ಹೊಸದಿಲ್ಲಿ: ತೀವ್ರ ಬರಗಾಲ ಹಾಗೂ ಕುಡಿಯುವ ನೀರಿನ ಅಭಾವದಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಮತ್ತೊಂದು ‘ಕಾವೇರಿ’ ಆಘಾತ ತಟ್ಟಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು (ಸಿಡಬ್ಲ್ಯೂಆರ್ ಸಿ) ತಮಿಳುನಾಡಿಗೆ ನೀರು ಬಿಡುವಂತೆ ಮಾಡಿದ್ದ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯೂಎಂಎ) ಎತ್ತಿಹಿಡಿದಿದೆ. ಇದರೊಂದಿಗೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 3,000 ಕ್ಯುಸೆಕ್ ನೀರನ್ನು ಹರಿಸುವಂತೆ ಪ್ರಾಧಿಕಾರವು ಕರ್ನಾಟಕಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ.ಸಿಡಬ್ಲ್ಯಆರ್ ಸಿ ಮಾಡಿದ್ದ ನೀರು ಹಂಚಿಕೆಯ ಶಿಫಾರಸನ್ನು ಪ್ರಶ್ನಿಸಿ ಕರ್ನಾಟಕ ಸಲ್ಲಿಕೆ ಮಾಡಿದ್ದ ಆಕ್ಷೇಪಣೆಯ ಹಿನ್ನೆಲೆಯಲ್ಲಿ, ದಿಲ್ಲಿಯಲ್ಲಿಶುಕ್ರವಾರ ಪ್ರಾಧಿಕಾರದ ಸಭೆ ನಡೆಯಿತು. ಮುಂದಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಬರುವ ನವೆಂಬರ್ 6 ರಂದು ನಡೆಸಲು ತೀರ್ಮಾನಿಸಲಾಗಿದೆ.
ಇದಕ್ಕೂ ಮುನ್ನ, ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3,000 ಕ್ಯುಸೆಕ್ ನೀರು ಹರಿಸುವಂತೆ ‘ಸಿಡಬ್ಲ್ಯೂಆರ್ ಸಿ’ ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸಿಗೆ ಕರ್ನಾಟಕ ಸರಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇಡೀ ಕರ್ನಾಟಕದಲ್ಲಿ, ಅದರಲ್ಲೂಪ್ರಮುಖವಾಗಿ ಕಾವೇರಿ ಜಲಾನಯನ ಪ್ರದೇಶದ ಬಹುತೇಕ ತಾಲ್ಲೂಕುಗಳಲ್ಲಿಬರಗಾಲ ಘೋಷಣೆಯಾಗಿದೆ. ನಮ್ಮಲ್ಲೇ ಕುಡಿಯಲು ಹಾಗೂ ಕೃಷಿಗೆ ತೀವ್ರ ನೀರಿನ ಅಭಾವವಿರುವಾಗ ತಮಿಳುನಾಡಿಗೆ ಯಾವುದೇ ಕಾರಣಕ್ಕೂ 3,000 ಕ್ಯುಸೆಕ್ ನೀರನ್ನು ಹರಿಸಲು ಸಾಧ್ಯವೇ ಇಲ್ಲಎಂದು ಕರ್ನಾಟಕ ಹೇಳಿತ್ತು.
ಕರ್ನಾಟಕದ ಅಧಿಕಾರಿಗಳು ರಾಜ್ಯದ ವಾಸ್ತವ ಬರಗಾಲದ ಪರಿಸ್ಥಿತಿಯನ್ನು ಪ್ರಾಧಿಕಾರದ ಮುಂದೆ ಮನವರಿಕೆ ಮಾಡಿಕೊಡಲು ಸತತ ಯತ್ನ ನಡೆಸಿದರೂ, ಅಂತಿಮವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ‘ಸಿಡಬ್ಲ್ಯೂಆರ್ ಸಿ’ ನೀಡಿದ್ದ ಶಿಫಾರಸನ್ನೇ ಎತ್ತಿಹಿಡಿದಿದೆ.