ಇಂಟ್ರೊಬ್ರೇಕಪ್ ಮಾಡಿಕೊಳ್ಳಲು ಹಾಗೂ ಆ ನೋವಿನಿಂದ ಹೊರಬರಲು ಕೆಫೆ, ಪ್ರವಾಸ ತಾಣಗಳು ಈಗ ಹಾಟ್ ಸ್ಪಾಟ್ ಗಳಾಗಿ ಬದಲಾಗಿವೆ.
ಶುಭಾ ವಿಕಾಸ್
ಮದುವೆ, ಜಾತ್ರೆ ಅಥವಾ ಬಸ್ ನಿಲ್ದಾಣದಲ್ಲೆಲ್ಲೋ ಹೊಸದಾಗಿ ಶುರುವಾಗುತ್ತದೆ ಆಕರ್ಷಣೆ. ಮೊದಲ ಬಾರಿಗೆ ಕೆಫೆಯಲ್ಲಿನಿವೇದಿಸಿಕೊಂಡ ಪ್ರೇಮ ಇನ್ನೆಲ್ಲೋ ಬಲಿಯುತ್ತದೆ. ಸಮುದ್ರದ ಅಲೆಗಳು, ಮಂಜಿನ ಬೆಟ್ಟಗಳು ಅಥವಾ ನದಿ ತೀರದಲ್ಲಿಜೊತೆಯಾಗಿ ಹೆಜ್ಜೆ ಹಾಕುತ್ತಾ, ಆ ಸುಂದರ ಕ್ಷಣಗಳಲ್ಲೇ ಜೀವಿಸಲು ಬಯಸುವ ಒಲವಿನ ಪಯಣದಲ್ಲೆಲ್ಲಸಡಗರ. ಹೊಸತನದ ಭಾವ ಸದಾ ಹಸನಾಗಿಯೇ ಇರುತ್ತದೆ ಎಂಬ ನಂಬಿಕೆಯಲ್ಲೇ ಗಟ್ಟಿಯಾಗುತ್ತದೆ ಪ್ರೇಮ ಸಂಬಂಧ. ಆದರೆ ಯಾವುದೋ ಮೂಲೆಯ ಕೆಫೆಯಲ್ಲಿಕುಳಿತು ಹೀರುವ ಕಾಫಿಯ ಬಿಸಿಯ ನಡುವಿನ ಮೌನ, ಮಾತುಗಳ ನಡುವಿನ ಅಂತರ ಬಂಧದ ನೈಜ ಚಿತ್ರಣವನ್ನು ಎದುರಿಡುತ್ತವೆ. ಕೊನೆಗೆ ಇಬ್ಬರನ್ನು ಒಂದಾಗಿಸಿದ್ದಂಥದ್ದೇ ಇನ್ಯಾವುದೋ ಬೀದಿಯ, ಊರಿನ ಹೋಟೆಲ್ , ಉದ್ಯಾನ ಅಥವಾ ಯಾವುದೋ ತಾಣ ಇಬ್ಬರ ದಾರಿಯನ್ನು ಪರಸ್ಪರ ಬೇರೆ ಮಾಡುತ್ತದೆ. ಹೌದು, ಇತ್ತೀಚಿನ ದಿನಗಳಲ್ಲಿಉದ್ಯಾನ, ಪ್ರವಾಸಿ ತಾಣಗಳು ಮತ್ತು ಕೆಫೆಗಳು ಕೇವಲ ಪ್ರೀತಿ ಹುಟ್ಟುವ ಜಾಗಗಳಾಗಿ ಉಳಿದಿಲ್ಲ, ಮುರಿದುಕೊಳ್ಳುವ ಸಂಬಂಧಕ್ಕೆ ಪೂರಕ ವಾತಾವರಣ ಕಲ್ಪಿಸುವ ಬ್ರೇಕಪ್ ಸ್ಪಾಟ್ ಗಳಾಗಿ ಮಾರ್ಪಡುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿಈಗ ಬ್ರೇಕಪ್ ಸ್ಪಾಟ್ ಗಳು ಟ್ರೆಂಡಿಂಗ್ ನಲ್ಲಿವೆ. ಉಪಾಹಾರ ಮಂದಿರದಿಂದ ಪ್ರವಾಸ ತಾಣಗಳವರೆಗೆ ಬ್ರೇಕಪ್ ಹೆಸರಲ್ಲಿನಾನಾ ತಾಣಗಳು ಸೆಳೆಯುತ್ತಿವೆ.
