ಸುದ್ದಿ 1

Contributed byJaya shree|Vijaya Karnataka
establishment of isros advanced radar research center in assam
ಅಸ್ಸಾಂನಲ್ಲಿಇಸ್ರೊದ ಅತ್ಯಾಧುನಿಕ

ರಾಡಾರ್ ಸಂಶೋಧನಾ ಕೇಂದ್ರ ಸ್ಥಾಪನೆ
- ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಣೆ

ಅಸ್ಸಾಂ ನ ಗುವಾಹಟಿ ಬಳಿಯ ಚಂದ್ರಪುರದಲ್ಲಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಾಧುನಿಕ ರಾಡಾರ್ ಸಂಶೋಧನಾ ಕೇಂದ್ರದ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಮಾಹಿತಿ ಹಂಚಿಕೊಂಡಿರುವ ಅವರು, ‘‘ಇಸ್ರೊದ ‘ಪ್ರಾಜೆಕ್ಟ್ ನೇತ್ರಾ’ ಯೋಜನೆಯಡಿ ಈ ಸೌಲಭ್ಯವನ್ನು ನಿರ್ಮಿಸಲಾಗುತ್ತಿದ್ದು, ಇದು ಬಾಹ್ಯಾಕಾಶದಲ್ಲಿರುವ ವಸ್ತುಗಳನ್ನು ಪತ್ತೆಹಚ್ಚುವ ಮತ್ತು ದೇಶದ ಉಪಗ್ರಹಗಳಂತಹ ಬಾಹ್ಯಾಕಾಶ ಆಸ್ತಿಗಳನ್ನು ರಕ್ಷಿಸುವ ಭಾರತದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ. ತಂತ್ರಜ್ಞಾನದ ಪ್ರಮುಖ ಕೇಂದ್ರಗಳಿಂದ ದೂರವಿದ್ದ ಅಸ್ಸಾಂ ರಾಜ್ಯವು ಇಂದು ರಾಷ್ಟ್ರೀಯ ಮಟ್ಟದ ಇಂತಹ ಮಹತ್ವದ ತಂತ್ರಜ್ಞಾನ ಯೋಜನೆಗಳ ಕೇಂದ್ರವಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ’’ ಎಂದು ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ‘‘ಅಸ್ಸಾಂನ ಧುಬ್ರಿ ಜಿಲ್ಲೆಯ ಚಾಪರ್ ನಲ್ಲಿಅಂದಾಜು 48,000 ಕೋಟಿ ರೂಪಾಯಿ ವೆಚ್ಚದ ‘ಅಡ್ ಪವರ್ ಲಿಮಿಟೆಡ್ ನ’ 3,200 ಮೆಗಾವ್ಯಾಟ್ ಅತಿ-ಸೂಪರ್ ಕ್ರಿಟಿಕಲ್ ಉಷ್ಣ ವಿದ್ಯುತ್ ಯೋಜನೆಗೆ ಮುಖ್ಯಮಂತ್ರಿ ಶರ್ಮಾ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಸ್ಸಾಂನ ಕೈಗಾರಿಕಾ ವಲಯದಲ್ಲಿಇದೊಂದು ಅತಿ ದೊಡ್ಡ ಹೂಡಿಕೆಯಾಗಿದ್ದು, ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಇದು ಗಣನೀಯವಾಗಿ ಹೆಚ್ಚಿಸಲಿದೆ. ಈ ಯೋಜನೆಯ ನಿರ್ಮಾಣ ಹಂತದಲ್ಲಿಸುಮಾರು 25,000 ಜನರಿಗೆ ಮತ್ತು ಪೂರ್ಣಗೊಂಡ ಬಳಿಕ ಸುಮಾರು 5,000 ಶಾಶ್ವತ ಉದ್ಯೋಗಗಳು ಸೃಷ್ಟಿಯಾಗಲಿವೆ’’ ಎಂದು ಅವರು ತಿಳಿಸಿದ್ದಾರೆ.