮನೆಯ ಲುಕ್ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ.
ಸಾಂಪ್ರದಾಯಿಕ ಜಾಲರಿ: ಸಾಂಪ್ರದಾಯಿಕ ಶೈಲಿಯ ಭಾರತೀಯ ಮನೆಗೆ ಸಾಂಪ್ರದಾಯಿಕ ಜಾಲರಿ ವಿನ್ಯಾಸದ ರೇಲಿಂಗ್ ಅತ್ಯುತ್ತಮ ಆಯ್ಕೆ. ಇದು ಟೆರೇಸ್ ಗೆ ಗಾಳಿ ಸರಾಗವಾಗಿ ಬರುವಂತೆ ಮಾಡುತ್ತದೆ ಹಾಗೂ ಹೊರಗಿನವರಿಂದ ಗೌಪ್ಯತೆಯನ್ನೂ ಕಾಪಾಡುತ್ತದೆ. ಚೌಕಾಕಾರ ಅಥವಾ ವಜ್ರಾಕೃತಿಯ ಟೆರೇಸ್ ರೇಲಿಂಗ್ ಜಾಲರಿಗಳು ಬಹಳ ಜನಪ್ರಿಯವಾಗಿವೆ.
ಹಾಫ್ ವಾಲ್ ರೇಲಿಂಗ್ : ಮನೆಯ ಪಕ್ಕದಲ್ಲಿಯೇ ಬೇರೆ ಕಟ್ಟಡಗಳಿದ್ದರೆ ಮತ್ತು ಮನೆಮಂದಿಗೆ ಹೆಚ್ಚಿನ ಖಾಸಗಿತನ ಬೇಕಿದ್ದರೆ ಹಾಫ್ ವಾಲ್ ರೇಲಿಂಗ್ ವಿನ್ಯಾಸ ಉತ್ತಮ ಆಯ್ಕೆ. ಇದರಲ್ಲಿಟೆರೇಸ್ ಪೂರ್ತಿ ತೆರೆದಂತಿರದೆ ಅರ್ಧ ಗೋಡೆ ಕಟ್ಟಲಾಗುತ್ತದೆ. ಮೇಲ್ಭಾಗದಲ್ಲಿಸಣ್ಣ ರೇಲಿಂಗ್ ಅಥವಾ ಗಿಡದ ಕುಂಡಗಳನ್ನು ಇಡಲು ಜಾಗ ಮಾಡಲಾಗುತ್ತದೆ.
ಸ್ಟೈನ್ ಲೆಸ್ ಸ್ಟೀಲ್ ಕೇಬಲ್ : ಅತ್ಯಂತ ಆಧುನಿಕ ಲುಕ್ ನೀಡುವ ಸ್ಟೈನ್ ಲೆಸ್ ಸ್ಟೀಲ್ ಕೇಬಲ್ ಟೆರೇಸ್ ರೇಲಿಂಗ್ ವಿನ್ಯಾಸಕ್ಕೆ ದಪ್ಪ ಸರಳುಗಳ ಬದಲಿಗೆ ತೆಳುವಾದ ಸ್ಟೀಲ್ ಕೇಬಲ್ ಗಳನ್ನು ಬಳಸಲಾಗುತ್ತದೆ. ಇದರಿಂದ ಟೆರೇಸ್ ನಿಂದ ಹೊರಗಿನ ಸುಂದರ ವೀಕ್ಷಣೆ ಮರೆಯಾಗುವುದಿಲ್ಲ.
ಟೆರ್ರಾಕೋಟ ಟೈಲ್ಸ್ ಹಾಗೂ ಕುಂಡಗಳ ವಿನ್ಯಾಸ: ಭಾರತೀಯ ಮನೆಗಳಲ್ಲಿಬೆಚ್ಚಗಿನ ವಾತಾವರಣ ಸೃಷ್ಟಿಸಲು ಟೆರ್ರಾಕೋಟ ಟೈಲ್ಸ್ ಬಳಸುವುದು ಈಗಿನ ಟ್ರೆಂಡ್ . ಇದನ್ನೀಗ ಟೆರೇಸ್ ರೇಲಿಂಗ್ ನಲ್ಲೂಅಳವಡಿಸಲಾಗುತ್ತಿದೆ. ಇಂಥ ರೇಲಿಂಗ್ ನಲ್ಲಿಗಿಡಗಳನ್ನು ಬೆಳೆಸಲು ಜಾಗವಿರುವುದರಿಂದ ಟೆರೇಸ್ ಹೆಚ್ಚು ಹಸಿರು ಮತ್ತು ಪರಿಸರ ಸ್ನೇಹಿಯಾಗಿ ಕಾಣುತ್ತದೆ.
ರಾಟ್ ಐರನ್ : ದೊಡ್ಡ ಬಂಗಲೆ ಮತ್ತು ಐಷಾರಾಮಿ ಮನೆಗಳ ಟೆರೇಸ್ ಗಳಿಗೆ ರಾಟ್ ಐರನ್ ರೇಲಿಂಗ್ ವಿನ್ಯಾಸ ಸೂಕ್ತವಾಗುತ್ತದೆ. ಇದರಲ್ಲಿಎಲೆ, ಹೂವು ಅಥವಾ ವೃತ್ತಾಕಾರದ ಕಲಾತ್ಮಕ ವಿನ್ಯಾಸಗಳಿರುತ್ತವೆ. ಮನೆಯ ಮುಖ್ಯ ಗೇಟ್ ನ ವಿನ್ಯಾಸವನ್ನೇ ಟೆರೇಸ್ ಗೂ ಬಳಸಿದರೆ ಮನೆಯ ಮುಂಭಾಗದ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.
ವುಡನ್ ಸ್ಪ್ಯಾಟ್ : ಆಧುನಿಕ ಮನೆಗಳಿಗೆ ಮರದ ಸ್ಪರ್ಶ ನೀಡಲು ವುಡನ್ ಸ್ಪ್ಯಾಟ್ ಟೆರೇಸ್ ರೇಲಿಂಗ್ ಹೇಳಿ ಮಾಡಿಸಿದಂತಿದೆ. ಇದರಲ್ಲಿಮರದ ಪಟ್ಟಿಗಳ ನಡುವೆ ಸಣ್ಣ ಅಂತರ ಮಾಡಲಾಗುತ್ತದೆ. ಇದರಿಂದ ಟೆರೇಸ್ ಲುಕ್ ಕೂಡ ವಿಭಿನ್ನವಾಗಿರುತ್ತದೆ ಮತ್ತು ಮನೆಮಂದಿಗೆ ಖಾಸಗಿತನವೂ ಸಿಗುತ್ತದೆ.
ಸ್ಟೋನ್ ಕ್ಲ್ಯಾಡ್ : ಕಲ್ಲಿನ ಫಿನಿಶಿಂಗ್ ಇಷ್ಟಪಡುವವರಿಗೆ ಸ್ಟೋನ್ ಕ್ಲ್ಯಾಡಿಂಗ್ ಟೆರೇಸ್ ರೇಲಿಂಗ್ ವಿನ್ಯಾಸ ಉತ್ತಮ. ಇದು ಮನೆಗೆ ಭದ್ರತೆಯ ಜತೆಗೆ ನೈಸರ್ಗಿಕ ಲುಕ್ ನೀಡುತ್ತದೆ. ಬಿಳಿ ಅಥವಾ ಕ್ರೀಮ್ ಬಣ್ಣದ ಮನೆಗಳ ಟೆರೇಸ್ ಗೆ ಕಲ್ಲಿನ ಕ್ಲ್ಯಾಡಿಂಗ್ ರೇಲಿಂಗ್ ಬಹಳ ಅದ್ಭುತವಾಗಿ ಹೊಂದುತ್ತದೆ.
ಹೀಗೆ ಟೆರೇಸ್ ರೇಲಿಂಗ್ ಕೇವಲ ಸುರಕ್ಷತೆಗೆ ಸೀಮಿತವಾಗಿರದೆ ಪ್ರತಿ ಮನೆಯ ಸ್ಟೈಲ್ ಸ್ಟೇಟ್ ಮೆಂಟ್ ಆಗಬಲ್ಲದು. ಮನೆಯ ವಿನ್ಯಾಸ, ಬಜೆಟ್ ಮತ್ತು ಮನೆಮಂದಿಯ ನಿತ್ಯದ ಅಗತ್ಯಗಳಿಗೆ ತಕ್ಕಂತೆ ರೇಲಿಂಗ್ ವಿನ್ಯಾಸ ಆಯ್ಕೆ ಮಾಡಿ ಟೆರೇಸ್ ಅನ್ನು ಮತ್ತಷ್ಟು ಆಕರ್ಷಕವಾಗಿಸಬಹುದು.