‘ಫಾರಂ-7’ ಅರ್ಜಿಗಳಿಗೆ ಮಿತಿ ಹೇರಿದ ಆಯೋಗ

Contributed by: vijay.cheelange@timesgroup.com|Vijaya Karnataka•
maximum limit imposed on your form 7 applications with new rules for voter list purification
* ಒಬ್ಬರಿಂದ ಗರಿಷ್ಠ 10 ಅರ್ಜಿ

* ಕರ್ನಾಟಕ ಮತ್ತು ಒಡಿಶಾದಲ್ಲಿದೂರಿನ ಹಿನ್ನೆಲೆಯಲ್ಲಿಕ್ರಮ
ಹೊಸದಿಲ್ಲಿ: ಮತದಾರರ ಪಟ್ಟಿಯಿಂದ ಮೃತರು ಹಾಗೂ ಅನಧಿಕೃತವಾದ ಹೆಸರುಗಳನ್ನು ಅಳಿಸುವಂತೆ ಕೆಲವರು ‘ಫಾರಂ-7’ ಅರ್ಜಿಗಳನ್ನು ಗುಂಪು ಗುಂಪಾಗಿ ಸಲ್ಲಿಸುತ್ತಿರುವ ವರದಿಗಳ ಹಿನ್ನೆಲೆಯಲ್ಲಿಚುನಾವಣಾ ಆಯೋಗ (ಇಸಿ) ಹೊಸ ನಿಯಮ ಜಾರಿಗೆ ತಂದಿದೆ. ಇನ್ನು ಮುಂದೆ ಮತದಾರರ ಪಟ್ಟಿಯ ಪರಿಷ್ಕರಣೆ ಅವಧಿಯಲ್ಲಿಒಬ್ಬ ವ್ಯಕ್ತಿ ಗರಿಷ್ಠ 10 ಫಾರಂ-7 ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದು. ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ಸಂದರ್ಭದಲ್ಲಿಈ ಮಿತಿ ತಿಂಗಳಿಗೆ ಐದು ಅರ್ಜಿಗಳಿಗೆ ಸೀಮಿತವಾಗಿರಲಿದೆ. ಮತದಾರರ ಪಟ್ಟಿಯಲ್ಲಿಸೇರಿರುವ ವ್ಯಕ್ತಿಯ ಹೆಸರನ್ನು ತೆಗೆದುಹಾಕಲು ಅಥವಾ ಹೆಸರು ಸೇರ್ಪಡೆಗೆ ಆಕ್ಷೇಪ ಸಲ್ಲಿಸಲು ಫಾರಂ-7 ಬಳಸಲಾಗುತ್ತದೆ. ಆಧಾರರಹಿತ ಹಾಗೂ ಸಾಮೂಹಿಕ ಆಕ್ಷೇಪಣೆಗಳನ್ನು ತಡೆಯುವುದು, ಮತದಾರರಿಗೆ ಉಂಟಾಗುವ ತೊಂದರೆ ಕಡಿಮೆ ಮಾಡುವುದು ಮತ್ತು ಚುನಾವಣಾಧಿಕಾರಿಗಳ ಮೇಲಿನ ಕೆಲಸದ ಒತ್ತಡ ಇಳಿಸುವುದು ಹೊಸ ಕ್ರಮದ ಉದ್ದೇಶವಾಗಿದೆ.

ಕರ್ನಾಟಕ ಮತ್ತು ಒಡಿಶಾದಲ್ಲಿಕೆಲವರು ಇಂತಹ ಅರ್ಜಿಗಳನ್ನು ದೊಡ್ಡ ಪ್ರಮಾಣದಲ್ಲಿಸಲ್ಲಿಸಿರುವ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿಎಲ್ಲರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ (ಸಿಇಒ) ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಪ್ರತಿ ಅರ್ಜಿಗೂ ಪ್ರತ್ಯೇಕ ವಿಚಾರಣೆ: ಪರಿಷ್ಕೃತ ವ್ಯವಸ್ಥೆಯಡಿ, ಚುನಾವಣಾ ನೋಂದಣಿ ಅಧಿಕಾರಿ (ಇಆರ್ ಒ) ಮೊದಲು ಆಕ್ಷೇಪ ಸಲ್ಲಿಸಿದ ವ್ಯಕ್ತಿಗೆ ನೋಟಿಸ್ ನೀಡಬೇಕು. ಬಳಿಕ ಆಕ್ಷೇಪದಾರರನ್ನು ವೈಯಕ್ತಿಕವಾಗಿ ವಿಚಾರಿಸಿ, ಪ್ರತಿ ಫಾರಂ-7 ಅರ್ಜಿಗೂ ಪ್ರತ್ಯೇಕ ಹೇಳಿಕೆ ದಾಖಲಿಸಬೇಕು. ಆಕ್ಷೇಪದಲ್ಲಿಸತ್ಯಾಸತ್ಯತೆ ಇದೆ ಎಂದು ಇಆರ್ ಒಗೆ ಖಚಿತವಾದ ಬಳಿಕವೇ, ನೋಂದಣಿ ಮತದಾರರ ನಿಯಮಗಳು, 1960ರ ನಿಯಮ 19 ಮತ್ತು 20ರಂತೆ ಅರ್ಜಿಯನ್ನು ವಿಲೇವಾರಿ ಮಾಡಬೇಕು. ಹೆಸರು ಅಳಿಸಲು ಉದ್ದೇಶಿಸಿರುವ ಮತದಾರನಿಗೂ ಕಡ್ಡಾಯವಾಗಿ ವಿಚಾರಣೆಯ ಅವಕಾಶ ನೀಡಬೇಕು. ಆಧಾರರಹಿತ ಅಥವಾ ಸುಳ್ಳು ಆಕ್ಷೇಪಣೆಗಳಿಂದ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ನಿರ್ದೇಶನಗಳನ್ನು ಇಆರ್ ಒಗಳು, ಸಹಾಯಕ ಇಆರ್ ಒಗಳು ಹಾಗೂ ಕ್ಷೇತ್ರಮಟ್ಟದ ಸಿಬ್ಬಂದಿಗೆ ತಿಳಿಸಿ, ಸಾರ್ವಜನಿಕರಿಗೆ ಸೂಕ್ತ ಪ್ರಚಾರ ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಯೋಗ ಸೂಚಿಸಿದೆ.