ಕಿಕ್ಕರ್ : ರೋಗಿ ಬಯಸುವುದು ಒಂದು, ಫಾರ್ಮಸಿಸ್ಟ್ ನೀಡುವುದು ಏನನ್ನು?---
ಇಂಟ್ರೊ: ಔಷಧ ಅಂಗಡಿಯ ಕೌಂಟರ್ ಎಂದರೆ ಕೇವಲ ವ್ಯಾಪಾರ ನಡೆಯುವ ಜಾಗವಲ್ಲ. ಅದು ಪ್ರತಿದಿನ ನೂರಾರು ಜನರ ನಂಬಿಕೆ, ಆತಂಕ ಮತ್ತು ಅಜ್ಞಾನಗಳು ಬಂದು ಮುಖಾಮುಖಿಯಾಗುವ ವೇದಿಕೆ. ಸೆ.25ರ ವಿಶ್ವ ಫಾರ್ಮಸಿಸ್ಟ್ ದಿನದ ಅಂಗವಾಗಿ ಒಬ್ಬ ಜವಾಬ್ದಾರಿಯುತ ಫಾರ್ಮಸಿಸ್ವ್ ಎದುರಿಸುವ ಸವಾಲುಗಳು, ಕೌಂಟರ್ ನಲ್ಲಿನಡೆಯುವ ವಿಚಿತ್ರ ಪ್ರಸಂಗಗಳು ಮತ್ತು ಸ್ವಯಂ ವೈದ್ಯದ ಅಪಾಯಗಳನ್ನು ಬಿಚ್ಚಿಡುವ ಅನುಭವ ಕಥನ ಇಲ್ಲಿದೆ.
---
ಮಧು ನುಲೇನೂರು
---
ನಮಸ್ಕಾರ ಸಾರ್ ಎಂಬ ಸ್ವರ ಕೇಳಿಸಿದಾಗ ಮೆಡಿಸಿನ್ ಜೋಡಿಸುವುದರಲ್ಲಿಮಗ್ನನಾಗಿದ್ದ ನಾನು ತಲೆಯೆತ್ತಿ ನೋಡಿದೆ. ಗಂಡ-ಹೆಂಡತಿ, ಕೈಯಲ್ಲಿಒಂದು ಮಗು. ಆ ಮಗುವಿಗೆ ಸುಮಾರು ಆರರಿಂದ ಎಂಟು ತಿಂಗಳು ಇರಬಹುದು. ನಾನೂ ಅವರಿಗೆ ನಮಸ್ಕರಿಸುವಂತೆ ಕೈಯೆತ್ತಿ ಹೇಳಿ ಎಂಬಂತೆ ಮುಖ ಮಾಡಿದೆ. ‘ತುಂಬಾ ಕೆಮ್ಮಿದೆ’ ಎಂದು ಹೇಳಿದರು. ‘ಯಾರಿಗೆ ಕೆಮ್ಮು’ ಎಂದು ಪ್ರಶ್ನಿಸಿದಾಗ ಅವರು ಮಗುವನ್ನು ತೋರಿಸುತ್ತಾ ‘ಈ ಮಗುವಿಗೆ ನಿನ್ನೆಯಿಂದ ಕೆಮ್ಮು’ ಎಂದರು. ನಾನು ಡಾಕ್ಟರ್ ಚೀಟಿಗಾಗಿ ಪ್ರಶ್ನಿಸಿದಾಗ ‘ಬರೀ ಕೆಮ್ಮು ಅಷ್ಟೇ. ಅದಕ್ಕೆಲ್ಲಡಾಕ್ಟರ್ ಬಳಿ ಯಾರು ಹೋಗುತ್ತಾರೆ. ನೀವೇ ನಮಗೆ ಡಾಕ್ಟರ್ ಇದ್ದ ಹಾಗೆ. ದಯವಿಟ್ಟು ಮಾತ್ರೆ ಕೊಡಿ’ ಎಂದು ಹೇಳಿದರು. ನನಗೆ ವಿಪರೀತ ಗಾಬರಿಯಾಯ್ತು. ‘ಹಾಗಲ್ಲ, ಮಕ್ಕಳ ಮಾತ್ರೆಗಳೇ ಬೇರೆ. ಡಾಕ್ಟರ್ ಕೆಮ್ಮಿಗೆ ಕಾರಣಗಳನ್ನು ಪತ್ತೆ ಮಾಡಿ ಸರಿಯಾದ ಮಾತ್ರೆ ಬರೆದುಕೊಡುತ್ತಾರೆ. ನಾವು ಹಾಗೆ ಕೊಡಲು ಸಾಧ್ಯವಿಲ್ಲ’ ಎನ್ನುತ್ತಿದ್ದಂತೆಯೇ ಅವರು ‘ದೊಡ್ಡವರ ಮಾತ್ರೆಯೇ ಕೊಡಿ. ಅದನ್ನು ನಾಲ್ಕು ಪಾಲು ಮಾಡಿ ಕೊಡುತ್ತೇವೆ’ ಎಂದು ಒತ್ತಾಯಿಸಿದರು. ‘ಹಾಗೆಲ್ಲಕೊಡುವ ಹಾಗಿಲ್ಲ. ಅದರಲ್ಲೂಚಿಕ್ಕ ಮಗುವಿಗಂತೂ ಕೊಡುವುದು ಅಸಾಧ್ಯ’ ಎಂಬುದನ್ನು ಅವರಿಗೆ ಅರ್ಥ ಮಾಡಿಸುವುದರಲ್ಲಿನಾನು ಸುಸ್ತಾಗಿ ಹೋದೆ. ಅಷ್ಟು ಹೊತ್ತು ನಾನು ಅವರಿಗೆ ವಿವರಿಸಿದ ಮೇಲೆ ಅವರಿಗೆ ಒಂದು ವಿಷಯವಂತೂ ಮನದಟ್ಟಾಯಿತು ‘ಈ ಮೆಡಿಕಲ್ ಶಾಪಿನವನು ಮೆಡಿಸಿನ್ ವಿಚಾರದಲ್ಲಿದಡ್ಡ’ ಎಂದು. ಯಾವುದೋ ಒಂದು ಕೊಡಬಾರದೇ ಎಂದು ಗೊಣಗುತ್ತಲೇ ಅವರು ಹೊರಟರು.
ಮೆಡಿಕಲ್ ಶಾಪ್ ಅಂದರೆ ಹೊಟೇಲ್ ಅಲ್ಲ, ಇದಿಲ್ಲದಿದ್ದರೆ ಇದರ ಬದಲು ಅದನ್ನು ಕೊಡುವ ಎನ್ನುವ ಆಯ್ಕೆ ಇಲ್ಲಿಸಲ್ಲ. ಇಡ್ಲಿಇಲ್ಲದಿದ್ದರೆ ದೋಸೆ, ದೋಸೆ ಇಲ್ಲದಿದ್ದರೆ ಇಡ್ಲಿಎಂಬಂತೆ ಅಲ್ಲವೇ ಅಲ್ಲ. ಇಲ್ಲಿಸಿಗುವುದು ಡಾಕ್ಟರ್ ಬರೆದುಕೊಟ್ಟ ಮಾತ್ರೆ ಮಾತ್ರ. ಡಾಕ್ಟರ್ ಬರೆದುಕೊಡದಿದ್ದರೆ ನಾವು ಮಾತ್ರೆಯನ್ನು ಕೊಡಲೇಬಾರದು ಎಂಬುದನ್ನು ಬಹಳ ಜನ ಅರ್ಥ ಮಾಡಿಕೊಳ್ಳುವುದಿಲ್ಲ. ಇಂತಹ ಅನೇಕ ವಿಚಿತ್ರ ಘಟನೆಗಳು ಪ್ರತಿಯೊಂದು ಮೆಡಿಕಲ್ ಶಾಪ್ ನಲ್ಲೂಸಂಭವಿಸುತ್ತಲೆ ಇರುತ್ತದೆ. ಕೆಲವೊಮ್ಮೆ ವಿಕೋಪಕ್ಕೂ ಹೋಗುತ್ತದೆ. ನಾವು ಕೊಡುವುದಿಲ್ಲಅವರು ಬಿಡುವುದಿಲ್ಲ. ಇಂಥವರಿಂದಲೇ ನಮ್ಮ ಭಾಷಾಜ್ಞಾನವು ಸಹ ಹೆಚ್ಚಾಗಿ ಬಿಡುತ್ತದೆ.
