ರಾಜ್ಯದ ಸಾರ್ವಜನಿಕ ವಿಶ್ವ ವಿದ್ಯಾಲಯಗಳು ಸಿಬ್ಬಂದಿ ಕೊರತೆ, ಮೂಲಸೌಕರ್ಯ ಇಲ್ಲದೆ ನರಳುತ್ತಿವೆ. ನಿವೃತ್ತ ನೌಕರರ ಪಿಂಚಣಿ ಪಾವತಿಗೂ ವಿದ್ಯಾರ್ಥಿ ಶುಲ್ಕ ಅವಲಂಬಿಸುವ ಸ್ಥಿತಿ ಇದ್ದು, ಶೈಕ್ಷಣಿಕ ಗುಣಮಟ್ಟದ ಮೇಲೆ ಪೆಟ್ಟು ಬೀಳುತ್ತಿದೆ. ಈ ಹೊತ್ತಿನಲ್ಲಿಸರಕಾರ ವಿವಿಗಳ ಆರ್ಥಿಕ ಪರಿಸ್ಥಿತಿ ಪರಾಮರ್ಶೆಗೆ ಸಚಿವ ಸಂಪುಟ ಉಪಸಮಿತಿ ರಚಿಸಿರುವುದು ವಿವಿಗಳಿಗೆ ಆರ್ಥಿಕ ಶಕ್ತಿ ಸಿಗುವ ನಿರೀಕ್ಷೆ ಮೂಡಿದೆ.
ಕರ್ನಾಟಕದ 32 ವಿವಿಗಳೂ ಆರ್ಥಿಕ ಸಂಕಷ್ಟದ ಹೊರೆ ಹೊತ್ತು ಮೇಲೇಳಲಾಗದೆ ಮಲಗುತ್ತಿವೆ. ಮೈಸೂರು, ಧಾರವಾಡದಂತಹ ಹಳೇ ವಿವಿಗಳಿಗೆ ನೌಕರರ ಪಿಂಚಣಿ ಕೂಡಲೂ ದುಡ್ಡಿಲ್ಲ. ಕ್ಯಾಂಪಸ್ ಗೆ ಹೋದರೆ ರಸ್ತೆ, ಚರಂಡಿ, ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳೂ ಮರೀಚಿಕೆ. ಹೊಸ ಕಟ್ಟಡ ನಿರ್ಮಾಣದ ಸುದ್ದಿ ಕೇಳುವುದೇ ಸೌಭಾಗ್ಯದಂತಾಗಿದೆ. ಆಂತರಿಕ ಸಂಪನ್ಮೂಲ ಪಿಂಚಣಿಗೆ ಹೋಗುತ್ತಿರುವುದರಿಂದ ಅಭಿವೃದ್ಧಿಗೆ ಪ್ರವೇಶ ಶುಲ್ಕ ಹೆಚ್ಚಿಸಲಾಗುತ್ತಿದೆ. ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿಯುತ್ತಿದೆ.
1991ರವರೆಗೆ ಕರ್ನಾಟಕದಲ್ಲಿ6 ವಿಶ್ವ ವಿದ್ಯಾಲಯಗಳಿದ್ದವು. ಆಂತರಿಕ ಸಂಪನ್ಮೂಲ 100ರಿಂದ 200 ಕೋಟಿ ರೂ.ಗೂ ಅಧಿಕವಿತ್ತು. ತದನಂತರ ವಿವಿಗಳ ಸಂಖ್ಯೆ ಹೆಚ್ಚಿದಂತೆ ಆಂತರಿಕ ಸಂಪನ್ಮೂಲ ಹಂಚಿಹೋಗಿದೆ. ಪಿಂಚಣಿದಾರರ ಸಂಖ್ಯೆ ಅಧಿಕಗೊಂಡಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ಮುಕ್ತ ವಿವಿ ಆರಂಭಗೊಂಡು ದೂರಸಂಪರ್ಕ ಕೋರ್ಸ್ (ಬಾಹ್ಯ)ನಿಂದ ಬರುವ ಆದಾಯವೂ ವಿವಿಗಳಿಗೆ ಖೋತಾ ಆಗಿದೆ. ಇಷ್ಟಾದರೂ ಖಾಲಿ ಹುದ್ದೆ ಭರ್ತಿ ಮಾಡದ ಸರಕಾರ ಅಲ್ಲಿನೇಮಕಗೊಳ್ಳುವ ಅತಿಥಿ ಉಪನ್ಯಾಸಕರು, ಗುತ್ತಿಗೆ ನೌಕರರಿಗೆ ಆಂತರಿಕ ಸಂಪನ್ಮೂಲದಲ್ಲೇ ವೇತನ ನೀಡಲು ಹೇಳಿ ವಿವಿಗಳಿಗೆ ದೊಡ್ಡಪೆಟ್ಟು ಹಾಕಿದೆ.
