ಹೃದಯಹೀನ ಸರಕಾರ; ಅಶೋಕ್ ಟೀಕೆ

Contributed by: raju.manjunath67@gmail.com|Vijaya Karnataka•
a ashok this is a heartless government
ಹೃದಯಹೀನ ಸರಕಾರ; ಅಶೋಕ್ ಟೀಕೆ

ವಿಕ ಸುದ್ದಿಲೋಕ, ರಾಮನಗರ: ವಿಶೇಷಚೇತನರ ಸಮಸ್ಯೆಗೂ ಸ್ಪಂದಿಸದ ಈ ಸರಕಾರಕ್ಕೆ ಹೃದಯ ಇಲ್ಲ. ಇದೊಂದು ಬಂಡೆ ಸರಕಾರ ಎಂದು ವಿಪಕ್ಷ ನಾಯಕ ಆರ್ . ಅಶೋಕ್ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಶೇಷಚೇತನ ಗೌರವಧನ ಕಾರ್ಯಕರ್ತರು 11ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಅವರು ಹೋರಾಟಕ್ಕೆ ಬೆಂಬಲ ನೀಡಿದರು.

ಈ ವೇಳೆ ಹೋರಾಟಗಾರರ ಅಹವಾಲುಗಳನ್ನು ಆಲಿಸಿದ ಅವರು, ಮುಖ್ಯಮಂತ್ರಿ ಜಿಲ್ಲೆಯಲ್ಲೇ ಪ್ರತಿಭಟನೆ ನಡೆಯುತ್ತಿದೆ. ಅವರೇ ನಾಲ್ಕು ಜನ ಶಾಸಕರಿದ್ದಾರೆ. ನಿತ್ಯ ಇದೇ

ದಾರಿಯಲ್ಲಿಓಡಾಡುತ್ತಾರೆ. ಆದರೂ ವಿಶೇಷಚೇತನರಿಗೆ ಏನು ಭರವಸೆ ನೀಡದೆ ಕಾಲಹರಣ ಮಾಡುತ್ತಿದ್ದಾರೆ. ಇದೊಂದು ಹೃದಯಹೀನ ಸರಕಾರ ಎಂದರು ಟೀಕಿಸಿದರು.

ಕಳೆದ 6 ತಿಂಗಳಿಂದ ಯಾರಿಗೂ ಪೆನ್ಷನ್ ಬರುತ್ತಿಲ್ಲ. ಕೇಳಿದರೆ ಸರ್ವೆ ಮಾಡುತ್ತಿದ್ದೇವೆ ಎನ್ನುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸ್ವಾತಂತ್ರ ಬಂದಾಗಿನಿಂದಲೂ ಸರ್ವೆ ನಡೆಯುತ್ತಿದೆ. ಹೊಸದಾಗಿ ಮಾಡುವ ಅವಶ್ಯಕತೆ ಏನಿದೆ. ಮಾಡುವುದೇ ಆದರೆ, ಸರ್ವೆ ಮಾಡುವುದನ್ನು ಕಳೆದ 6 ತಿಂಗಳಿಂದ ಪೆನ್ಷನ್ ತಡೆಹಿಡಿಯುವುದಕ್ಕು ಏನು ಸಂಬಂಧ ಎಂದು ಪ್ರಶ್ನಿಸಿದರು.

ಫೈನಾನ್ಸ್ ಡಿಪಾರ್ಟ್ ಮೆಂಟ್ ನಮ್ಮ ಹತ್ರ ದುಡ್ಡಿಲ್ಲ, ಸರಕಾರ ಪಾಪರ್ ಆಗಿದೆ ಎಂದು ಸಿಎಂಗೆ ನೋಟಿಸ್ ಕೊಟ್ಟಿದೆ. ದುಡ್ಡಿಲ್ಲಎಂದು ಜನರ ಮುಂದೆ ಹೇಳಿಬಿಡಿ. ಸರಕಾರಕ್ಕೆ ದೇಣಿಗೆ ಕೊಡಿ ಎಂದು ಕೇಳಿ. ಬೆಂಗಳೂರು ಸಚಿವರು ರಸ್ತೆಗೆ ಜಲ್ಲಿಹಾಕಿಸಿ ಎಂದು ಎಂಜಿನಿಯರ್ ಗೆ ಕೈಮುಗಿದು ಬೇಡುವ ಪರಿಸ್ಥಿತಿ ಬಂದಿದೆ ಈ ಸರಕಾರಕ್ಕೆ. ಇಲ್ಲಿನ ಉಸ್ತುವಾರಿ ಸಚಿವರು ನಿಮ್ಮ ಬಳಿ ಬಂದು ದುಡ್ಡಿಲ್ಲ, ಗ್ಯಾರಂಟಿ ತಂದು ಅಭಿವೃದ್ಧಿ ಮಾಡಲು ಆಗುತ್ತಿಲ್ಲಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದರು.

ಸೇವೆ ಕಾಯಂ ಮಾಡುವುದು, ಬಾಕಿ ಪೆನ್ಷನ್ ಹಣ ಬಿಡುಗಡೆ, ಮಾಸಾಶನ 5 ಸಾವಿರಕ್ಕೆ ಹೆಚ್ಚಿಸುವುದು ಸರಕಾರದ ಕರ್ತವ್ಯ. ಪಾದಯಾತ್ರೆ, ಧರಣಿ, ಉಪವಾಸ ಎಲ್ಲಮಾಡಿದ್ದೀರಿ, ಆದರೂ ಸರಕಾರ ಇಲ್ಲಿಗೆ ಬಂದು ಯಾವುದೇ ಭರವಸೆ ನೀಡಿಲ್ಲ. ಇದೊಂದು ಮಾನವೀಯತೆಯ ಪ್ರಶ್ನೆ. ಕಾಯಂ ಮಾಡಲು ಕಾನೂನು ತೊಡಕು ಎನ್ನುತ್ತೀರಿ. ಏನಿದೆ ತೊಡಕು? ಮೊದಲು ಸಮಿತಿ ಮಾಡಿ. ಕಾನೂನು ಸಮಸ್ಯೆ ಇದ್ದರೆ ಅಧಿವೇಶನಕ್ಕೆ ತನ್ನಿ ಕಾನೂನು ತಿದ್ದುಪಡಿ ಮಾಡೋಣ. ನಾವು ಬೆಂಬಲ ಕೊಡುತ್ತೇವೆ ಎಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

------

ಫೋಟೊ:

01ಆರ್ ಎನ್ ಆರ್ ಎಂ1:

ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ವಿಶೇಷಚೇತನ ಕಾರ್ಯಕರ್ತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ವಿಪಕ್ಷ ನಾಯಕ ಆರ್ .ಅಶೋಕ್ ಅವರು ಭೇಟಿ ನೀಡಿ ಬೆಂಬಲ ನೀಡಿದರು.