ಮಾಗಡಿ ರಸ್ತೆ ಸಮೀಪದ ಬಿನ್ನಿಪೇಟೆಯ ಚಿನ್ನಾಭರಣ ಮಳಿಗೆಗೆ ಗ್ರಾಹಕನ ಸೋಗಿನಲ್ಲಿಬಂದಿದ್ದ ವ್ಯಕ್ತಿ ಆಭರಣ ಕದ್ದು ಪರಾರಿಯಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.ಬಿನ್ನಿಪೇಟೆಯ ಅಂಜನ್ ಚಿತ್ರಮಂದಿರದ ಬಳಿಯ ರಾಜರಾಜೇಶ್ವರಿ ಚಿನ್ನಾಭರಣ ಮಳಿಗೆಗೆ ಗುರುವಾರ ಮಧ್ಯಾಹ್ನ ಗ್ರಾಹಕನ ಸೋಗಿನಲ್ಲಿಬಂದಿದ್ದ ಅಪರಿಚಿತ ವ್ಯಕ್ತಿ, ಮಾಲೀಕರಿಗೆ ಯಾಮಾರಿಸಿ 10 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ. ಮಳಿಗೆ ಮಾಲೀಕರು, ಕಪಾಟಿನಿಂದ ಮತ್ತೊಂದು ಸರ ತರಲು ಹೋದಾಗ ಕಳ್ಳ ಆಭರಣದೊಂದಿಗೆ ಕಾಲ್ಕಿತ್ತಿದ್ದಾನೆ. ಕಳ್ಳನ ಕುಕೃತ್ಯ ಮಳಿಗೆಯ ಸಿ.ಸಿ ಕ್ಯಾಮೆರಾಗಳಲ್ಲಿಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವಾಗಿರುವ ಸರದ ಮೌಲ್ಯ ಸುಮಾರು 1.5 ಲಕ್ಷ ರೂ. ಎಂದು ಮಾಲೀಕರು ದೂರು ಕೊಟ್ಟಿದ್ದಾರೆ. ಸಿ.ಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.