ಪೂರಕ ವಾತಾವರಣ
ಸಾಮಾನ್ಯವಾಗಿ ಪ್ರೀತಿ ಹೆಸರಲ್ಲಿಸಮಯ ಕಳೆದ, ನಕ್ಕುನಲಿದ ಜಾಗಗಳಲ್ಲಿಬಂಧವನ್ನೇ ಕಳೆದುಕೊಳ್ಳುವುದು ಕಷ್ಟ. ಏಕೆಂದರೆ ಆ ಹಳೆಯ ಜಾಗಗಳು ಪ್ರತಿ ಕ್ಷಣವೂ ಮನದ ಗಾಯವನ್ನು ಕೆದಕುತ್ತಲೇ ಇರುತ್ತವೆ. ಅದಕ್ಕಾಗಿಯೇ ಗೊತ್ತಿಲ್ಲದ ಬೀದಿಯ ಕೆಫೆ, ಉದ್ಯಾನದಂಥ ತಮಗೆ ನಂಟು ಇಲ್ಲದ ತಾಣಗಳಲ್ಲಿಕುಳಿತು ಸಂಬಂಧ ಕಳೆದುಕೊಳ್ಳಲು ಮುಂದಾಗಿದೆ ಯುವಜನತೆ. ಕಷ್ಟಕರ ವಿಷಯಗಳನ್ನು ಮನೆಯಲ್ಲಿಅಥವಾ ಖಾಸಗಿ ಜಾಗದಲ್ಲಿಮಾತನಾಡುವಾಗ ಕೋಪ, ಆಕ್ರೋಶಗಳು ಹದ್ದುಮೀರಿ ಜಗಳಕ್ಕೆ ದಾರಿಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಸಾರ್ವಜನಿಕ ಸ್ಥಳವು ಇಬ್ಬರಿಗೂ ತಮ್ಮ ಭಾವನೆಗಳನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ ಎಂಬ ಉದ್ದೇಶ ಇದರ ಹಿಂದಿದೆ ಎನ್ನುವ ಆಪ್ತ ಸಲಹೆಗಾರ್ತಿ ದಾಕ್ಷಾಯಣಿ, ‘ಸಂಬಂಧವನ್ನು ಕೊನೆಗೊಳಿಸುವಾಗ ಸಾರ್ವಜನಿಕ ಮತ್ತು ತಟಸ್ಥ ಸ್ಥಳ ಆಯ್ಕೆ ಮಾಡಿಕೊಳ್ಳುವುದು ಕೇವಲ ಸುರಕ್ಷತೆಯ ದೃಷ್ಟಿಯಿಂದಷ್ಟೇ ಅಲ್ಲ, ಅದು ಇಬ್ಬರಿಗೂ ತಮ್ಮ ಭಾವನಾತ್ಮಕ ಉದ್ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಕಾರಿ. ಪರಸ್ಪರ ಗೌರವದಿಂದ ಬೀಳ್ಕೊಡಲು ನೀಡುವ ಒಂದು ಸಭ್ಯ ಅವಕಾಶವೂ ಹೌದು’ ಎನ್ನುತ್ತಾರೆ.