ಅನುದಾನಕ್ಕೂ ಖೋತಾ
ಸರಕಾರಗಳು ವಿವಿಗಳಿಗೆ ನೀಡುತ್ತಿರುವ ಅನುದಾನವನ್ನೂ ಹಂತಹಂತವಾಗಿ ಕಡಿತ ಮಾಡುತ್ತಲೇ ಬಂದಿವೆ. 2015-16ರಲ್ಲಿರಾಜ್ಯ ಸರಕಾರ 32 ವಿವಿಗಳಿಗೆ 872.33ಕೋಟಿ ಅನುದಾನ ಒದಗಿಸಿತ್ತು. 2025-26ರಲ್ಲಿ573.58ಕೋಟಿ ರೂ. ಅನುದಾನ ನೀಡಿದೆ. ಅಂದರೆ ಸರಕಾರಗಳು ವಿವಿಗಳಿಗೆ ವೇತನ, ಪಿಂಚಣಿಗೆ ಮಾತ್ರ ಹಣ ನೀಡುತ್ತಿದ್ದು, ಅಭಿವೃದ್ಧಿಗೆ ಹಣ ಕೇಳಬೇಡಿ ಎಂಬ ಸಂದೇಶವನ್ನು ನೀಡುತ್ತಲೇ ಬಂದಿವೆ. ಈ ಮಧ್ಯೆ ಹೊಸ ವಿವಿಗಳ ಘೋಷಿಸಿ ಅವುಗಳ ಅಭಿವೃದ್ಧಿಗೆ ದುಡ್ಡು ಕೊಡುತ್ತಿಲ್ಲ. ಬೆಳಗಾವಿಯ ವಿತಾವಿ(ವಿಟಿಯು) 1999ರಿಂದಲೂ ಅನುದಾನ ನೀಡಿಲ್ಲ. ಒಟ್ಟಾರೆ ರಾಜ್ಯ ಸರಕಾರಕದ ಬಜೆಟ್ ಪ್ರಮಾಣ ಹೆಚ್ಚುತ್ತಿದ್ದರೂ ವಿವಿಗಳಿಗೆ ನೀಡುತ್ತಿರುವ ಅನುದಾನ 10 ವರ್ಷಗಳಿಂದ ಯಥಾಸ್ಥಿತಿಯಲ್ಲೇ ಇದೆ. ಹೀಗಾಗಿ 80-90 ವರ್ಷಗಳ ಹಳೇ ಕಟ್ಟಡಗಳ ನಿರ್ವಹಣೆಯೂ ವಿವಿಗಳಿಗೆ ದುಬಾರಿ ಆಗಿದೆ. ಈ ಎಲ್ಲಅಂಶಗಳನ್ನು ಈ ಸಂಪುಟ ಉಪಸಮಿತಿ ಪರಾಮರ್ಶಿಸಿ ವಿವಿಗಳನ್ನು ಬಲಗೊಳಿಸುವ ಆಶಯ ಎಲ್ಲರದ್ದಾಗಿದೆ.
ಬಾಕ್ಸ್ ..
