ಬಾಲ ಸಂತ್ರಸ್ತೆ ಪಾಟೀ ಸವಾಲು ಆದೇಶ ರದ್ದು

Contributed by: srikanth.g@timesofindia.com|Vijaya Karnataka•
high court ruling prohibition on subjecting child victim to cross examination
- ಪೋಕ್ಸೊ ಪ್ರಕರಣದಲ್ಲಿಬಾಲಕಿಗೆ ಪದೇಪದೆ ವಿಚಾರಣೆ ಬೇಡವೆಂದ ಹೈಕೋರ್ಟ್

ವಿಕ ಸುದ್ದಿಲೋಕ ಬೆಂಗಳೂರು
ಪೋಕ್ಸೊ ಪ್ರಕರಣಗಳಲ್ಲಿಬಾಲ ಸಂತ್ರಸ್ತೆಯರನ್ನು ಪದೇಪದೆ ನ್ಯಾಯಾಲಯಕ್ಕೆ ಕರೆದು ಪಾಟೀ ಸವಾಲು ನಡೆಸುವುದು ಆಕೆಯ ಮೇಲೆ ಮತ್ತಷ್ಟು ಮಾನಸಿಕ ಒತ್ತಡ ಉಂಟು ಮಾಡಬಹುದು. ನ್ಯಾಯಕ್ಕಾಗಿ ನಡೆಯುವ ಕಾನೂನು ಪ್ರಕ್ರಿಯೆಯೇ ಮಗುವಿಗೆ ಮತ್ತೊಂದು ಗಾಯ ಅಥವಾ ಘಾಸಿಯುಂಟು ಮಾಡಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, 12 ವರ್ಷದ ಬಾಲ ಸಂತ್ರಸ್ತೆಯನ್ನು ಪದೇಪದೆ ಪಾಟೀ ಸವಾಲಿಗೆ ಒಳಪಡಿಸಲು ಅವಕಾಶ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ರದ್ದುಗೊಳಿಸಿದೆ.

ಮಾನಸಿಕ ಸಂಕಷ್ಟಕ್ಕೆ ಕಾರಣ:

‘‘ಆರೋಪಿಗೆ ನ್ಯಾಯಸಮ್ಮತ ವಿಚಾರಣೆಯ ಹಕ್ಕಿದೆ ಎಂಬುದನ್ನು ಒಪ್ಪಿಕೊಂಡರೂ, ಅದೇ ಕಾರಣಕ್ಕೆ ಬಾಲ ಸಂತ್ರಸ್ತೆಯ ಮಾನಸಿಕ ಆರೋಗ್ಯ ಕಡೆಗಣಿಸಲಾಗದು. ನಡೆದಿರುವ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುವುದರಿಂದ ಮಗುವಿಗೆ ಗಂಭೀರ ಮಾನಸಿಕ ಸಂಕಷ್ಟ ಉಂಟಾಗಬಹುದು,’’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘‘ಮತ್ತೊಮ್ಮೆ ಪಾಟೀ ಸವಾಲಿಗೆ ಒಳಪಡಿಸುವುದು ಈ ಪ್ರಕರಣದ ಪರಿಸ್ಥಿತಿಯಲ್ಲಿಕಾನೂನು ಪ್ರಕ್ರಿಯೆಯ ದುರುಪಯೋಗವಾಗಬಹುದು ಮತ್ತು ಬಾಲಕಿಯನ್ನು ಮರು-ಆಘಾತಕ್ಕೆ ಒಳಪಡಿಸಬಹುದು. ನ್ಯಾಯಾಲಯದ ಉದ್ದೇಶ ಸತ್ಯ ಪತ್ತೆಹಚ್ಚುವುದಾದರೂ, ಅದಕ್ಕಾಗಿ ಮಗುವಿನ ಮೇಲೆ ನಿರಂತರ ಒತ್ತಡ ಹೇರಲು ಸಾಧ್ಯವಿಲ್ಲ,’’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

‘‘ಪೋಕ್ಸೊ ಕಾಯಿದೆಯ ಸೆಕ್ಷನ್ 33(5) ಪ್ರಕಾರ, ಬಾಲಕಿಯನ್ನು ಸಾಕ್ಷ್ಯ ನೀಡಲು ಮತ್ತೆ ಮತ್ತೆ ನ್ಯಾಯಾಲಯಕ್ಕೆ ಕರೆಯದಂತೆ ವಿಶೇಷ ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು. ಈ ನಿಬಂಧನೆಯ ಉದ್ದೇಶವೇ ಬಾಲ ಸಂತ್ರಸ್ತೆಯರನ್ನು ನಿರಂತರ ವಿಚಾರಣೆ, ಪಾಟೀ ಸವಾಲು ಮತ್ತು ನ್ಯಾಯಾಲಯದ ಹಾಜರಾತಿಯಿಂದ ರಕ್ಷಿಸುವುದಾಗಿದೆ. ಮತ್ತೊಂದು ಪ್ರಕರಣದಲ್ಲಿಸೆಕ್ಷನ್ 33(5)ರ ಉದ್ದೇಶ ಬಾಲಕಿಯ ಮೇಲೆ ಪದೇಪದೆ ಸಾಕ್ಷ್ಯ ಹೇಳಿಸುವ ಮೂಲಕ ಕಿರುಕುಳ ಅಥವಾ ಮಾನಸಿಕ ಒತ್ತಡ ಉಂಟಾಗದಂತೆ ನೋಡಿಕೊಳ್ಳುವುದಾಗಿದೆ ಎಂದು ವಿವರಿಸಲಾಗಿತ್ತು. ಆದರೆ, ನಿರ್ದಿಷ್ಟ ಪ್ರಕರಣದ ವಾಸ್ತವಾಂಶಗಳನ್ನು ಆಧರಿಸಿ ಅತ್ಯಂತ ಅಗತ್ಯವಿದ್ದರೆ ಕೆಲವೊಂದು ಸೀಮಿತ ಕ್ರಮಗಳಿಗೆ ಅವಕಾಶ ಇರಬಹುದು,’’ ಎಂದೂ ನ್ಯಾಯಾಲಯ ಆದೇಶಿಸಿದೆ.

