ಬಿಸಿಲಾಘಾತಕ್ಕೆ ಒಣಗುತ್ತಿದೆ ಮುಂಗಾರು ಬೆಳೆಉತ್ತಮ ಮಳೆಯಾಗದಿದ್ದರೆ ಬಿತ್ತನೆಯಾದ ಬೆಳೆ ಕೂಡ ಒಣಗುವ ಭೀತಿ | ಕೆರೆಗಳಂತೂ ಸಂಪೂರ್ಣ ಖಾಲಿ, ಮೇವಿಗೂ ಟೆನ್ಷನ್
ಆದರ್ಶ ಕೋಡಿಕನ್ಯಾಣ ಬೆಂಗಳೂರು ಗ್ರಾಮಾಂತರ
್ಚಧಿada್ಟsha.kಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಮುಂಗಾರು ಬೆಳೆಗಳ ಒಣಗುವ ಭೀತಿ ಹೆಚ್ಚಾಗಿದ್ದು, ಮುಂದಿನ ಕೆಲ ದಿನಗಳಲ್ಲಿಉತ್ತಮ ಮಳೆಯಾಗದಿದ್ದರೆ ಬೆಳೆಗಳು ಮತ್ತಷ್ಟು ಒಣಗಲು ಆರಂಭವಾಗಲಿದೆ.
ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿಯೂ ದೊಡ್ಡ ಆಘಾತವಾಗಿದೆ. ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಗಿದ್ದ ಮಳೆ ಕೊರತೆಯ ನಡುವೆಯೇ, ತಡವಾಗಿ ಬಿತ್ತನೆ ಮಾಡಿರುವ ಬೆಳೆಗಳ ಉಳಿವಿಗೂ ಇದೀಗ ಮಳೆಯ ಅಗತ್ಯವಿದೆ.
ಈಗಾಗಲೇ ಬಿತ್ತನೆಯಾಗಿರುವ ರಾಗಿ, ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಮೊಳಕೆಯೊಡೆದು ಬೆಳವಣಿಗೆ ಹಂತದಲ್ಲಿದ್ದು, ಮುಂದಿನ ಕೆಲ ದಿನಗಳು ನಿರ್ಣಾಯಕವಾಗಿದ್ದು, ಉತ್ತಮ ಮಳೆಯಾಗದಿದ್ದರೆ ಒಣಗುವ ಭೀತಿ ಎದುರಾಗಿದೆ. ಮತ್ತೊಂದೆಡೆ, ಗ್ರಾಮೀಣ ಪ್ರದೇಶಗಳ ಕೆರೆ-ಕುಂಟೆಗಳು ನೀರಿಲ್ಲದೆ ಖಾಲಿಯಾಗಿರುವುದು ಕೃಷಿ ಚಟುವಟಿಕೆಗಳ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ. ಕೆಲವು ಕಡೆಗಳಲ್ಲಿಬೆಳೆ ಕೈಕೊಟ್ಟರು ಮೇವು ಸಿಗಲಿ ಎಂಬ ನಿರೀಕ್ಷೆ ರೈತರದ್ದಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ74 ಸಾವಿರ ಹೆಕ್ಟೇರ್ ನಷ್ಟು ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿರಾಗಿಯೇ ಪ್ರಮುಖ ಬೆಳೆಯಾಗಿದ್ದು, ಬಹುತೇಕ ಬಿತ್ತನೆಯು ನಡೆದಿತ್ತು. ಆದರೆ ಮೆಕ್ಕೆಜೋಳ ಸೇರಿದಂತೆ ಇನ್ನಿತರೆ ಬೆಳೆಗಳ ಬಿತ್ತನೆಗೆ ಅಗತ್ಯಕ್ಕೆ ಅನುಸಾರ ಮಳೆಯಾಗದೆ ಬಿತ್ತನೆ ಕುಂಠಿತವಾಗಿತ್ತು. ಇದೀಗ ಈ ತಿಂಗಳೇ ಬಿತ್ತನೆಯಾದ ಬೆಳೆಗಳಿಗೆ ನಿರ್ಣಾಯಕವಾಗಿದ್ದು, ಮಳೆಯಾದರೆ ಮಾತ್ರ ಒಂದಿಷ್ಟು ಫಸಲು ರೈತರ ಕೈಸೇರುವ ಸಾಧ್ಯತೆಯಿದೆ.