ಉಪಸಮಿತಿಗೆ ಕೃಷ್ಣಬೈರೇಗೌಡ ಅಧ್ಯಕ್ಷ
ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯ ಸಂಪುಟ ಉಪಸಮಿತಿಯು ಎಲ್ಲವಿವಿಗಳ ಆರ್ಥಿಕ ಪರಿಸ್ಥಿತಿ ಪರಾಮರ್ಶಿಸಿ ಸರಕಾರಕ್ಕೆ ಶಿಫಾರಸ್ಸು ಮಾಡಲಿದೆ. ಯಾವ ವಿವಿ ಎಷ್ಟು ಆರ್ಥಿಕ ಸಂಪನ್ಮೂಲ ಹೊಂದಿದೆ? ಅಭಿವೃದ್ಧಿಗೆ ಬೇಕಾದ ಅನುದಾನ ಎಷ್ಟು? ಆರ್ಥಿಕ ಬಲವರ್ಧನೆಗೆ ಏನೆಲ್ಲಮಾಡಬಹುದು ಎಂಬುದರ ಬಗ್ಗೆ ಪರಾಮರ್ಶಿಸಿ ಸಲಹೆಸೂಚನೆ ನೀಡಲಿದೆ. ಇದು ಫಲಕೊಟ್ಟಲ್ಲಿಹಣಕಾಸಿನ ಬಲವಿಲ್ಲದೆ ಉಸಿರಾಟ ನಿಲ್ಲಿಸುತ್ತಿದ್ದ ವಿವಿಗಳಿಗೆ ಸರಕಾರ ಆಕ್ಸಿಜನ್ ಸಿಕ್ಕಂತಾಗಲಿದೆ. ಉಪಸಮಿತಿ ಸದಸ್ಯರಾಗಿ ಸಚಿವರಾದ ಬಸವರಾಜ ರಾಯರೆಡ್ಡಿ, ಡಾ. ಶರಣಪ್ರಕಾಶ ಪಾಟೀಲ್ , ಸಂತೋಷ ಲಾಡ್ , ಪಿ.ಎಂ. ನರೇಂದ್ರಸ್ವಾಮಿ, ಎಚ್ .ಸಿ. ಬಾಲಕೃಷ್ಣ ಪರಾಮರ್ಶೆ ನಡೆಸಲಿದ್ದಾರೆ.
ಬಾಕ್ಸ್ ..
ಸ್ಕಾಲರ್ ಶಿಪ್ ಕಡಿತ
ಕರ್ನಾಟಕ ವಿಶ್ವ ವಿದ್ಯಾಲಯಯು ಪಿಎಚ್ ಡಿ ವಿದ್ಯಾರ್ಥಿಗಳಿಗೆ ತಲಾ 10ಸಾವಿರ ರೂ. ಯು.ಆರ್ .ಎಸ್ . ಸ್ಕಾಲರ್ ಶಿಪ್ ನೀಡುತ್ತಿತ್ತು. ಹಣಕಾಸಿನ ಸಮಸ್ಯೆ ಕಾರಣ ಕಳೆದ ವರ್ಷದಿಂದ ಇದನ್ನು ತಲಾ 6ಸಾವಿರ ರೂ. ಗಳಿಗೆ ಇಳಿಸಿದೆ. ಅಷ್ಟೇ ಏಕೆ ವಿದ್ಯಾರ್ಥಿಗಳಿಂದ ಎನಹಾನ್ಸ್ ಫೀ ಹೆಸರಿನಲ್ಲಿಖಾಸಗಿ ಕಾಲೇಜುಗಳು ಮ್ಯಾನೇಜ್ ಮೆಂಟ್ ಕೋಟಾ ಹೆಸರಿನಲ್ಲಿಪಡೆಯುವಂತೆ ಅನಿರೀಕ್ಷಿತ ಶುಲ್ಕ ನಿಗದಿಗೊಳಿಸಿದೆ. ಇದೆಲ್ಲವೂ ವಿವಿಗಳ ಹಣಕಾಸಿನ ಸ್ಥಿತಿಯ ಅಧೋಗತಿಯನ್ನು ಸಾರುತ್ತದೆ.
ಕೋಟ್ ..
ವಿವಿಗಳ ಆರ್ಥಿಕ ಸ್ಥಿತಿ ಪರಾಮರ್ಶೆಗೆ ಸಚಿವ ಸಂಪುಟ ಉಪಸಮಿತಿ ರಚಿಸಿರುವುದು ಸ್ವಾಗತರ್ಹ. ಕವಿವಿಗೆ ವರ್ಷಕ್ಕೆ 136ಕೋಟಿ ರೂ. ಪೆನ್ಶನ್ ಗೆ ಬೇಕು. ಸರಕಾರ ಈಗ 67.50ಕೋಟಿ ರೂ. ಕೊಟ್ಟಿದೆ. ಈ ವ್ಯತ್ಯಾಸದ ಹಣವನ್ನು ಹೊಂದಿಸುವುದು ಕಷ್ಟವಾಗಿದೆ. ಈ ವಿಚಾರವನ್ನು ಸಮಿತಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ.