ಹತ್ತುಸಾವಿರ ಆನೆಗಳ ಬಲದ ಸುಂದರಿ ಯಾರು? ಅಷ್ಟು ಶಕ್ತಿಯನ್ನು ಪಡೆದ ಆಕೆಯ ಅವಸಾನ ಹೇಗಾಯಿತು?
----
ಆತನೊಬ್ಬ ಮಹಾಯಕ್ಷ. ಹೆಸರು ಸುಕೇತು. ದೇವವರ್ಗದವನಾದ್ದರಿಂದ ಸದ್ಗುಣವಂತನೂ ಸಚ್ಛೀಲವಂತನೂ ಆಗಿದ್ದನು. ಒಂದೇ ಕೊರತೆ ಎಂದರೆ ಅನಪತ್ಯತೆ. ಅಂದರೆ ಮಕ್ಕಳಿಲ್ಲದ ಕೊರಗು. ಸಂತಾನಪ್ರಾಪ್ತಿಗಾಗಿ ಬ್ರಹ್ಮನನ್ನು ಕುರಿತು ಕಠಿನವಾದ ತಪಸ್ಸನ್ನು ಆಚರಿಸಿದ. ಸುಕೇತುವಿನ ತಪಸ್ಸಿನಿಂದ ಸಂಪ್ರೀತನಾದ ವಿಧಾತ ಒಬ್ಬಳು ಕನ್ಯೆಯನ್ನು ಅನುಗ್ರಹಿಸಿದ. ಆಕೆ ಬ್ರಹ್ಮನ ಮನಃಸಂಜಾತೆ. ಅವಳ ಹೆಸರು ತಾಟಕೆ. ಬ್ರಹ್ಮನಿರ್ಮಾಣವೆಂದ ಮೇಲೆ ಆಕೆಯ ಸೌಂದರ್ಯಕ್ಕೆ ಸಾಟಿ ಇರಲು ಸಾಧ್ಯವಿಲ್ಲವಷ್ಟೆ ! ಸುಕೇತು ಅಪೇಕ್ಷಿಸಿದ್ದು ಪುತ್ರಸಂತಾನವನ್ನು. ಬ್ರಹ್ಮ ನೀಡಿದ್ದು ಪುತ್ರಿಯನ್ನು. ಯಾಕೋ ಏನೋ ಗಂಡುಮಗುವನ್ನು ದಯಪಾಲಿಸಲಿಲ್ಲ. ಆದರೆ, ಗಂಡುಮಗುವಿಗೆ ಪರ್ಯಾಯವಾಗಿ ತಾಟಕೆಗೆ ಹತ್ತುಸಾವಿರ ಆನೆಗಳ ಬಲವನ್ನು ಪ್ರಸಾದಿಸಿದ. ಅದುವರೆಗೂ ಪ್ರಪಂಚವು ಕಂಡರಿಯದ ಸ್ತ್ರೀವೀರತ್ವವು ತಾಟಕೆಯಲ್ಲಿನಿಕ್ಷಿಪ್ತವಾಯಿತು. ಲೋಕತ್ರಯವನ್ನು ಸಂಮೋಹಿಸುವ ರೂಪಾತಿಶಯದಿಂದ ತಾಟಕೆ ತಾರುಣ್ಯವನ್ನು ತಳೆಯುತ್ತಿರುವಾಗ ಸುಕೇತುವು ವರಾನ್ವೇಷಣವನ್ನು ಆರಂಭಿಸಿದ. ತೀವ್ರವಾದ ಹುಡುಕಾಟದ ಕೊನೆಗೆ ಒಬ್ಬ ವರನನ್ನು ಪತ್ತೆ ಹಚ್ಚಿದ. ಜಂಭ ಎಂಬವನ ಮಗನಾದ ಸುಂದನಿಗೆ ಮಗಳನ್ನು ಧಾರೆಯೆರೆದ. ತಾಟಕೆ-ಸುಂದರ ಜೋಡಿಯ ಸುಂದರತೆಯ ಪರಿಣಾಮಫಲವಾಗಿ ಹುಟ್ಟಿದವನೇ ಮಾರೀಚ. ತಾಯಿಯೇ ಹತ್ತುಸಾವಿರ ಆನೆಗಳ ಬಲವುಳ್ಳವಳಾದರೆ, ಮಗನ ಬಲವನ್ನು ಅಳೆಯಲಳವೇ! ಅವನೂ ಮಹಾಪರಾಕ್ರಮಿಯಾಗಿ ಬೆಳೆದ.