ಬ್ರೇಕಪ್ ನಂತರದ ಯಾನ
ಪ್ರೀತಿ ಮುರಿದುಕೊಳ್ಳಲು ಹೇಗೆ ಒಂದು ವಾತಾವರಣ ಬೇಕೋ ಅದೇ ರೀತಿ ನೋವಿನಿಂದ ಹೊರಬರಲು ಪ್ರಶಾಂತ ತಾಣ ಬೇಕು. ಒಂದು ಕಪ್ ಕಾಫಿ, ಸೂರ್ಯಾಸ್ತ, ಲಾಂಗ್ ಡ್ರೈವ್ ಗಳ ಮೂಲಕ ಬ್ರೇಕಪ್ ದಾಟಿ ಮುಂದೆ ಸಾಗುವ ಹಾದಿ ಕಂಡುಕೊಳ್ಳುತ್ತಿದ್ದಾರೆ. ಬ್ರೇಕಪ್ ನ ಕೋಪ ಮತ್ತು ನಿರಾಸೆ ಹೊರಹಾಕಲು ರೇಜ್ ರೂಮ್ ಸಂಸ್ಕೃತಿಯೂ ಗಮನ ಸೆಳೆಯುತ್ತಿದೆ. ಇಲ್ಲಿಗಾಜು, ಎಲೆಕ್ಟ್ರಾನಿಕ್ ವಸ್ತು ಮುಂತಾದವುಗಳನ್ನು ಒಡೆದು ಹಾಕಿ ಮನಸ್ಸಿನ ಸಿಟ್ಟನ್ನು ಹೊರಹಾಕಬಹುದು. ಮನಸ್ಸನ್ನು ಶಾಂತಗೊಳಿಸಲು ಮತ್ತು ಏಕಾಂತದಲ್ಲಿಕಾಲ ಕಳೆಯಲು ಉದ್ಯಾನಗಳಿಗೆ ಹೋಗುವುದು ಸಾಮಾನ್ಯ. ಪೇಂಟಿಂಗ್ ಹಾಗೂ ಆರ್ಟ್ ಕೆಫೆಗಳು, ಲಾಂಗ್ ಡ್ರೈವ್ , ಸನ್ ರೈಸ್ ಸ್ಪಾಟ್ ಗಳು ನೊಂದ ಮನಕ್ಕೆ ಸಾಂತ್ವನ ನೀಡುತ್ತವೆ.
ಕೋಟ್
ಬ್ರೇಕಪ್ ನಂತರ ಕೋಣೆಯಲ್ಲಿಕುಳಿತು ಕೊರಗುವ ಬದಲು ನಗರದ ವಿಭಿನ್ನ ತಾಣಗಳಿಗೆ ತೆರಳಿ ತಮ್ಮ ಭಾವನೆಗಳನ್ನು ಸ್ವೀಕರಿಸುವುದು ಮತ್ತು ಒಂಟಿಯಾಗಿ ಪ್ರವಾಸ ಮಾಡುವ ಮೂಲಕ ಚೇತರಿಸಿಕೊಳ್ಳಬಹುದು ಎಂಬ ಹಳೆಯ ಭಾವ ಹೊಸ ರೂಪ ಪಡೆದಿದೆ. ಪ್ರೀತಿಯನ್ನು ಸಂಭ್ರಮಿಸಲು ಕೆಫೆ, ಪಾರ್ಕ್ಗಳನ್ನು ಬಳಸುತ್ತಿದ್ದ ನಗರಗಳು ಈಗ ಸಾಂತ್ವನ ನೀಡುವ ಹೀಲಿಂಗ್ ಸ್ಪಾಟ್ ಆಗಿ ಬದಲಾಗುತ್ತಿವೆ. ಸ್ಯಾಡ್ ಗಲ್ ರ್ ಟೂರಿಸಂ, ಬ್ರೇಕಪ್ ಟೂರಿಸಂ ಹೀಗೆ ಹಲವು ಟ್ರೆಂಡ್ ಗಳಡಿ ಪ್ರವಾಸೋದ್ಯಮದಲ್ಲಿವಿರಹದ ನೋವಿಗೆ ಮದ್ದು ನೀಡುವ ತಾಣಗಳ ಪ್ಯಾಕೇಜ್ ಗಳು ಇನ್ನಷ್ಟೇ ಸೇರ್ಪಡೆಯಾಗಬೇಕಿದೆ.