** 12 ಕೆ.ಜಿ ಸಿಲಿಂಡರ್ ಬೆಲೆ 7,000 ರೂ. | ನಿವಾಸಿಗಳ ಪರದಾಟ
ಇಸ್ಲಾಮಾಬಾದ್ : ಪಾಕಿಸ್ತಾನ ಮತ್ತು ಇರಾನ್ ನಡುವಿನ ಪ್ರಮುಖ ಗಡಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರಿಂದ ಸರಕು ಸಾಗಣೆ ಸ್ಥಗಿತಗೊಂಡು ಪಾಕ್ ನಲ್ಲಿಎಲ್ ಪಿಜಿ ಪೂರೈಕೆಯಲ್ಲಿಭಾರಿ ವ್ಯತ್ಯಯ ಉಂಟಾಗಿದೆ. ಅಡುಗೆ ಅನಿಲದ ದರಗಳು ಗಗನಕ್ಕೇರಿದ್ದು, ಜನಸಾಮಾನ್ಯರು ತೀವ್ರ ಪರದಾಡುವಂತಾಗಿದೆ.ಪೂರೈಕೆಯಲ್ಲಿನ ತೀವ್ರ ಅಭಾವದಿಂದ ಬಲೂಚಿಸ್ತಾನದಲ್ಲಿಕೆಲವೇ ದಿನಗಳಲ್ಲಿ4,500 ರೂ. (ಪಾಕ್ ರೂಪಾಯಿ) ಇದ್ದ 12 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯು 7,000 ರೂ. ತಲುಪಿದೆ. ಲಾಹೋರ್ ನಲ್ಲಿ7,500 ರೂ.ನಿಂದ 8,200 ರೂ.ವರೆಗೆ ಮಾರಾಟವಾಗುತ್ತಿದೆ. ಇನ್ನು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಂತೂ 10,000 ರೂ.ಗೆ ಮಾರಾಟವಾಗುತ್ತಿದೆ. ಮುಂಬರುವ ಚಳಿಗಾಲದಲ್ಲಿಅನಿಲ ಪೂರೈಕೆ ವ್ಯತ್ಯಯವು ದೇಶದಾದ್ಯಂತ ಮತ್ತಷ್ಟು ದೊಡ್ಡ ಪ್ರಮಾಣದ ಕೊರತೆ ಮತ್ತು ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ಪಾಕಿಸ್ತಾನ ಎಲ್ ಪಿಜಿ ಅಸೋಸಿಯೇಷನ್ ಕಳವಳ ವ್ಯಕ್ತಪಡಿಸಿದೆ.
ಪಾಕಿಸ್ತಾನವು ತನ್ನ ಒಟ್ಟು ಎಲ್ ಪಿಜಿ ಅಗತ್ಯದ ಶೇ. 70ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲೂವಿಶೇಷವಾಗಿ ಇರಾನ್ ನಿಂದ ಪ್ರತಿದಿನ ಸುಮಾರು 7,000 ಮೆಟ್ರಿಕ್ ಟನ್ ಎಲ್ ಪಿಜಿಯನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಅಕ್ಟೋಬರ್ 17ರಿಂದ ಇರಾನ್ ಗೆ ಹೊಂದಿಕೊಂಡ ಪ್ರಮುಖ ಗಬ್ ್ದ-ರಿಮ್ದಾನ್ ಮತ್ತು ತಫ್ತಾನ್ ಗಡಿಗಳನ್ನು ಬಂದ್ ಮಾಡಲಾಗಿದೆ. ಇಲ್ಲಿಸರಕು ಸಾಗಣೆ ಚಟುವಟಿಕೆಗಳು ಅಕ್ಷರಶಃ ಬಂದ್ ಆಗಿವೆ.
ಭದ್ರತಾ ವ್ಯವಸ್ಥೆ ಹೆಚ್ಚಳ ಹಾಗೂ ಕಳ್ಳಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿಗಡಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಬಲೂಚಿಸ್ತಾನ ಪ್ರಾಂತೀಯ ಆಡಳಿತ ಹೇಳಿದೆ. ಆದರೆ, ಹೌತಿ ಬಂಡುಕೋರರ ದಾಳಿಯಿಂದ ರಕ್ಷಿಸಿಕೊಳ್ಳಲು ಸೌದಿ ಅರೇಬಿಯಾಗೆ ಪಾಕ್ ಸೇನಾ ನೆರವು ನೀಡುತ್ತಿರುವುದರಿಂದ ಮುನಿಸಿಕೊಂಡು ಇರಾನ್ ಗಡಿಗಳನ್ನು ಬಂದ್ ಮಾಡಿದೆ ಎಂಬ ಮಾತುಗಳೂ ಕೇಳಿಬಂದಿವೆ. ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಗಡಿ ಬಂದ್ ಮಾಡಲಾಗಿದೆ ಎಂದಷ್ಟೇ ಇರಾನ್ ವಿದೇಶಾಂಗ ಸಚಿವಾಲಯ ಹೇಳಿದೆ.
ನಿಂತ ನೂರಾರು ಟ್ರಕ್ ಗಳು: ಗಡಿಗಳು ಬಂದ್ ಆಗಿರುವುದು ಎಲ್ ಪಿಜಿ ಟ್ಯಾಂಕರ್ ಗಳು ಸೇರಿದಂತೆ ನೂರಾರು ಸರಕು ಸಾಗಣೆ ಟ್ರಕ್ ಗಳು ಗಡಿಯ ಎರಡೂ ಬದಿಗಳಲ್ಲಿಸಾಲುಗಟ್ಟಿ ನಿಂತಿವೆ. ಇತ್ತ, ಇರಾನ್ ಗೆ ಸಾಗಿಸಬೇಕಿದ್ದ ಆಲೂಗಡ್ಡೆ, ಬಾಳೆಹಣ್ಣು ಮತ್ತು ಅಕ್ಕಿಯನ್ನು ಹೊತ್ತ 1,000ಕ್ಕೂ ಹೆಚ್ಚು ಪಾಕ್ ಕಂಟೈನರ್ ಗಳು ಗಡಿಯಲ್ಲಿಬೀಡುಬಿಟ್ಟಿವೆ. ಪರಿಸ್ಥಿತಿ ತಿಳಿಗೊಳಿಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥರು ಇತ್ತೀಚೆಗೆ ಟೆಹ್ರಾನ್ ಗೆ ಭೇಟಿ ನೀಡಿ ಇರಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.