ಸುಂದನಲ್ಲಿಜನ್ಮತಃ ಆಸುರ್ಯವು ಮಡುಗಟ್ಟಿತ್ತು. ಬೂದಿ ಮುಸುಕಿದ ಕೆಂಡದಂತಿದ್ದ ರಕ್ಕಸತನ ಆಗಾಗ ಪುಟಿದೇಳುತ್ತಿತ್ತು. ಹೀಗೆ ಒಮ್ಮೆ ಸುಂದನು ಅಗಸ್ತ್ಯರ ಆಶ್ರಮವನ್ನು ಅಟಕಾಯಿಸಿದ. ಕುಬ್ಜಶರೀರಿಗಳಾದ ಕುಂಭಸಂಭವ ಅಗಸ್ತ್ಯರನ್ನು ಕಿಚಾಯಿಸಿದ. ಆಶ್ರಮವನ್ನು ಉಧ್ವಸ್ತಗೊಳಿಸಲು ಉಪಕ್ರಮಿಸಿದ. ಮಹರ್ಷಿಗಳ ದೇಹದ ಮೇಲೆ ಹಲ್ಲೆಮಾಡತೊಡಗಿದ. ಅಗಸ್ತ ್ಯರ ಕೋಪದ ಕಿಡಿ ಸಿಡಿಯಿತು. ಋುಷಿಗಳ ಕಣ್ಣಾಲಿಯ ಕೆಂಗಿಚ್ಚಿಗೆ ಸುಂದನು ಬೂದಿಯಾಗಿ ಹೋದ. ತನ್ನ ಗಂಡನು ಅಗಸ್ತ್ಯರ ಶಾಪಾಗ್ನಿಗೆ ಆಹುತಿಯಾದುದರಿಂದ ತಾಟಕೆ ಪ್ರತೀಕಾರಕ್ಕೆ ಸಜ್ಜಾದಳು. ಮಹಾಪರಾಕ್ರಮಿಯಾದ ಮಗ ಮಾರೀಚನನ್ನು ಒಡಗೂಡಿಕೊಂಡು ಅಗಸ್ತ ್ಯರ ಆಶ್ರಮಕ್ಕೆ ನುಗ್ಗಿದಳು. ಕೊಂದುಬಿಡುತ್ತೇನೆ, ತಿಂದುಬಿಡುತ್ತೇನೆಂದು ಆರ್ಭಟಿಸಿದಳು. ಹತ್ತುಸಾವಿರ ಆನೆಗಳ ದೋರ್ಬಲದ (ತೋಳಿನ ಕಸುವು ) ದುರ್ಮದದಿಂದ ಅಗಸ್ತ್ಯರ ಮೇಲೆ ಮುಗಿಬಿದ್ದಳು. ಮಾರೀಚನೂ ಅಬ್ಬೆಯ ಬೊಬ್ಬೆಯ ಜೊತೆಗೆ ಉಬ್ಬೆಗದಿಂದ ಗಬ್ಬರಿಸುತ್ತಿದ್ದ. ಭಗವಾನ್ ಅಗಸ್ತ ್ಯರು ವಡವಾನಲವಾದರು. ಕೊಲ್ಲಲೆಂದು ಕೈಯೆತ್ತಿ ಎರಗುತ್ತಿದ್ದ ಕುಮಾರ ಮಾರೀಚನಿಗೆ ‘ರಾಕ್ಷಸತ್ವಂ ಭಜಸ್ವ - ನೀನು ರಾಕ್ಷಸನಾಗು’ ಎಂದು ಶಪಿಸಿದರು. ಮಹರ್ಷಿಗಳ ಸುಡುಗಣ್ಣು, ಸುಂದರಿಯಾದ ತಾಟಕೆಯತ್ತ ಹೊರಳಿತು. ‘ರೇ ದುರ್ಮದೆ ! ಪುರುಷಾದೀ ಮಹಾಯಕ್ಷೀ ವಿರೂಪಾ ವಿಕೃತಾನನಾ, ದಾರುಣಂ ರೂಪಮಸ್ತು ತೇ - ನೀನು ನರಭಕ್ಷಕಳಾಗು. ನಿನಗೆ ಕರಾಳವಾದ ರೂಪ ಪ್ರಾಪ್ತವಾಗಲಿ. ಮುಖ ವಿಕಾರವಾಗಲಿ’ ಎಂದು ಶಪಿಸಿ ಅವರಿಬ್ಬರನ್ನೂ ಆಶ್ರಮದ ಪುಣ್ಯಸ್ಥಳದಿಂದ ಉಚ್ಚಾಟಿಸಿದರು.