ಒಬ್ಬ ಔಷಧ ಮಾರಾಟಗಾರನಿಗೆ ಎಲ್ಲವೂ ಗೊತ್ತಿರುತ್ತದೆ ಎಂಬ ನಂಬಿಕೆ ರೋಗಿಯದ್ದು. ಏಕೆಂದರೆ ನಿತ್ಯವೂ ನಾನಾ ಕಾಯಿಲೆಗಳಿಗೆ ಔಷಧ ಕೊಟ್ಟು ಅವನಿಗೆ ರೂಢಿಯಾಗಿರುತ್ತದೆ ಎಂಬುದು ರೋಗಿಗಳ ಯೋಚನೆ. ಅದೇ ಕಾರಣಕ್ಕೆ ತಲೆನೋವಿಗೆ, ಗ್ಯಾಸ್ಟ್ರಿಕ್ಕಿಗೆ, ಸಣ್ಣ ಜ್ವರ ಮುಂತಾದವುಗಳಿಗೆ ಮಾತ್ರೆಗಳನ್ನು ಯಾರು ಬೇಕಾದರೂ ಕೊಡಬಹುದು. ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದು ಎಂಬ ತಪ್ಪು ಕಲ್ಪನೆ ಇದೆ. ಆದರೆ ಒಬ್ಬೊಬ್ಬರಿಗೂ ಲಕ್ಷಣ ಬೇರೆ, ಕಾರಣ ಬೇರೆ ಇರಬಹುದು. ಅದಕ್ಕೆ ತಕ್ಕ ಹಾಗೆ ಮಾತ್ರೆಯ ಹೆಸರು, ಡೋಸೇಜ್ ಬದಲಾಗಬಹುದು. ಅದೆಲ್ಲಔಷಧ ಕೊಡುವವನಿಗೆ ಹೇಗೆ ತಿಳಿಯಲು ಸಾಧ್ಯ? ವೈದ್ಯ ಮಾತ್ರ ರೋಗಿಗೆ ಏನು ಬೇಕು ಎಂಬುದನ್ನು ಅರಿಯಬಲ್ಲ. ಹೀಗಾಗಿ ಇಂತಹ ಸಾಮಾನ್ಯ ಔಷಧಗಳನ್ನೂ ಯಾವುದೇ ತಜ್ಞ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು. ನಾವು ಹಾಗೆಲ್ಲಕೊಡಲು ಬರುವುದಿಲ್ಲಎಂದರೆ ಒಂದೆರಡು ಮಾತ್ರೆ ಕೊಟ್ಟರೆ ಏನಾಗುತ್ತದೆ ಎಂದು ಕೆಲವರು ಜಗಳ ಮಾಡಿದ್ದು ಉಂಟು.
ಸ್ವಯಂವೈದ್ಯದ ಅಂಗಳ
ತಮಾಷೆಯಂತೆ ಭಾಸವಾಗುವ ಖೇದಕರ ಸಂಗತಿಗಳು ಮೆಡಿಕಲ್ ಶಾಪ್ ಗಳಲ್ಲಿನಡೆಯುತ್ತಾ ಇರುತ್ತವೆ. ಕೆಲವೊಮ್ಮೆ ಜನರು, ‘ಯಾಕೋ ಬಿಪಿ ಸ್ವಲ್ಪ ಹೆಚ್ಚಾಗಿದೆ. ದಯವಿಟ್ಟು ಒಂದೆರಡು ಮಾತ್ರೆಗಳನ್ನು ಕೊಡಿ’ ಎಂದು ಕೇಳಿದಾಗ ನಾನು ಗಾಬರಿಯಾಗದೇ ಇರುವುದಾದರೂ ಹೇಗೆ? ‘ಇಷ್ಟು ವರ್ಷ ಮೆಡಿಕಲ್ ಶಾಪ್ ನಡೆಸಿದ್ದೀರಿ. ಒಂದು ಬಿಪಿ ಮಾತ್ರೆ ಕೊಡಕ್ಕಾಗಲ್ಲವೇ’ ಅಂತ ಕೇಳಿದ್ದೂ ಉಂಟು. ಕೇವಲ ಬಿಪಿಗೆ ಮಾತ್ರವಲ್ಲ, ಶುಗರ್ , ಕೊಲೆಸ್ಟ್ರಾಲ್ , ಥೈರಾಯಿಡ್ ಹೀಗೆ ಪ್ರತಿಯೊಂದಕ್ಕೂ ನೀವೇ ಕೊಟ್ಟುಬಿಡಿ ಅಂತ ಕೇಳಿದ್ದೂ ಇದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಅದೆಷ್ಟೋ ಮಹಿಳೆಯರು ಬೇಡದ ಮಾತ್ರೆಗಳನ್ನು ವೈದ್ಯರ ಚೀಟಿ ಇಲ್ಲದೆ ಕೇಳಿದಾಗ ಖೇದ ಆಗುವುದಂತೂ ಸತ್ಯ. ಇದು ಅವಿದ್ಯಾವಂತರ ವಿಷಯ ಎಂದು ಭಾವಿಸಲೇಬೇಡಿ. ಬಹುತೇಕ ವಿದ್ಯಾವಂತರೂ ಹೀಗೆ ಸೀದಾ ಮೆಡಿಕಲ್ ಶಾಪ್ ಗೆ ಬರುತ್ತಾರೆ. ಡಾಕ್ಟರ್ ಬಳಿ ಹೋಗಿ ಪ್ರಿಸ್ಕಿ್ರಪ್ ಷನ್ ತಂದವರು ಇದರಲ್ಲಿಎರಡು ಕೊಡಿ ಸಾಕು, ಇದು ಒಂದೇ ದಿನಕ್ಕೆ ಕೊಡಿ ಎನ್ನುವವರೇ ಹೆಚ್ಚು. ಆ ಚೀಟಿಗಳಲ್ಲಿ ಆ್ಯಂಟಿಬಯಾಟಿಕ್ ನಂತಹ ಕನಿಷ್ಠ ಮೂರು ದಿನ ತೆಗೆದುಕೊಳ್ಳಲೇ ಬೇಕಾದ ಮಾತ್ರೆಗಳೂ ಇರುತ್ತವೆ. ಅವರು ಅರ್ಥ ಮಾಡಿಕೊಳ್ಳಲಿ ಬಿಡಲಿ ಅವುಗಳ ಬಗ್ಗೆ ನಾವು ಹೇಳಲೇಬೇಕಾಗುತ್ತದೆ.