ಬಿತ್ತನೆಗೆ ತಡ, ಬೆಳೆ ಉಳಿವಿಗೆ ಸಂಕಷ್ಟ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಭಾಗಗಳಲ್ಲಿಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಮಳೆಯನ್ನೇ ಅವಲಂಬಿಸಿದೆ. ವಾಡಿಕೆಯಂತೆ ಆರಂಭವಾಗಬೇಕಿದ್ದ ಬಿತ್ತನೆಗೆ ಮಳೆಯ ಕೊರತೆ ಅಡ್ಡಿಯಾಗಿದ್ದರಿಂದ ಅನೇಕ ರೈತರು ಬಿತ್ತನೆ ಮುಂದೂಡಿದ್ದರು. ಕೆಲವರು ಆಗಸ್ಟ್ ತಿಂಗಳಲ್ಲಿತಡವಾಗಿ ಸುರಿದ ಮಳೆಯನ್ನು ಬಳಸಿಕೊಂಡು ಹೊಲ ಹದಗೊಳಿಸಿ ಬಿತ್ತನೆ ಮಾಡಿದ್ದಾರೆ. ಆದರೆ, ಬಿತ್ತನೆಯಾದ ಬಳಿಕ ನಿರಂತರವಾಗಿ ಮಳೆ ಸುರಿಯದಿರುವುದು ರೈತರಲ್ಲಿಆತಂಕ ಮೂಡಿಸಿದೆ. ಬಿತ್ತನೆಯಾದ ಬೀಜಗಳು ಮೊಳಕೆಯೊಡೆದು ಸಸಿಗಳು ನೆಲದಿಂದ ಹೊರಬಂದಿರುವ ಸಂದರ್ಭದಲ್ಲಿತೇವಾಂಶದ ಕೊರತೆ ಎದುರಾದರೆ ಬೆಳೆ ಬೆಳವಣಿಗೆ ಕುಂಠಿತಗೊಳ್ಳಲಿದೆ. ಮಣ್ಣಿನಲ್ಲಿರುವ ತೇವಾಂಶ ಕಡಿಮೆಯಾದಂತೆ ಎಳೆಯ ಸಸಿಗಳು ಬಾಡುವ ಸಾಧ್ಯತೆ ಹೆಚ್ಚುತ್ತದೆ. ಮಳೆಯ ಪ್ರಮಾಣ ಕಡಿಮೆಯಿರುವ ಪ್ರದೇಶಗಳಲ್ಲಿಈ ಸಮಸ್ಯೆ ತೀವ್ರವಾಗಿದ್ದು, ಬಿತ್ತನೆಗೆ ಖರ್ಚು ಮಾಡಿದ ಹಣ ಹಾಗೂ ಶ್ರಮ ವ್ಯರ್ಥವಾಗುವ ಆತಂಕ ರೈತರನ್ನು ಕಾಡುತ್ತಿದೆ.
ಈ ತಿಂಗಳೇ ನಿರ್ಣಾಯಕ: ಮುಂಗಾರು ಬೆಳೆಗಳ ಪಾಲಿಗೆ ಮುಂದಿನ ಮುಂದಿನ ಬೆರಳೆಣಿಕೆಯ ದಿನಗಳೇ ನಿರ್ಣಾಯಕವಾಗಿವೆ. ಈಗಾಗಲೇ ಬಿತ್ತನೆ ಮಾಡಿರುವ ಜಮೀನುಗಳಲ್ಲಿಮಣ್ಣಿನ ತೇವಾಂಶ ಉಳಿದಿದ್ದರೆ ಮಾತ್ರ ಸಸಿಗಳು ಮುಂದಿನ ಬೆಳವಣಿಗೆ ಹಂತಕ್ಕೆ ಸಾಗಲು ಸಾಧ್ಯ. ಮಳೆ ಮುಂದುವರಿಯದೆ ಬಿಸಿಲಿನ ತೀವ್ರತೆ ಹೆಚ್ಚಾದರೆ ತೇವಾಂಶ ವೇಗವಾಗಿ ಆವಿಯಾಗುವ ಸಾಧ್ಯತೆ ಇದೆ. ಹೀಗಾಗಿ, ಮುಂದಿನ ಒಂದು ವಾರದೊಳಗೆ ಉತ್ತಮ ಮಳೆಯಾಗಬೇಕಾದ ಅನಿವಾರ್ಯತೆ ಇದೆ. ಕೆಲವೆಡೆ ರೈತರು ಒಣಗುತ್ತಿರುವ ಬೆಳೆಗಳನ್ನು ನಾಶಪಡಿಸುತ್ತಿದ್ದರೆ, ಇನ್ನೂ ಕೆಲವೆಡೆ ಮಳೆಗಾಗಿ ವಿಶೇಷ ಆಚರಣೆಗಳ ಮೊರೆ ಹೋಗಿದ್ದಾರೆ. ಅಲ್ಲಲ್ಲಿಕೊಂಚ ಮಳೆಯಾಗುತ್ತಿದ್ದರೂ ಬಿಸಿಲ ಹೊಡೆತಕ್ಕೆ ಅದು ಕೂಡ ತೇವಾಂಶವನ್ನು ಕಳೆದುಕೊಳ್ಳುತ್ತಿದ್ದು, ಉತ್ತಮ ಮಳೆ ನಿರೀಕ್ಷೆಯಲ್ಲಿಜಿಲ್ಲೆಯ ರೈತರಿದ್ದಾರೆ.
ಶೇ.97ರಷ್ಟು ರಾಗಿ ಬಿತ್ತನೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಆಗಸ್ಟ್ ತಿಂಗಳ ಅಂತ್ಯಕ್ಕೆ ಜಿಲ್ಲೆಯಲ್ಲಿ62,700 ಹೆಕ್ಟೇರ್ ರಾಗಿ ಬಿತ್ತನೆ ಗುರಿಯಿತ್ತು, ಇದರಲ್ಲಿ ಅಂದಾಜು 60,847 ಬಿತ್ತನೆ ಆಗಿದ್ದು, ಶೇ.97ರಷ್ಟು ಬಿತ್ತನೆ ಆಗಿದೆ. ಇನ್ನೂ ಮೆಕ್ಕೆಜೋಳವೂ 7320 ಹೆಕ್ಟೇರ್ ಗುರಿಯಲ್ಲಿ2566 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದ್ದು, ಶೇ.35ರಷ್ಟು ಬಿತ್ತನೆ ಪೂರ್ಣಗೊಂಡಿತ್ತು. ಇದರಲ್ಲಿಬಹುತೇಕ ಕಡೆಗಳಲ್ಲಿಮಳೆಯಿಲ್ಲದೆ ಬೆಳೆ ಒಣಗುತ್ತಿದ್ದು, ರೈತರ ಬಿತ್ತನೆ ಖರ್ಚು ಕೂಡ ನಷ್ಟವಾಗುವ ಸಾಧ್ಯತೆಯಿದೆ.
ಖಾಲಿಯಾಗಿರುವ ಕೆರೆಗಳು: ಗ್ರಾಮೀಣ ಭಾಗಗಳಲ್ಲಿಕೆರೆ-ಕುಂಟೆಗಳ ಸ್ಥಿತಿ ಮತ್ತೊಂದು ಪ್ರಮುಖ ಚಿಂತೆಯಾಗಿದೆ. ಮುಂಗಾರು ಮಳೆಯ ಕೊರತೆಯಿಂದ ಅನೇಕ ಕೆರೆಗಳಲ್ಲಿನೀರು ಸಂಗ್ರಹವಾಗಿಲ್ಲ. ಕೆಲವು ಕೆರೆಗಳ ತಳಭಾಗ ಮಾತ್ರ ಕಾಣಿಸುತ್ತಿದ್ದು, ಜಲಮೂಲಗಳು ಸಂಪೂರ್ಣ ಖಾಲಿಯಾಗಿರುವ ದೃಶ್ಯ ಕಂಡುಬರುತ್ತಿದೆ. ಮಳೆ ಬಿದ್ದಾಗ ನೀರು ಸಂಗ್ರಹವಾಗಿ ಕೃಷಿ ಹಾಗೂ ಜಾನುವಾರುಗಳಿಗೆ ಅನುಕೂಲವಾಗಬೇಕಿದ್ದ ಕೆರೆಗಳು ಇದೀಗ ಬರಿದಾಗಿರುವುದು ಗ್ರಾಮೀಣ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.
ಕೆರೆಗಳು ತುಂಬದಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ನೀರಿನ ಲಭ್ಯತೆ ಕಡಿಮೆಯಾಗಿದೆ. ಬೋರ್ ವೆಲ್ ಗಳನ್ನೇ ಅವಲಂಬಿಸಿರುವ ರೈತರಿಗೆ ವಿದ್ಯುತ್ ಹಾಗೂ ನೀರಿನ ವೆಚ್ಚವೂ ಹೆಚ್ಚುವರಿ ಹೊರೆಯಾಗಿದೆ. ಮಳೆ ನೀರು ಸಂಗ್ರಹವಾಗದಿದ್ದರೆ ಮುಂದಿನ ದಿನಗಳಲ್ಲಿಅಂತರ್ಜಲ ಮಟ್ಟದ ಮೇಲೂ ಪರಿಣಾಮ ಬೀರುವ ಆತಂಕವಿದೆ.