ಗಂಡನು ಸತ್ತ. ಮಗನು ರಾಕ್ಷಸನಾದ. ತಾನು ವಿರೂಪಿಯಾದಳು. ಮಾಂಸಾಶಿನಿಯಾದಳು. ಯಕ್ಷಿಯಾಗಿದ್ದವಳು ನರಭಕ್ಷಿಣಿಯಾದಳು. ನೆಲೆದಪ್ಪಿದ ಪ್ರೇತದಂತೆ ತಾಯಿ ಮಗ ನಾಡು ಕಾಡೆನ್ನದೆ ಅಲೆದರು. ಹೀಗೆ ಅಲೆಯುತ್ತಿದ್ದವರಿಗೆ ತಂಗಲೊಂದು ತಾಣ ಸಿಕ್ಕಿತು. ಅದೇ ಮಲದ-ಕರೂಷ. ಈ ಪ್ರದೇಶಕ್ಕೂ ಒಂದು ಐತಿಹ್ಯವಿದೆ.
ದೇವೇಂದ್ರನು ವೃತ್ರನನ್ನು ಉಪಾಯಾಂತರದಿಂದ ವಧಿಸಿದ್ದನಲ್ಲ! ಆ ವೃತ್ರನು ತ್ವಷ್ಟ್ರ-ಬ್ರಹ್ಮನ ಮಗ. ಅಂದರೆ ಬ್ರಹ್ಮಸಂಜಾತ. ಅವನನ್ನು ಕೊಂದದ್ದರಿಂದ ಬ್ರಹ್ಮಹತ್ಯಾಪಾತಕವು ಇಂದ್ರನ ಬೆನ್ನು ಹತ್ತಿತು. ಪಾಪದ ಪರಿಮಾರ್ಜನೆಗಾಗಿ ಕಂಡಕಂಡಲ್ಲಿಸುತ್ತಿದ. ಸುಳಿದಾಡಿದ. ಅಡಗಿದ. ಓಡಿದ. ದಂಡಕಾಷ್ಠವಾಗಿ ಬೆಂಬತ್ತಿದ ಪಾಪವನ್ನು ಭೂವ್ಯೋಮಗಳಲ್ಲಿಹಂಚಿದ. ಪಾಪವೇನೂ ತೊಲಗಿತು. ಆದರೆ ಪಾಪದ ಅಂಟು ಕಳೆಯಲಿಲ್ಲ. ಹಸಿವು ನೀರಡಿಕೆ ಬಳಲಿಕೆ ಕಳಲಿಕೆಗಳಿಂದ ಜಂಭಾರಿ ಜರ್ಜರಿತನಾದ. ಆಗ ದೇವತೆಗಳು ಋುಷಿಗಳು ಸೇರಿ ದೀರ್ಘವಾಗಿ ಸಮಾಲೋಚಿಸಿ ಒಂದು ನಿರ್ಣಯಕ್ಕೆ ಬಂದರು. ಆ ಪ್ರಕಾರವಾಗಿ ಇಂದ್ರನನ್ನು ಒಂದು ಭೂಪ್ರದೇಶಕ್ಕೆ ಕರೆತಂದರು. ಅವನಿಗೆ ಮಂತ್ರೋದಕದಿಂದ ಅಭಿಷೇಚನವನ್ನು ಮಾಡಿದರು. ಅದರಿಂದ ಇಂದ್ರನ ಆಶುಚಿಯೂ (ಮಲವೂ ) ಹಸಿವೆಯೂ (ಕರೂಷವೂ) ಅವನಿಂದ ದೂರವಾಯಿತು. ‘ಯಾವ ಸ್ಥಳದಲ್ಲಿನನ್ನ ಮಲವೂ ಕರೂಷವೂ ಕಳೆಯಿತೋ, ಆ ಪ್ರದೇಶವು ಮುಂದೆ ಮಲದ ಕರೂಷ ಎನ್ನುವ ಹೆಸರಿನಿಂದ ಪ್ರಸಿದ್ಧವಾಗಲಿ’ ಎಂದು ಇಂದ್ರನು ವರವಿತ್ತ. ಮಹರ್ಷಿಗಳು ದೇವತೆಗಳು ಮಲದಕರೂಷದಲ್ಲಿಮಂತ್ರವಿಧಿಯನ್ನು ಸಮಾಚರಿಸಿದ ಸತ್ಪರಿಣಾಮದಿಂದ, ಆ ಪ್ರದೇಶವು ಸಕಲ ಸಂಪತ್ ಸಮೃದ್ಧವಾಗಿ ಬೆಳೆಯಿತು. ಧನಧಾನ್ಯಗಳಿಂದ ತುಂಬಿ ತುಳುಕಿತು. ಮಹರ್ಷಿ ಅಗಸ್ತ್ಯರೂ ಮಲದಕರೂಷದ ವಲಯಲ್ಲಿಕೊಂಚ ಕಾಲ ತಂಗಿದ್ದರು.