ಕೆಲವೊಂದು ನಿಷೇಧಿತ ಮಾತ್ರೆಗಳನ್ನು ಚೀಟಿಯಿಲ್ಲದೇ ಕೊಡಲೇಬಾರದು. ಕೆಲವಕ್ಕೆ ಎಸ್ ಓಎಸ್ (ಅಗತ್ಯವಿದ್ದಲ್ಲಿಮಾತ್ರ) ಎಂದು ಡಾಕ್ಟರ್ ನಮೂದಿಸಿರುತ್ತಾರೆ. ಕೆಲವರು ದುರುದ್ದೇಶಗಳಿಗಾಗಿ ಕೃತಕ ಚೀಟಿಗಳನ್ನು ಸೃಷ್ಟಿಸಿ ತರುತ್ತಾರೆ. ಅವು ಕೃತಕವೋ, ನೈಜವೋ ಎಂಬುದನ್ನು ಫಾರ್ಮಸಿಸ್ವ್ ಚೆಕ್ ಮಾಡಿಕೊಳ್ಳಬೇಕು. ನುರಿತ ಫಾರ್ಮಸಿಸ್ವ್ ಅದರ ಬಗ್ಗೆ ಒಂದೆರಡು ಪ್ರಶ್ನೆ ಕೇಳಿಯೇ ತಿಳಿದುಕೊಂಡು ಅವುಗಳನ್ನು ನೀಡಲು ನಿರಾಕರಿಸಬಹುದು. ಎಷ್ಟೋ ಜನರಿಗೆ ಒಂದು ವಿಷಯ ಗೊತ್ತಿಲ್ಲ, ಪ್ಯಾರಾಸಿಟಮಲ್ ಮಾತ್ರೆಗಳ ಮೇಲೆ ಕೂಡ ಘ್ಕಿOvಛ್ಟಿ dಟsಛಿ ಞay ಚಿಛಿ ಜ್ಞ್ಜಿ್ಠ್ಟಜಿಟ್ಠs ಠಿಟ ್ಝಜಿvಛ್ಟಿ ಎಂದು ಬರೆದಿರುತ್ತಾರೆ.
ಮುಖ್ಯವಾಗಿ ಇಲ್ಲಿಗಮನಿಸಬೇಕಾದ ಅಂಶವೇನು ಅಂದರೆ ಮೆಡಿಕಲ್ ಶಾಪ್ ನಡೆಸುತ್ತಿರುವ ವ್ಯಕ್ತಿಗೆ ಕೇವಲ ಔಷಧಗಳ ವಿಷಯವಷ್ಟೇ ಅಲ್ಲದೇ, ತಿಳುವಳಿಕೆ ಮತ್ತು ಸಾಮಾನ್ಯ ಜ್ಞಾನ ಕೂಡ ಇರಬೇಕಾಗುತ್ತದೆ. ತನ್ನ ಬಳಿ ಬರುವ ರೋಗಿಗಳಿಗೆ ಆಪ್ತ ಸಲಹೆಗಳನ್ನು ನೀಡಿ ವೈದ್ಯರ ಅನುಮತಿ ಇಲ್ಲದೆ ತಾವೇ ಸ್ವಯಂ ವೈದ್ಯರಾಗಿ ಔಷಧಗಳನ್ನು ತೆಗೆದುಕೊಳ್ಳುವುದನ್ನು ನಿಯಂತ್ರಿಸಿದರೆ ಸಮಾಜಕ್ಕೆ ಅತ್ಯಂತ ಉಪಯೋಗ ಆಗುತ್ತದೆ.
