ಶುಕ್ರ

Contributed byShrividya Rao|Vijaya Karnataka
the fate of venus moon new research reveals reality
ಚಂದ್ರನನ್ನು ನುಂಗಿದ ಶುಕ್ರ !

ಭೂಮಿಯಂತೆಯೇ ಗಾತ್ರ, ದ್ರವ್ಯರಾಶಿ ಮತ್ತು ರಚನೆಯನ್ನು ಹೊಂದಿರುವ ಶುಕ್ರ ಗ್ರಹಕ್ಕೆ ಯಾಕೆ ಚಂದ್ರನಿಲ್ಲಎಂಬುದು ವಿಜ್ಞಾನಿಗಳನ್ನು ಬಹಳ ಕಾಲದಿಂದ ಕಾಡುತ್ತಿದ್ದ ರಹಸ್ಯ. ಆದರೆ ಇದೀಗ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನಡೆಸಿದ ಹೊಸ ಸಂಶೋಧನೆಯು ಶುಕ್ರ ಗ್ರಹವು ತನ್ನದೇ ಚಂದ್ರನನ್ನು ನುಂಗಿರಬಹುದು ಎಂಬ ಅಚ್ಚರಿಯ ಸಂಗತಿಯನ್ನು ಹೊರಹಾಕಿದೆ.
ಹಿಂದೆ ಶುಕ್ರ ಗ್ರಹಕ್ಕೆ ಒಂದು ಚಂದ್ರನಿದ್ದಿರಬಹುದು ಮತ್ತು ಅದಕ್ಕೆ ಯಾವುದೋ ದೊಡ್ಡ ಉಲ್ಕೆ ಅಪ್ಪಳಿಸಿ ಅದನ್ನು ಧ್ವಂಸಗೊಳಿಸಿರಬಹುದು ಎಂದು ವಿಜ್ಞಾನಿಗಳು ನಂಬಿದ್ದರು. ಶುಕ್ರ ಗ್ರಹದ ಆರಂಭದಲ್ಲಿಚಂದ್ರನನ್ನು ರೂಪಿಸಿದ ಯಾವುದೇ ಘರ್ಷಣೆ ನಡೆದಿಲ್ಲಎಂಬುದು ಮತ್ತೊಂದು ವಾದವಾಗಿತ್ತು. ಆದರೆ ದಿ ಆಸ್ಟೊ್ರೕ ಫಿಸಿಕಲ್ ಜರ್ನಲ್ ನಲ್ಲಿ ಪ್ರಕಟವಾಗಿರುವ ಹೊಸ ಸಂಶೋಧನೆಯು ಈ ಎರಡೂ ವಾದಗಳು ಸರಿಯಲ್ಲಎಂದು ತೋರಿಸಿಕೊಟ್ಟಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿ ಸ್ಟೀಫನ್ ಕೇನ್ ಅವರ ಪ್ರಕಾರ, ಶುಕ್ರ ಗ್ರಹಕ್ಕೆ ಯಾವುದೇ ಮಹಾ ದುರಂತ ಸಂಭವಿಸಿಲ್ಲ. ಗ್ರಹದ ಸ್ವಂತ ಗುರುತ್ವಾಕರ್ಷಣೆ ಮತ್ತು ಅದು ತಿರುಗುವ ವೇಗವೇ ಚಂದ್ರನು ಅದರ ಮೇಲೆ ಕುಸಿದು ಬೀಳಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಭೂಮಿ ಮತ್ತು ಶುಕ್ರನ ನಡುವಿನ ವ್ಯತ್ಯಾಸ

ಭೂಮಿಯು ವೇಗವಾಗಿ ತಿರುಗುವುದರಿಂದ ಪ್ರತಿ 24 ಗಂಟೆಗಳಿಗೊಮ್ಮೆ ಉತ್ಪತ್ತಿಯಾಗುವ ಶಕ್ತಿಯು ಚಂದ್ರನನ್ನು ಕ್ರಮೇಣ ಅಂದರೆ ವರ್ಷಕ್ಕೆ ಸುಮಾರು 4 ಸೆಂ.ಮೀ.ನಷ್ಟು ದೂರ ತಳ್ಳುತ್ತಿದೆ. ಆದರೆ ಶುಕ್ರ ಗ್ರಹವು ತದ್ವಿರುದ್ಧವಾಗಿದೆ. ಇದು ತನ್ನ ಒಂದು ಸುತ್ತನ್ನು ಪೂರ್ಣಗೊಳಿಸಲು ಬರೋಬ್ಬರಿ 243 ಭೂಮಿಯ ದಿನಗಳನ್ನು ತೆಗೆದುಕೊಳ್ಳುತ್ತದೆ. ಇದರ ಈ ಅತಿ ನಿಧಾನ ತಿರುಗುವಿಕೆ ಮತ್ತು ಗುರುತ್ವಾಕರ್ಷಣೆಯು ಚಂದ್ರನನ್ನು ದೂರ ತಳ್ಳುವ ಬದಲು, ಅದನ್ನು ತನ್ನತ್ತ ಎಳೆದುಕೊಂಡು ಡಿಕ್ಕಿ ಹೊಡೆಸಿಕೊಳ್ಳುವಂತೆ ಮಾಡುತ್ತದೆ.

ಕಂಪ್ಯೂಟರ್ ಮಾದರಿ ಪರೀಕ್ಷೆ

ವಿಭಿನ್ನ ಗಾತ್ರದ ಯಾವ ಚಂದ್ರನನ್ನು ಕಲ್ಪಿಸಿಕೊಂಡರೂ ಅಂತಿಮವಾಗಿ ಅದು ಶುಕ್ರನ ಮೇಲೆಯೇ ಅಪ್ಪಳಿಸುತ್ತದೆ ಎಂಬ ಅಂಶ ದೃಢಪಟ್ಟಿದೆ. ದೊಡ್ಡ ಗಾತ್ರದ ಚಂದ್ರನಾಗಿದ್ದರೆ ಇನ್ನೂ ವೇಗವಾಗಿ ಗ್ರಹದೊಳಗೆ ಕುಸಿದುಬೀಳುತ್ತಿತ್ತು ಎಂದು ಸಂಶೋಧನಾ ತಂಡ ತಿಳಿಸಿದೆ.

ಅನ್ಯಗ್ರಹಗಳಲ್ಲಿ ಜೀವಿಗಳ ವಾಸಯೋಗ್ಯತೆಯ ಬಗ್ಗೆ ಹುಡುಕಾಟ ನಡೆಸುವಾಗ, ಗ್ರಹಗಳಿಗೆ ಚಂದ್ರನಿರುವುದನ್ನು ಒಂದು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಆದರೆ ಈ ಅಧ್ಯಯನವು ನಿಧಾನವಾಗಿ ತಿರುಗುವ ಗ್ರಹಗಳು ತಮ್ಮ ಚಂದ್ರರನ್ನು ತಾವೇ ನುಂಗಿಕೊಳ್ಳಬಹುದು ಎಂಬ ಹೊಸ ಆತಂಕಕಾರಿ ಅಂಶವನ್ನು ತೆರೆದಿಟ್ಟಿದೆ.