ಭುವನೇಶ್ವರ/ಅಮರಾವತಿ: ಪೂರ್ವ-ಮಧ್ಯ ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿರೂಪುಗೊಂಡಿರುವ ವಾಯುಭಾರ ಕುಸಿತವು ಅ.25ರಂದು ತೀವ್ರ ವಾಯುಭಾರ ಕುಸಿತವಾಗಿ ಪರಿಣಮಿಸುವ ಸಾಧ್ಯತೆಯಿದೆ. ಅ.26ರ ಬೆಳಗ್ಗೆ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ವಾಗಿ ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ನಂತರ ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿಚಲಿಸಿ ಉತ್ತರ ಆಂಧ್ರಪ್ರದೇಶ-ದಕ್ಷಿಣ ಒಡಿಶಾ ಕರಾವಳಿಯತ್ತ ಅ.28ರ ಸುಮಾರಿಗೆ ಸಾಗುವ ನಿರೀಕ್ಷೆಯಿದೆ. ನಿಖರ ಭೂಸ್ಪರ್ಶ ಸ್ಥಳ ಮತ್ತು ಸಮಯ ಇನ್ನೂ ಖಚಿತವಾಗಿಲ್ಲ. ಚಂಡಮಾರುತ ರೂಪುಗೊಂಡರೆ 2026ರಲ್ಲಿಬಂಗಾಳ ಕೊಲ್ಲಿಯಲ್ಲಿಉಂಟಾಗುವ ಮೊದಲ ಚಂಡಮಾರುತವಾಗಲಿದ್ದು, ಬಾಂಗ್ಲಾದೇಶ ಸೂಚಿಸಿರುವ ‘ಅರ್ನಬ್ ’ ಎಂಬ ಹೆಸರು ಪಡೆಯಲಿದೆ.ಅ.26ರಿಂದ ಗಾಳಿಯ ವೇಗ ಗಂಟೆಗೆ 70-80 ಕಿ.ಮೀ.ನಿಂದ ಗರಿಷ್ಠ 90 ಕಿ.ಮೀ. ತಲುಪುವ ಸಾಧ್ಯತೆ ಇದೆ. ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರು ಅ.29ರವರೆಗೆ ಸಮುದ್ರಕ್ಕೆ ತೆರಳದಂತೆ ಐಎಂಡಿ ಸೂಚಿಸಿದೆ.
ಆಂಧ್ರಪ್ರದೇಶದ ಕರಾವಳಿ ಹಾಗೂ ಯಾನಂನಲ್ಲಿಅ.23ರಿಂದ 28ರವರೆಗೆ ಕೆಲವೆಡೆ ಭಾರಿ ಮಳೆಯ ಸಾಧ್ಯತೆಯಿದೆ. ಒಡಿಶಾದಲ್ಲಿಅ.26ರಿಂದ ಮಳೆ ಹೆಚ್ಚಾಗಲಿದ್ದು, ಅ.27ರಿಂದ 29ರವರೆಗೆ ವ್ಯಾಪಕ ಮಳೆ, ಗುಡುಗು ಸಹಿತ ಗಾಳಿ ಮತ್ತು ಗಂಟೆಗೆ 50-60 ಕಿ.ಮೀ. ವೇಗದ ಗಾಳಿಯ ಬೀಸಲಿದೆ. ತಮಿಳುನಾಡು, ಪುದುಚೇರಿ, ಕೇರಳ, ಕರ್ನಾಟಕ, ಲಕ್ಷದ್ವೀಪ ಹಾಗೂ ಅಂಡಮಾನ್ -ನಿಕೋಬಾರ್ ಗೂ ಮಳೆಯ ಅಬ್ಬರದ ಎಚ್ಚರಿಕೆ ನೀಡಲಾಗಿದೆ. ಒಡಿಶಾ ಸರಕಾರವು ಜಿಲ್ಲಾಡಳಿತಗಳನ್ನು ಸನ್ನದ್ಧವಾಗಿರಿಸಿದೆ.