‘ಈ ಜೀವನು ತುಂಡಾಗಲಾರ, ಇವನು ಸುಟ್ಟುಹೋಗಲಾರ, ಒದ್ದೆಯಾಗಲಾರ, ಹಾಗೆಯೇ ಒಣಗಲಾರ. ಏಕೆಂದರೆ ಇವನು ಎಂದೆಂದೂ ಎಲ್ಲೆಡೆಯೂ ಇರುವ ಭಗವಂತನ ಪಡಿಯಚ್ಚು. ಎಂದೆಂದೂ ಬದಲಾಗದವ, ಅಚಲನಾದವ, ಹುಟ್ಟು-ಸಾವುಗಳಿರದ ಭಗವಂತನ ಪ್ರತಿರೂಪ ಈತ’.
ಒಂದು ವಸ್ತುವನ್ನು ಕಡಿದಾಗ ಅದು ತುಂಡಾಗುತ್ತದೆ, ಬಿದ್ದು ಮಣ್ಣಾಗುತ್ತದೆ, ಸುಟ್ಟಾಗ ಬೂದಿಯಾಗುತ್ತದೆ, ಬೂದಿ ಮಣ್ಣಿಗೆ ಸೇರಿ ಮಣ್ಣಾಗುತ್ತದೆ. ಹಸಿರಾಗಿದ್ದ ಎಲೆ ಗಾಳಿಗೆ ಒಣಗುತ್ತದೆ. ಒಣಗಿ ತರಗೆಲೆಯಾಗುತ್ತದೆ. ತರಗೆಲೆಯಾಗಿ ಮಣ್ಣಿಗೆ ಸೇರಿ ಮಣ್ಣಾಗುತ್ತದೆ. ಇದು ಕಣ್ಣಿಗೆ ಕಾಣುವ ನಾಶದ ಒಂದು ಪರಿ. ಆದರೆ ಜೀವನನ್ನು ಮಣ್ಣು, ನೀರು, ಬೆಂಕಿ, ಗಾಳಿ-ಯಾವುದೂ ನಾಶಗೊಳಿಸದು.
ಪೃಥ್ವಿಯ ವಿಕಾರವಾದ ಯಾವುದೇ ಸಲಕರಣೆಗಳು ಅಥವಾ ಆಯುಧಗಳು ಅವನನ್ನು ತುಂಡರಿಸದು. ಏಕೆಂದರೆ ಅವನೆಂದೂ ತುಂಡಾಗಲಾರ. ಅಚ್ಛೇದ್ಯೋಧಿಯಮ್ . ಬೆಂಕಿ ಅವನನ್ನು ಸುಡದು. ಏಕೆಂದರೆ ಅವನೆಂದೂ ಸೀಯಲಾರ. ಅದಾಹ್ಯೋಧಿಯಮ್ . ಅವನೆಂದೂ ತೋಯಲಾರ; ಒಣಗಲಾರ. ಅಕ್ಲೇದ್ಯೋಧಿಧಿಯಮ್ , ಅಶೋಷ್ಯೋಧಿಯಮ್ . ಅವನು ಎಂದೆಂದೂ ಇರುವವನು. ಸನಾತನಃ.
ಇದಕ್ಕೊಂದು ಲೌಕಿಕ ಉದಾಹರಣೆ ಕೊಡುವುದಾದರೆ-ಸಿನಿಮಾ ತೆರೆಯ ಮೇಲೆ ನಾವು ಏನೇನನ್ನೋ ನೋಡುತ್ತೇವೆ. ಸಮುದ್ರ, ಕಾಳ್ಗಿಚ್ಚು, ಬೆಟ್ಟ, ನದಿ, ವಾಹನ, ಅಪಘಾತ ಇತ್ಯಾದಿ. ಆದರೆ ಆ ತೆರೆ ಮಾತ್ರ ಯಾವ ಬದಲಾವಣೆಯನ್ನೂ ಹೊಂದುವುದಿಲ್ಲ. ಅದಕ್ಕೆ ಯಾವ ಬಾಧೆಯೂ ತಾಗುವುದಿಲ್ಲ. ಉರುಳುವ ಚಕ್ರದ ಮಧ್ಯದಲ್ಲಿಇರುವ ಒಂದು ಕೋಲು ಸುಮ್ಮನೆ ಇರುತ್ತದೆ. ಆದರೆ ಅದು ಚಕ್ರ ಉರುಳುವುದಕ್ಕೆ ಸಹಯಕವಾಗಿರುತ್ತದೆ. ಆತ್ಮವಸ್ತುವು ಮಂದರಪರ್ವತದ ಹಾಗೆ. ಅದರ ಮೇಲೆ ಬೇಕಾದಷ್ಟು ಮಳೆ ಬರಬಹುದು; ಗಾಳಿ ಬೀಸಬಹುದು. ಆದರೆ ಅವು ಯಾವುವೂ ಅದಕ್ಕೆ ಬಾಧಕವಾಗಲಾರದು. ಹಾಗೆಯೇ ಜೀವವೂ ಕೂಡಾ.
ಇದು ಹೇಗೆಂದು ನೋಡೋಣ. ಶಸ್ತ್ರದಲ್ಲಿಸದಾ ತುಂಬಿರುವವನ್ನು ಶಸ್ತ್ರ ಹೇಗೆ ತುಂಡರಿಸೀತು? ಬೆಂಕಿಯೊಳಗೆ ಸದಾ ತುಂಬಿರುವವನ್ನು ಬೆಂಕಿ ಹೇಗೆ ಸುಟ್ಟೀತು? ನೀರಿನೊಳಗೆ ಸದಾ ಇರುವವನ್ನು ನೀರು ಹೇಗೆ ತೋಯಿಸೀತು? ಗಾಳಿಯೊಳಗೆ ಸದಾ ಇರುವವನ್ನು ಗಾಳಿ ಹೇಗೆ ಒಣಗಿಸೀತು? ಇದು ಆತ್ಮವಸ್ತು ಇರುವ ಬಗೆಯನ್ನು ತಿಳಿಸುವ ಪರಿ. ಇದು ಜೀವಪರವಾದ ನೆಲೆಯನ್ನು ತಿಳಿದುಕೊಳ್ಳುವ ವಿಧಾನ.
ಇದನ್ನೇ ಈಶ್ವರನ ಪರವಾಗಿ ನೋಡುವುದಾದರೆ-ಬ್ರಹ್ಮರುದ್ರಾದಿ ಯಾವ ದೇವತೆಗಳೂ ಇವನನ್ನು ಸಂಹರಿಸಲಾರವು. ಇದನ್ನು ಕಠೋಪನಿಷತ್ತು ಮತ್ತು ತೈತ್ತಿರೀಯೋಪನಿಷತ್ತು ಬಹು ಸುಂದರವಾಗಿ ಸಮರ್ಥಿಸುತ್ತದೆ.
ಭಯಾದಸ್ಯಾಗ್ನಿಸ್ತಪತಿ ಭಯಾತ್ತಪತಿ ಸೂರ್ಯಃ |
ಭಯಾದಿಂದ್ರಶ್ಚ ವಾಯುಶ್ಚ ಮೃತ್ಯುರ್ಧಾವತಿ ಪಂಚಮಃ ||
ಕಠ: 6-3
ಇವನ ಭಯದಿಂದ ಅಗ್ನಿ ಸುಡುತ್ತಾನೆ. ಸೂರ್ಯ ಕೂಡಾ ಸುಡುತ್ತಾನೆ. ಇಂದ್ರ ಮತ್ತು ವಾಯು ತಮ್ಮ ಕೆಲಸವನ್ನು ಮಾಡುತ್ತಾರೆ. ಐದನೆಯವನಾದ ಯಮ ಕೂಡಾ ಓಡುತ್ತಾನೆ.
ಇವನ ಭಯದಿಂದ ವಾಯು ಬೀಸುತ್ತಾನೆ. ಸೂರ್ಯ ಉದಿಸುತ್ತಾನೆ. ಇವನ ಭಯದಿಂದ (ಈಶ್ವರನ ಭಯದಿಂದ) ಅಗ್ನಿಯೂ ಇಂದ್ರನೂ ತಮ್ಮ ತಮ್ಮ ಕೆಲಸವನ್ನು ನಿರ್ವಹಿಸುತ್ತಾರೆ. ಐದನೆಯವನಾದ ಮೃತ್ಯುವೂ ಓಡುತ್ತಾನೆ.