ನನ್ನ ಬಳಿ ಬರುವ ಅದೆಷ್ಟೋ ರೋಗಿಗಳಿಗೆ ನಾನು ಮೆಡಿಕಲ್ ಸ್ಟೋರ್ ಅನ್ನು ಗೆಸ್ವ್ ರೂಮ್ ತರಹ ಪರಿಗಣಿಸಿ. ಅದನ್ನು ಅಡುಗೆ ಮನೆ ಮಾಡಿಕೊಳ್ಳಬೇಡಿ ಎಂದು ಯಾವಾಗಲೂ ಹೇಳುತ್ತಲೇ ಇರುತ್ತೇನೆ. ಅಂದಹಾಗೆ ಮೆಡಿಸಿನ್ ಅನ್ನುವುದು ರೇಷನ್ ವಸ್ತುವಲ್ಲ, ಡಾಕ್ಟರ್ ಹೇಳಿದಾಗ ಅವರು ಹೇಳಿದಷ್ಟನ್ನು ಮಾತ್ರ ತಂದುಕೊಳ್ಳಬೇಕೇ ವಿನಃ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಡಿ. ನಿಮ್ಮ ಆರೋಗ್ಯಕ್ಕೆ ನೀವೇ ಹೊಣೆಗಾರರು.
ಬಾಕ್ಸ್
ಮಾತ್ರೆ ಕೊಡುವವನ ಹಿಂದಿನ ಕಾಳಜಿ
ಅನೇಕ ಬಾರಿ ರೋಗಿಗಳು ಡಾಕ್ಟರ್ ಬಳಿ ಹೋದರೆ 300-400 ರೂಪಾಯಿ ಅನವಶ್ಯಕ ಖರ್ಚಾಗುತ್ತದೆ ಎಂದು ಸೀದಾ ಮೆಡಿಕಲ್ ಶಾಪ್ ಗೆ ಬಂದುಬಿಡುತ್ತಾರೆ. ಆದರೆ ಹಾಗೆ ಯಾವುದ್ಯಾವುದೋ ಮಾತ್ರೆ ನೀಡುವುದು ಅಷ್ಟು ಸುಲಭವಲ್ಲ. ಏಕೆಂದರೆ ಒಬ್ಬ ಫಾರ್ಮಸಿಸ್ವ್ ಗೆ ಅವನದೇ ಆದ ಜವಾಬ್ದಾರಿ ಇರುತ್ತದೆ. ಮೆಡಿಸಿನ್ ಮತ್ತು ಡಾಕ್ಟರ್ ಮಹತ್ವವನ್ನು ಒಬ್ಬ ಒಳ್ಳೆಯ ಫಾರ್ಮಸಿಸ್ವ್ ತನ್ನ ಬಳಿ ಬರುವ ರೋಗಿಗೆ ತಿಳಿಸಬೇಕಾಗುತ್ತದೆ. ಸ್ವಯಂ ಔಷಧ ಎಷ್ಟು ಅಪಾಯಕಾರಿಯೋ ಫಾರ್ಮಸಿಸ್ವ್ ತಾನಾಗಿಯೇ ಮೆಡಿಸಿನ್ ಕೊಡುವುದು ಅಷ್ಟೇ ಅಪಾಯಕಾರಿ. ಅದು ಅಪರಾಧವೂ ಹೌದು. ಡಾಕ್ಟರ್ ಗಳ ಶುಲ್ಕಕ್ಕೆ ಹೆದರಿ ತಮ್ಮ ಜೀವ ಮತ್ತು ಜೀವನವನ್ನು ಪರೀಕ್ಷೆಗೆ ಒಳಪಡಿಸುವುದು ಮೂರ್ಖತನ ಎಂಬುದನ್ನು ರೋಗಿಗಳಿಗೆ ಅವನು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಕೆಲವೊಮ್ಮೆ ಅವರು ತರುವ ವೈದ್ಯರ ಚೀಟಿಗಳಲ್ಲಿಅಕ್ಷರಗಳ ಗೊಂದಲ ಉಂಟಾಗಿ ಮೆಡಿಸಿಸ್ಸ್ ಸ್ವರೂಪವೇ ಬದಲಾಗಿಬಿಡಬಹುದು. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಒಬ್ಬ ಫಾರ್ಮಸಿಸ್ವ್ ಔಷಧವನ್ನು ಕೊಡಬೇಕಾಗುತ್ತದೆ.