ಮಸ್ಟ್ ವಾಚ್

Contributed by: vidyarashmi.bhat@timesofindia.com|Vijaya Karnataka•
must watch gd naidus inspirational journey
ಭಾರತದ ಎಡಿಸನ್

----
ಇಪ್ಪತ್ತನೇ ಶತಮಾನದಲ್ಲಿಭಾರತದ ತಂತ್ರಜ್ಞಾನ, ಉದ್ಯಮ, ಕೃಷಿ, ಶಿಕ್ಷಣ ಸೇರಿದಂತೆ ಇನ್ನು ಹಲವು ಕ್ಷೇತ್ರಗಳಲ್ಲಿಗಣನೀಯ ಕೊಡುಗೆ ಕೊಟ್ಟವರು ಗೋಪಾಲಸ್ವಾಮಿ ದೊರೆಸ್ವಾಮಿ ನಾಯ್ಡು ( ಜಿ.ಡಿ.ನಾಯ್ಡು ). ಭಾರತದ ಎಡಿಸನ್ ಎಂದೇ ಪ್ರಖ್ಯಾತರಾದ ಇವರ ಜೀವನವನ್ನು ಆಧರಿಸಿ ಕೃಷ್ಣಕುಮಾರ್ ರಾಮಕುಮಾರ್ ತಮಿಳಿನ ’ಜಿ.ಡಿ.ಎನ್ .’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜಿ.ಡಿ.ನಾಯ್ಡು ಪಾತ್ರದಲ್ಲಿಮಾಧವನ್ ಅವರು ಮಿಂಚಿದ್ದಾರೆ.

ಶಾಲಾ ಪಠ್ಯಪುಸ್ತಕ ಸಮಿತಿಯ ಚರ್ಚೆಯೊಂದಿಗೆ ಪ್ರಾರಂಭವಾಗಿ ಫ್ಲ್ಯಾಶ್ ಬ್ಯಾಕ್ ಮಾದರಿಯಲ್ಲಿಚಿತ್ರ ಸಾಗುತ್ತದೆ. ಕೇವಲ ಮೂರನೆ ತರಗತಿಯ ವರೆಗೆ ಓದಿದ ಜಿ.ಡಿ.ನಾಯ್ಡು ಯಂತ್ರಗಳ ಕುರಿತಾದ ವಿಶೇಷ ಆಸಕ್ತಿಯಿಂದಾಗಿ ಎಲ್ಲವನ್ನೂ ಕಲಿಯುತ್ತಾರೆ. ಹಣಕ್ಕಾಗಿ ಹೋಟೆಲ್ ನಲ್ಲಿಕೆಲಸ ಮಾಡುತ್ತಿದ್ದ ನಾಯ್ಡು ಮುಂದೊಂದು ದಿನ ಸಾವಿರಾರು ಜನರಿಗೆ ಕೆಲಸ ಕೊಡುತ್ತಾರೆ, ಅವರೆಲ್ಲರ ಪ್ರೀತಿ ಗಳಿಸುತ್ತಾರೆ. ಜಗತ್ತಿನ ಎದುರು ಭಾರತ ಹೆಮ್ಮೆ ಪಡುವಂಥ ಆವಿಷ್ಕಾರಗಳನ್ನು ಮಾಡುತ್ತಾರೆ. ದೊಡ್ಡ ಕನಸು, ಸಾಧಿಸುವ ಛಲವನ್ನು ರೂಢಿಸಿಕೊಂಡ ಅವರ ಜೀವನವೇ ಒಂದು ಪಾಠ. ಹಾಗಾಗಿ ಶಾಲೆಯಲ್ಲಿಅವರನ್ನು ಓದುವಂತೆ ಆಗಬೇಕು ಎನ್ನುವ ನಿರ್ಣಯದಲ್ಲಿಚಿತ್ರ ಸಮಾಪ್ತವಾಗುತ್ತದೆ.

ಚಿತ್ರದ ತಿರುಳು ಇರುವುದು ನಾಯ್ಡು ಅವರ ಪ್ರತಿ ನಡೆಯನ್ನು ತೋರಿಸಿರುವ ಬಗೆಯಲ್ಲಿ. ಇಡೀ ಬ್ರಿಟಿಷ್ ವ್ಯವಸ್ಥೆ ವಿರುದ್ಧವಾಗಿದ್ದಾಗಲೂ ಅದನ್ನು ನೈತಿಕವಾಗಿ ಎದುರಿಸಿದ್ದು, ವಯಸ್ಸಿನ ಹಂಗಿಲ್ಲದ ಕಲಿಕೆ, ಎಲ್ಲವನ್ನು ಕಳೆದುಕೊಂಡಾಗಲೂ ಧೃತಿಗೆಡದೆ ಮತ್ತೆ ಎದ್ದು ನಿಲ್ಲುವುದು, ಸಮಾಜದಲ್ಲಿಶಕ್ತಿಯಾಗಿ ನಿಲ್ಲಬೇಕು ಎನ್ನುವ ಕನಸು, ಸಮೂಹದ ಕುರಿತಾದ ಕಾಳಜಿ, ನಾಯಕತ್ವ ಗುಣ - ಇವೆಲ್ಲವೂ ಕಲಿಕೆಗೆ ಯೋಗ್ಯವಾಗಿವೆ. ಭಾರತದ ಹಲವಾರು ಮೊದಲುಗಳಿಗೆ ನಾಯ್ಡು ಅವರೇ ಕಾರಣ ಎನ್ನುವುದನ್ನು ತೋರಿಸಿದ್ದಾರೆ. ಜಿ.ಡಿ.ನಾಯ್ಡು ಎಂಬ ಶಕ್ತಿಯ ಬಗ್ಗೆ ಅರಿತು, ಪ್ರೇರಣೆ ಪಡೆಯುವುದಕ್ಕಾಗಿಯೇ ಈ ಚಿತ್ರವನ್ನು ನೋಡಬೇಕು.

ಸಚಿನ್ ಹೊನ್ನೇಸರ