ಒಕ್ಕಲಿಗ ಸಮುದಾಯ ಮಾದರಿಯಾಗಿರಲಿ

Contributed byashadheemu1980@gmail.com|Vijaya Karnataka
Vijay Karnataka
ಒಕ್ಕಲಿಗ ಸಮುದಾಯ ಮಾದರಿಯಾಗಿರಲಿ

* ಮಾಜಿ ಸಚಿವ ಸಾ.ರಾ. ಮಹೇಶ್ ಆಶಯ
* ತಾಲೂಕು ಒಕ್ಕಲಿಗರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

ವಿಕ ಸುದ್ದಿಲೋಕ ಕೃಷ್ಣರಾಜನಗರ

ಸಂಘದ ವತಿಯಿಂದ ನೀಡುವ ಪ್ರತಿಭಾ ಪುರಸ್ಕಾರ ಕೇವಲ ಒಂದು ಸಮುದಾಯದ ಮಕ್ಕಳಿಗೆ ಮೀಸಲಾಗದೆ, ಎಲ್ಲಾಸಮಾಜದ ಮಕ್ಕಳಿಗೂ ಸಿಗುವಂತಿರಲಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.

ಪಟ್ಟಣದ ದೇವೇಗೌಡ ಸಮುದಾಯ ಭವನದಲ್ಲಿಏರ್ಪಡಿಸಿದ್ದ ತಾಲೂಕು ಒಕ್ಕಲಿಗರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘‘ಪ್ರತಿಭಾ ಪುರಸ್ಕಾರ ಎಂಬುದು ಕೇವಲ ಒಂದು ಸಮಾಜಕ್ಕೆ ಮೀಸಲಾಗಿರದೆ ಎಲ್ಲಾಜನಾಂಗದ ಮಕ್ಕಳಿಗೆ ಸಿಗುವಂತಿರಬೇಕು. ಒಕ್ಕಲಿಗ ಸಮುದಾಯವು ಉತ್ತಮ ಕೆಲಸ ಮಾಡುವ ಮೂಲಕ ಎಲ್ಲಾಸಮುದಾಯಕ್ಕೆ ಮಾದರಿಯಾಗಿರಬೇಕು,’’ ಎಂದರು.

‘‘ಸತತ 15 ವರ್ಷ ನನ್ನನ್ನು ಶಾಸಕನನ್ನಾಗಿ ಮಾಡಿರುವುದು ನನ್ನ ಕೃಷ್ಣರಾಜನಗರದ ಜನತೆ. ಅದಕ್ಕೆ ನಾನು ಅವರಿಗೆ ಋುಣಿಯಾಗಿದ್ದೇನೆ. ನನ್ನ 15 ವರ್ಷದ ಆಡಳಿತಾವಧಿಯಲ್ಲಿಎಂತಹ ಬರದ ಪರಿಸ್ಥಿತಿಯಲ್ಲಿಯೂ ಕೆರೆಕಟ್ಟೆಗಳನ್ನು ತುಂಬಿಸುವ ಜವಾಬ್ದಾರಿ ಹೊಂದಿದ್ದೆ. ಆದರೆ, ಈಗ ಮುತ್ತಿಗೆ ಹಾಕುತ್ತೇವೆ ಎಂದ ಮೇಲೆ ಹಾಗೂ ರೈತರಿಗೆ ನಾಟಿ ಮಾಡುವಂತೆ ಕರೆಕೊಟ್ಟ ಮೇಲೆ ಸ್ವಲ್ಪ ನೀರನ್ನು ಬಿಡಲಾಗಿದೆ,’’ ಎಂದರು.

‘‘ರೈತರು ತಾಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿಹಾಕಿರುವ ಪೂರ್ಣ ಹಾಗೂ ಅರೆ ನೀರಾವರಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಕೆರೆಕಟ್ಟೆಗಳು ಬರಿದಾಗಿದ್ದು ರೈತರು ಕಂಗಾಲಾಗಿದ್ದಾರೆ. ಹೀಗಿದ್ದೂ ಕೆರೆಕಟ್ಟೆಗಳನ್ನು ತುಂಬಿಸಲು ನೀರು ಹರಿಸದೆ ಇರುವುದರಿಂದ ಸೆ.22ರಂದು ಪ್ರತಿಭಟನೆ ನಡೆಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಲಿಗ್ರಾಮ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು,’’ ಎಂದರು.

ಸಂಘದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಅವರು ಸಂಘದ ಸದಸ್ಯರಿಗೆ ಕಡಿಮೆ ಹಣದಲ್ಲಿನಿವೇಶನ ದೊರಕಿಸಿ ಕೊಡಬೇಕು ಎಂಬ ಮನವಿಗೆ ‘ಆದಷ್ಟು ನಿಮ್ಮ ಬೇಡಿಕೆಗೆ ಸ್ಪಂದಿಸುತ್ತೇನೆ’ ಎಂದರು.

ಸಂಘದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ಮಾತನಾಡಿ, ‘‘ನಮ್ಮ ಸಂಘ ಕೇವಲ ಒಕ್ಕಲಿಗ ಸಮುದಾಯಕಷ್ಟೇ ಅಲ್ಲದೆ ಇತರ ಸಮುದಾಯದ ಜನರಿಗೂ ಸಾಲ ಸಹಾಯ ನೀಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇದು ಮುಂದುವರಿಯಲಿದೆ. ಹಾಗೂ ಇತರ ಸಹಕಾರ ಸಂಘಗಳಿಗೆ ಹೋಲಿಸಿದರೆ ನಮ್ಮ ಸಂಘವು ಪಾರದರ್ಶಕವಾಗಿ ನಡೆಯುತ್ತಿದ್ದು, ಲಾಭ ಮಾಡುತ್ತಿದೆ,’’ ಎಂದರು.

ಸಂಘದ ಉಪಾಧ್ಯಕ್ಷ ವಡ್ಡರ ಕೊಪ್ಪಲು ಶಿವರಾಮ ಮಾತನಾಡಿದರು.

ಕಾರ್ಯಕ್ರಮದಲ್ಲಿಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಿ.ಜೆ. ಅರುಣಕುಮಾರ್ , ತಾಲೂಕು ಒಕ್ಕಲಿಗ ನೌಕರರ ಸ್ನೇಹ ಬಳಗದ ಅಧ್ಯಕ್ಷ ಶಂಕರೇಗೌಡ, ನಿರ್ದೇಶಕರಾದ ಸಿ.ಆರ್ . ಉದಯ್ ಕುಮಾರ್ , ಧನಂಜಯ ಎಂ.ಎಲ್ ., ಪ್ರಕಾಶ, ಚಂದ್ರಶೇಖರ್ ಎಚ್ .ಪಿ., ಸುರೇಶ್ ಕುಮಾರ್ ಸಿ.ಜೆ., ಅನೀಫ್ ಕುಮಾರ್ , ಕಾನೂನು ಸಲಹೆಗಾರ ಅಂಕನಹಳ್ಳಿ ಎ. ತಿಮ್ಮಪ್ಪ ಇತರರಿದ್ದರು.

ಚಿತ್ರ ಶೀರ್ಷಿಕೆ

ಕೃಷ್ಣರಾಜನಗರ ಪಟ್ಟಣದ ಎಚ್ .ಡಿ. ದೇವೇಗೌಡ ಸಮುದಾಯ ಭವನದಲ್ಲಿನಡೆದ ತಾಲೂಕು ಒಕ್ಕಲಿಗರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.