ಸಾಕ್ಷಿಯನ್ನು ಮತ್ತೆ ಕರೆಸುವುದಕ್ಕೆ ಮಿತಿ:

‘‘ವಿಚಾರಣಾ ನ್ಯಾಯಾಲಯಕ್ಕೆ ಸಾಕ್ಷಿಯನ್ನು ಮತ್ತೆ ಕರೆಸಿ ವಿಚಾರಣೆ ನಡೆಸುವ ಅಧಿಕಾರವಿದೆ. ಹಿಂದಿನ ಅಪರಾಧ ದಂಡೆ ಸಂಹಿತೆಯ ಸೆಕ್ಷನ್ 311 ಹಾಗೂ ಪ್ರಸ್ತುತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 348ರಡಿ ಈ ಅಧಿಕಾರವನ್ನು ಬಳಸಬಹುದು. ಆದರೆ ಈ ಅಧಿಕಾರವನ್ನು ಪ್ರತಿಯೊಂದು ಪ್ರಕರಣದಲ್ಲೂಸ್ವಯಂಚಾಲಿತವಾಗಿ ಬಳಸಲು ಸಾಧ್ಯವಿಲ್ಲ. ಸಾಕ್ಷಿಯನ್ನು ಮರು ಕರೆಸುವುದು ನಿಜವಾಗಿಯೂ ನ್ಯಾಯಯುತ ತೀರ್ಪಿಗೆ ಅಗತ್ಯವೇ ಅಥವಾ ವಿಚಾರಣೆಯನ್ನು ವಿಳಂಬಗೊಳಿಸಲು ಹಾಗೂ ಈಗಾಗಲೇ ದಾಖಲಾದ ಸಾಕ್ಷ್ಯದಲ್ಲಿನ ಕೊರತೆಗಳನ್ನು ತುಂಬಲು ಮಾಡಲಾಗುತ್ತಿದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು,’’ ಎಂದು ಆದೇಶದಲ್ಲಿತಿಳಿಸಲಾಗಿದೆ.

‘‘ಮಕ್ಕಳನ್ನು ಅಪರಾಧ ನ್ಯಾಯವ್ಯವಸ್ಥೆಯಲ್ಲಿಮತ್ತೆ ಮತ್ತೆ ತೊಡಗಿಸುವುದೇ ಕೆಲವೊಮ್ಮೆ ಅವರಿಗೆ ಹೊಸ ಆಘಾತದ ಮೂಲವಾಗಬಹುದು ಎಂಬ ಅಂಶವನ್ನು ಸುಪ್ರೀಂಕೋರ್ಟ್ ತನ್ನ ಇತ್ತೀಚಿನ ತೀರ್ಪುಗಳಲ್ಲಿಗುರುತಿಸಿದೆ. ಮಕ್ಕಳ ಸಾಕ್ಷ್ಯ ದಾಖಲಿಸುವ ಸಂದರ್ಭದಲ್ಲಿಅವರ ಗೌರವ, ಭದ್ರತೆ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವುದು ನ್ಯಾಯಾಂಗದ ಪ್ರಮುಖ ಕರ್ತವ್ಯವಾಗಿದೆ,’’ ಎಂದೂ ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಹಿನ್ನೆಲೆ:

ಬಾಲಕಿ ಈಗ 12 ವರ್ಷದವಳಾಗಿದ್ದು, ಪ್ರಕರಣ ದಾಖಲಾಗಿದ್ದಾಗ ಆಕೆಗೆ ಎಂಟು ವರ್ಷ ವಯಸ್ಸಾಗಿತ್ತು. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ 2022ರಲ್ಲಿಪೋಕ್ಸೊ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಬಳಿಕ 2023ರಲ್ಲಿಬಾಲಕಿಯನ್ನು ವಿಚಾರಣಾ ನ್ಯಾಯಾಲಯದಲ್ಲಿಹಲವು ಬಾರಿ ಹಾಗೂ ದೀರ್ಘಕಾಲ ಪಾಟೀ ಸವಾಲಿಗೆ ಒಳಪಡಿಸಲಾಗಿತ್ತು.

ಈ ನಡುವೆ, 2024ರ ಮಾರ್ಚ್ನಲ್ಲಿಆರೋಪಿಯು ಕೆಲವು ವಿಡಿಯೊಗಳು ಮತ್ತು ಧ್ವನಿ ಸಂದೇಶಗಳನ್ನು ಆಧಾರವಾಗಿ ಇಟ್ಟುಕೊಂಡು ಬಾಲಕಿಯನ್ನು ಮತ್ತೆ ವಿಚಾರಣೆ ನಡೆಸಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದನು. ವಿಚಾರಣಾ ನ್ಯಾಯಾಲಯವು ಆ ಅರ್ಜಿಯನ್ನು ಅಂಗೀಕರಿಸಿತ್ತು. ಅದನ್ನು ಪ್ರಶ್ನಿಸಿ ಬಾಲಕಿಯ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಾಲಕಿ ಈಗಾಗಲೇ ಹಲವು ಬಾರಿ ಸಾಕ್ಷ್ಯ ನೀಡಿದ್ದು, ಮತ್ತೆ ಪಾಟೀ ಸವಾಲಿಗೆ ಒಳಪಡಿಸುವುದು ಸುಪ್ರೀಂಕೋರ್ಟ್ ನ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದರು.