ಮಂಗಳೂರು : ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜತೆಗೆ ಪರಿಸರ, ಪ್ರಕೃತಿ ಹಾಗೂ ಜಲಚರ ಸಂಪನ್ಮೂಲಗಳ ಕುರಿತು ಸಾರ್ವಜನಿಕರಲ್ಲಿಅರಿವು ಮೂಡಿಸುವ ಉದ್ದೇಶದಿಂದ ಅ. 25 ರಂದು ಪಿಲಿಕುಳದ ಲೇಕ್ ಗಾರ್ಡನ್ ನಲ್ಲಿಮತ್ಸ್ಯ ಮೇಳ, ಕೆರೆಗೆ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮ ಹಾಗೂ ಮತ್ಸ್ಯ ಆಹಾರ ಮೇಳ ಆಯೋಜಿಸಲಾಗಿದೆ. ಬೆಳಗ್ಗೆ 9.30ರಿಂದ ಲೇಕ್ ಗಾರ್ಡನ್ ನ ಕೆರೆಯಲ್ಲಿರುವ ಮೀನುಗಳನ್ನು ಹಿಡಿಯುವ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಕೆರೆಗೆ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಮತ್ಸ್ಯ ಮೇಳದ ಅಂಗವಾಗಿ ಲೇಕ್ ಗಾರ್ಡನ್ ನ ಮುಂಭಾಗದಲ್ಲಿಸಾರ್ವಜನಿಕರಿಗಾಗಿ ವಿಶೇಷ ಮೀನಿನ ಖಾದ್ಯಗಳ ಆಹಾರ ಮೇಳ ಆಯೋಜಿಸಲಾಗುತ್ತಿದೆ. ಮಂಗಳೂರಿನ ಹೋಟೆಲ್ ಉದ್ಯಮಿಗಳು ಹಾಗೂ ಆಸಕ್ತರು ಈ ಮೇಳದಲ್ಲಿಆಹಾರ ಮಳಿಗೆಗಳನ್ನು ತೆರೆಯಲು ಅವಕಾಶವಿದ್ದು, ತಮ್ಮ ಮಳಿಗೆಗಳನ್ನು ನೋಂದಾಯಿಸಿಕೊಳ್ಳಬಹುದು. ಆಸಕ್ತ ಆಹಾರೋದ್ಯಮಿಗಳು ಮಳಿಗೆಗಳ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಅ. 22 ರೊಳಗೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿತಿಳಿಸಿದ್ದಾರೆ.