ಬ್ರೋಚೇವಾರೆವರುರಾ ಎಂದರೆ ನಿನ್ನನ್ನು ಹೊರತುಪಡಿಸಿ ನನ್ನನ್ನು ರಕ್ಷಿಸುವವರು ಯಾರು ಎಂದು. ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿಈ ಹಾಡು ಬಹಳ ಪ್ರಸಿದ್ಧಿ ಹೊಂದಿದೆ. ವಿವೇಕ್ ಆತ್ರೇಯ ಇದೇ ಹೆಸರಿನ ತೆಲುಗು ಚಿತ್ರವನ್ನು ನಿರ್ದೇಶಿಸಿದ್ದಾರೆ.ಪದೇಪದೆ ಕಾಲೇಜ್ ಫೇಲ್ ಆಗುತ್ತಿರುವ ರಾಹುಲ್ ( ಶ್ರೀ ವಿಷ್ಣು ), ರಾಕಿ (ಪ್ರಿಯದರ್ಶಿ) ಮತ್ತು ರಾಂಬೋ (ರಾಹುಲ್ ರಾಮಕೃಷ್ಣ) ಇವರು ಕಾಲೇಜ್ ಪ್ರಾಂಶುಪಾಲರ ಮಗಳಾದ ಮಿತ್ರಾಳ (ನಿವೇತಾ ಥಾಮಸ್ ) ಸಹಾಯಕ್ಕೆ ಮುಂದಾಗುತ್ತಾರೆ. ಇನ್ನೊಂದೆಡೆ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವ ನಿರ್ದೇಶಕ ವಿಶಾಲ್ (ಸತ್ಯದೇವ್ ), ಜನಪ್ರಿಯ ನಟಿ ಶಾಲಿನಿ (ನಿವೇತಾ ಪೇತುರಾಜ್ ) ಅವರಿಗೆ ಒಂದು ಕಥೆಯನ್ನು ಹೇಳುತ್ತಿರುತ್ತಾನೆ. ಇದರ ಮಧ್ಯೆ ಒಂದು ನಕಲಿ ಮತ್ತು ಒಂದು ಅಸಲಿ ಕಿಡ್ನಾಪ್ ನಡೆದುಹೋಗುತ್ತದೆ. ಇದು ಚಿತ್ರದ ದಿಕ್ಕನ್ನು ಬದಲಿಸಿ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ.
ಚಿತ್ರದಲ್ಲಿಗಂಭೀರ ದೃಶ್ಯಗಳ ನಡುವೆ ಹಾಸ್ಯವನ್ನು ಹದವಾಗಿ ಬೆರೆಸಿದ್ದಾರೆ. ಕೆಲಸದ ಬಗ್ಗೆ ಆತ್ಮವಿಶ್ವಾಸ ಮತ್ತು ಸಮರ್ಪಣೆ ಹೇಗಿರಬೇಕು ಎಂದು ವಿಶಾಲ್ ಮೂಲಕ ತೋರಿಸಿಕೊಡುತ್ತಾರೆ. ಚಿತ್ರದೊಳಗೆ ಒಂದು ಚಿತ್ರವನ್ನು ಸೃಷ್ಟಿಸಿ ಎರಡೂ ಎಳೆಗಳು ಸಮಾನಾಂತರದಲ್ಲಿಸಾಗಿ ಒಂದು ಬಿಂದುವಿನಲ್ಲಿಸೇರುವಂಥ ನಾನ್ -ಲೀನಿಯರ್ ಶೈಲಿಯ ಚಿತ್ರಕಥೆ ಅದ್ಭುತವಾಗಿದೆ. ಓದು ಮಾತ್ರವಲ್ಲ, ಓದಿನ ಜತೆಗೆ ಮಾನವೀಯತೆಯೂ ಬೆಳೆಯಬೇಕು ಎಂದು ಸೂಕ್ಷ್ಮವಾಗಿ ಹೇಳಲಾಗಿದೆ. ಎಲ್ಲರ ನಟನೆ ಮತ್ತು ಸಾಂಕೇತಿಕ ದೃಶ್ಯಗಳು ಖುಷಿ ಕೊಡುವಂತಿದೆ. ಕಾಲೇಜ್ ಕಲಾಪಗಳು, ಕಟ್ಟುನಿಟ್ಟು ತಂದೆ, ನೃತ್ಯವನ್ನು ಪ್ರೀತಿಸುವ ಮಗಳು, ಹೆಣ್ಣಿನ ಸ್ವಾತಂತ್ರ್ಯ ಪ್ರಜ್ಞೆ, ಚೊಚ್ಚಲು ನಿರ್ದೇಶಕನ ಕಷ್ಟಗಳು, ಬೆಚ್ಚಗಿನ ಪ್ರೀತಿ ಚಿತ್ರದಲ್ಲಿದೆ. ನಡೆದ ಎಲ್ಲಅಚಾತುರ್ಯಗಳಿಗೆ ಚಿತ್ರದ ಕೊನೆಯಲ್ಲಿಕಾವ್ಯನ್ಯಾಯವನ್ನು ಒದಗಿಸಲಾಗಿದೆ. ಅಂತ್ಯದಲ್ಲಿಗುರಿಯ ಕುರಿತಾಗಿ ಬರುವ ಹಾಸ್ಯ ಸಂಭಾಷಣೆ ಒಂದು ಗಂಭೀರ ಯೋಚನೆಯನ್ನು ದಾಟಿಸುತ್ತದೆ. ‘ಬ್ರೋಚೇವಾರೆವರುರಾ’ ಒಂದು ಕೌಟುಂಬಿಕ ಕಾಮಿಡಿ ಚಿತ್ರ.