ಉ. ಪ್ರದೇಶದಲ್ಲಿ200 ಕ್ಷೇತ್ರಗಳಿಗೆ ಕಾಂಗ್ರೆಸ್ ಡಿಮ್ಯಾಂಡ್

Contributed by: Beeralinge gowda|Vijaya Karnataka•
uttar pradesh assembly elections congress demands 200 seats for labor party
* ಮುಂಬರುವ ವಿಧಾನಸಭೆ ಚುನಾವಣೆಗೆ ಕೈ-ಸೈಕಲ್ ನಡುವೆ ಸೀಟು ಹಂಚಿಕೆ ಸರ್ಕಸ್ ಶುರು

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿಕ್ಷೇತ್ರಗಳ ಹೊಂದಾಣಿಕೆ ಮಾತುಕತೆ ನಡುವೆ 200 ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ಮೈತ್ರಿ ಪಕ್ಷ ಸಮಾಜವಾದಿ ಪಕ್ಷದ (ಎಸ್ ಪಿ) ಎದುರು ಕಾಂಗ್ರೆಸ್ ಅಹವಾಲು ಮಂಡಿಸಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿಆರು ಸ್ಥಾನ ಗೆದ್ದುಕೊಂಡಿದ್ದ ಕಾಂಗ್ರೆಸ್ , 2024ರ ಚುನಾವಣಾ ಪ್ರದರ್ಶನದ ಆಧಾರದ ಮೇಲೆ ಅಧಿಕ ಸ್ಥಾನ ನೀಡುವಂತೆ ಬೇಡಿಕೆ ಮುಂದಿಟ್ಟಿದೆ. ಸಾರ್ವತ್ರಿಕ ಚುನಾವಣಾ ಫಲಿತಾಂಶದ ಆಧಾರದ ಮೇಲೆ ವಿಧಾನಸಭಾ ಕ್ಷೇತ್ರಗಳನ್ನು ಎ, ಬಿ, ಸಿ, ಡಿ ಎಂದು ವರ್ಗೀಕರಿಸಲಾಗಿದ್ದು, ವಿಧಾನಸಭಾ ಕ್ಷೇತ್ರವಾರು ತೋರಿದ ಸಾಧನೆ ಮೇಲೆ 200 ಕ್ಷೇತ್ರಗಳಲ್ಲಿಸ್ಪರ್ಧೆಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ17 ಸ್ಥಾನಗಳಲ್ಲಿಸ್ಪರ್ಧಿಸಿದ್ದ ಕಾಂಗ್ರೆಸ್ ರಾಯ್ ಬರೇಲಿ, ಅಮೇಠಿ, ಬಾರಾಬಂಕಿ, ಸೀತಾಪುರ, ಸಹರಣ್ ಪುರ, ಅಲಹಾಬಾದ್ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

‘‘ರಾಜ್ಯದಲ್ಲಿಹಮ್ಮಿಕೊಂಡಿರುವ ‘ಸಂಘಟನ್ ಸೃಜನ್ ಅಭಿಯಾನ’ದ ಬಳಿಕ ಪಕ್ಷದ ಸಾಂಸ್ಥಿಕ ಶಕ್ತಿಯು ಗಣನೀಯವಾಗಿ ಹೆಚ್ಚಾಗಿದೆ. 200ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿಪಕ್ಷದ ಪ್ರಾಬಲ್ಯ ಹೆಚ್ಚಿದೆ,’’ ಎಂದು ಪಕ್ಷದ ನಾಯಕರೊಬ್ಬರು ಹೇಳಿಕೊಂಡಿದ್ದಾರೆ.

--(ಬಾಕ್ಸ್ ))

ನ.15ಕ್ಕೆ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣ, ಪ್ರಿಯಾಂಕಾ ನಿಗಾ

ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ನಡೆಯುತ್ತಿರುವ ಸ್ಥಾನ ಹೊಂದಾಣಿಕೆ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆ ನ.15ರೊಳಗೆ ಪೂರ್ಣಗೊಳ್ಳಲಿದೆ. ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಉಭಯ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಲು ನಿರ್ಧರಿಸಲಾಗಿದೆ.

ಸೀಟು ಹಂಚಿಕೆ ಸಂಬಂಧ ಎಸ್ ಪಿ ಹಾಗೂ ಕಾಂಗ್ರೆಸ್ ವರಿಷ್ಠರ ನಡುವೆ ಮಾತುಕತೆಗಳು ಮುಂದುವರಿದಿವೆ. ವಯನಾಡು ಸಂಸದೆಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಸ್ಥಾನ ಹೊಂದಾಣಿಕೆ ಪ್ರಕ್ರಿಯೆಯ ಮೇಲೆ ನಿಗಾ ಇರಿಸಿದ್ದಾರೆ.

‘‘ವಿಧಾನಸಭಾ ಚುನಾವಣೆಯನ್ನು ‘ಐಎನ್ ಡಿಐಎ’ ಮೈತ್ರಿಕೂಟ ಒಟ್ಟಾಗಿ ಎದುರಿಸಲಿದೆ. ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಒಗ್ಗಟ್ಟಾಗಿ ಹೋರಾಟ ನಡೆಸಲಿವೆ. ಸ್ಥಾನ ಹಂಚಿಕೆಯ ವಿಷಯವಾಗಿ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ,’’ ಎಂದು ಎಸ್ ಪಿ ನಾಯಕ ರಾಮಾಶಂಕರ್ ರಾಜ್ ಭರ್ ಹೇಳಿದ್ದಾರೆ.