ಆರ್ಥಿಕ ನಷ್ಟದ ಭೀತಿ : ಕೃಷಿ ವೆಚ್ಚ ನಿರಂತರವಾಗಿ ಏರುತ್ತಿರುವ ಸಂದರ್ಭದಲ್ಲಿಮಳೆ ಕೈಕೊಟ್ಟರೆ ರೈತರಿಗೆ ಆರ್ಥಿಕ ನಷ್ಟದ ಹೊರೆ ಹೆಚ್ಚಲಿದೆ. ಬೀಜ, ಗೊಬ್ಬರ, ಉಳುಮೆ ಹಾಗೂ ಬಿತ್ತನೆಗೆ ಖರ್ಚು ಮಾಡಿದ ಹಣ ಬೆಳೆ ಉಳಿದಾಗ ಮಾತ್ರ ವಾಪಸ್ ಪಡೆಯಲು ಸಾಧ್ಯ. ಆದರೆ, ಬಿತ್ತನೆಯಾದ ಬಳಿಕ ಮಳೆ ಬಾರದಿರುವುದು ಕೃಷಿಯ ಆರಂಭಿಕ ಹಂತದಲ್ಲಿಯೇ ರೈತರ ನಿರೀಕ್ಷೆಗಳಿಗೆ ಧಕ್ಕೆಯಾಗಿದೆ. ಮುಂಗಾರು ಬೆಳೆಗಳ ಯಶಸ್ಸು ಮಳೆಯ ಹಂಚಿಕೆಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿಅವಲಂಬಿತವಾಗಿರುವುದರಿಂದ, ಒಂದೇ ಬಾರಿ ಮಳೆಯಾಗುವುದಕ್ಕಿಂತ ಅಗತ್ಯ ಹಂತಗಳಲ್ಲಿಮಳೆ ಸುರಿಯುವುದು ಮುಖ್ಯವಾಗಿದೆ.
ಮುಂದಿನ ಸವಾಲೇನು?
- ರೈತರಿಗೆ ಬಿತ್ತನೆ ಬಂಡವಾಳ ನಷ್ಟ
- ರಾಗಿ ಫಸಲು ಕುಸಿತ, ದರ ಏರಿಕೆ
- ಹೈನುಗಾರರಿಗೆ ಒಣಮೇವಿನ ಕೊರತೆ, ಬೆಲೆ ಏರಿಕೆ ಭೀತಿ
- ಹಸಿ ಹುಲ್ಲಿಗೂ ಬೇಡಿಕೆ ಹೆಚ್ಚಳ
- ಮಳೆ ಕೊರತೆಯಿಂದ ಕೆರೆಗಳು ಖಾಲಿ, ಕುಡಿಯುವ ನೀರಿನ ಸಮಸ್ಯೆಗೂ ದಾರಿ
ಕೋಟ್ ,
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ 3 ತಾಲೂಕುಗಳನ್ನೂ ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿಸೆಪ್ಟೆಂಬರ್ ಆರಂಭದಿಂದಲ್ಲೂಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಉತ್ತಮ ಮಳೆಯಾದರೆ ಬೆಳೆ ಸುಧಾರಿಸಿಕೊಳ್ಳಲಿದೆ. ಇಲ್ಲವಾದಲ್ಲಿಹಂತಹಂತವಾಗಿ ಬೆಳೆಗಳು ಒಣಗಲು ಆರಂಭವಾಗುತ್ತದೆ.
ಕಲಾವತಿ | ಜಂಟಿ ನಿರ್ದೇಶಕಿ, ಕೃಷಿ ಇಲಾಖೆ, ಬೆಂಗಳೂರು ಗ್ರಾಮಾಂತರ.
ಕೋಟ್ ,
ರಾಗಿ ಬಿತ್ತನೆಗೆ ಎಕರೆಗೆ ಸರಿಸುಮಾರು 25 ರಿಂದ 30ಸಾವಿರ ಖರ್ಚು ಬರುತ್ತದೆ. ಆದರೆ ಈ ಬಾರಿ ಬಿತ್ತನೆ ಮಾಡಿ ಸಸಿಗಳು ಮೊಳಕೆ ಬಂದು ಬೆಳೆಯುವ ಹಂತದಲ್ಲಿಮಳೆ ಮತ್ತೆ ಕೈಕೊಟ್ಟಿದೆ. ಇದರಿಂದ ಈಗಾಗಲೇ ಬೆಳೆ ಸಂಪೂರ್ಣವಾಗಿ ಒಣಗುತ್ತಿದ್ದು, ಸರಕಾರ ರೈತರ ನೆರವಿಗೆ ಧಾವಿಸಬೇಕಿದೆ.