ನನಗೆ 68 ವರ್ಷ. ನನಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಬೆನ್ನು ನೋವು ಕೂಡ ಇದೆ. ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಕೂಡ ಒಳಗಾಗಿದ್ದೇನೆ. ನಿದ್ರೆಯ ಸಮಸ್ಯೆಗೆ ಪರಿಹಾರ ಏನು?ನವೀನ್ , ಹರಪನಹಳ್ಳಿ
ನಿದ್ರೆ ತೊಂದರೆಗೆ ನೋವು, ಒತ್ತಡ, ಆತಂಕ, ಮನಸ್ಥಿತಿಯ ಬದಲಾವಣೆಗಳು, ಔಷಧಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ಕಾರಣಗಳಿರಬಹುದು. ಕೆಲವು ನಿದ್ರೆಯ ನೈರ್ಮಲ್ಯ ಕ್ರಮಗಳು ಸಮಸ್ಯೆಯಿಂದ ಮುಕ್ತಿ ಪಡೆಯಲು ಪ್ರತಿದಿನ ಒಂದೇ ಸಮಯಕ್ಕೆ ನಿದ್ರಿಸುವುದು ಮತ್ತು ಏಳುವುದನ್ನು ಅಭ್ಯಾಸ ಮಾಡಿ. ಹಗಲಿನಲ್ಲಿನಿದ್ರಿಸುವುದನ್ನು ತಡೆಯಿರಿ. ಕಾಫಿ ಸೇವನೆಯನ್ನು ಮಿತಿಗೊಳಿಸಿ. ಮಲಗುವ ಸಮಯಕ್ಕೆ ಹತ್ತಿರದಲ್ಲಿಮೊಬೈಲ್ /ಟಿವಿ ಪರದೆಗಳನ್ನು ನೋಡುವುದನ್ನು ತಪ್ಪಿಸಿ. ಮಲಗುವ ಕೋಣೆಯನ್ನು ಆರಾಮದಾಯಕವಾಗಿ ಮತ್ತು ಶಾಂತವಾಗಿಡಿ. ಹಾಸಿಗೆಯನ್ನು ಮುಖ್ಯವಾಗಿ ನಿದ್ರೆಗಾಗಿ ಮಾತ್ರ ಬಳಸಿ. ಮಲಗುವ ಮುನ್ನ ವಿಶ್ರಾಂತಿ ಅಥವಾ ನಿಧಾನವಾಗಿ ಉಸಿರಾಡುವ ವ್ಯಾಯಾಮಗಳನ್ನು ಮಾಡಲು ಯತ್ನಿಸಿ. ದೀರ್ಘಕಾಲದವರೆಗೆ ನಿದ್ರೆ ಬರದಿದ್ದರೆ ಕೊಂಚ ಸಮಯ ಎದ್ದು ನಿಂತು ನಿದ್ರೆ ಬಂದಂತೆ ಎನಿಸಿದಾಗ ಮತ್ತೆ ಹಾಸಿಗೆಗೆ ಹಿಂತಿರುಗಿ. ನೀವು ಬೆನ್ನು ನೋವು ಮತ್ತು ಹೃದಯ ಸಂಬಂಧಿತ ಚಿಕಿತ್ಸೆಗಳ ಇತಿಹಾಸವನ್ನು ನಿಮ್ಮ ಚಿಕಿತ್ಸಕ ವೈದ್ಯರೊಂದಿಗೆ ಚರ್ಚಿಸುವುದು ಸೂಕ್ತ. ನಿಮ್ಮ ನಿದ್ರೆ ಅಥವಾ ನೋವಿಗೆ ಸಂಬಂಧಿಸಿದಂತೆ ನೀವು ನಿರಂತರ ದುಃಖ, ಅತಿಯಾದ ಚಿಂತೆ, ಆಸಕ್ತಿಯ ಕೊರತೆ, ಕಿರಿಕಿರಿ ಅಥವಾ ಕಷ್ಟವನ್ನು ಅನುಭವಿಸುತ್ತಿದ್ದೀರ ಅಂತಾದರೆ ವಿವರವಾದ ಮೌಲ್ಯಮಾಪನಕ್ಕಾಗಿ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದನ್ನು ಪರಿಗಣಿಸಿ.
ನನಗೆ ಸದಾ ಬೇಸರ, ಆತಂಕವಾಗುತ್ತಿದೆ ಯಾಕೆ?
ಊರು, ಹೆಸರು
ಸದಾ ಮಾನಸಿಕ ಸಂಕಟವನ್ನು ಅನುಭವಿಸುವುದು ಖಂಡಿತ ಕಷ್ಟ. ನಿಮ್ಮ ಭಾವನೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವ ಬದಲು ನಿಮಗಿರುವ ಆಪ್ತರೊಂದಿಗೆ ಮಾತನಾಡಿ ಮನದ ಮಾತನ್ನು ವ್ಯಕ್ತಪಡಿಸಲು ಪ್ರಯತ್ನಿಸಿ. ಈ ಹಂತದಲ್ಲಿನಿಮಗೆ ಏನು ಅಗತ್ಯವಿದೆ ಎಂಬುದನ್ನು ಆಲೋಚಿಸಲು ನಿಮಗಾಗಿ ಸ್ವಲ್ಪ ಸಮಯ ಕೊಡಿ. ನಿಯಮಿತ ದೈಹಿಕ ಚಟುವಟಿಕೆ, ಯೋಗ, ವಿಶ್ರಾಂತಿ ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳು, ನಿಯಮಿತ ನಿದ್ರೆಯ ಅಭ್ಯಾಸವನ್ನು ಕಾಯ್ದುಕೊಳ್ಳುವುದು ಮತ್ತು ನೀವು ಇಷ್ಟಪಡುವ ಚಟುವಟಿಕೆಗಳಿಗೆ ಸಮಯ ಮೀಸಲಿಡುವಂತಹ ಸರಳ ಕ್ರಮಗಳನ್ನು ನೀವು ಪ್ರಯತ್ನಿಸಬಹುದು.
ನೀವು ನಿರಂತರ ದುಃಖ, ಅತಿಯಾದ ಚಿಂತೆ ಅಥವಾ ಆತಂಕ, ಸಾಮಾನ್ಯ ದಿನಗಳಲ್ಲಿಇಷ್ಟಪಡುತ್ತಿದ್ದ ವಿಷಯಗಳಲ್ಲಿಆಸಕ್ತಿ ಕಳೆದುಕೊಳ್ಳುವುದು, ನಿದ್ರೆ ಅಥವಾ ಹಸಿವಿನಲ್ಲಿಬದಲಾವಣೆಗಳು ಅಥವಾ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿತೊಂದರೆ ಅನುಭವಿಸುತ್ತಿದ್ದೀರ ಅಂದರೆ ಸೂಕ್ತ ಮೌಲ್ಯಮಾಪನಕ್ಕಾಗಿ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಮಾತನಾಡುವುದನ್ನು ಪರಿಗಣಿಸಿ. ಆತಂಕ ಹಾಗೂ ಖಿನ್ನತೆಯಂತಹ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯ. ನಿಮ್ಮ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲಅಂದರೆ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.