ಮಂಡ್ಯದಲ್ಲಿಕಾಲುವೆಗೆ ಪಲ್ಟಿಯಾದ ಗೂಡ್ಸ್ ವಾಹನ: 24 ಕಾರ್ಮಿಕರಿಗೆ ಗಾಯ

Contributed bysantosh.swamy@timesgroup.com|Vijaya Karnataka
goods vehicle overturns in mandya injuring 24 workers with 9 in serious condition
ಮಂಡ್ಯದಲ್ಲಿಕಾಲುವೆಗೆ ಪಲ್ಟಿಯಾದ

ಗೂಡ್ಸ್ ವಾಹನ: 24 ಕಾರ್ಮಿಕರಿಗೆ ಗಾಯ
- ಒಂಬತ್ತು ಜನರ ಸ್ಥಿತಿ ಚಿಂತಾಜನಕ| ನೀರಿಲ್ಲದ್ದರಿಂದ ತಪ್ಪಿದ ಭಾರಿ ಅನಾಹುತ

ವಿಕ ಸುದ್ದಿಲೋಕ ಮಂಡ್ಯ

ತಾಲೂಕಿನ ಕೀಲಾರ ಗ್ರಾಮದ ಬಳಿ ಸೋಮವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಕಾಲುವೆಗೆ ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದ 24 ಕಾರ್ಮಿಕರು ಗಾಯಗೊಂಡಿದ್ದಾರೆ. ಇವರಲ್ಲಿ9 ಜನರ ಸ್ಥಿತಿ ಚಿಂತಾಜನಕವಾಗಿದೆ.

ಕೀಲಾರ ಗ್ರಾಮದ ಬಳಿ ಕಾಲುವೆಯಲ್ಲಿನೀರು ಇಲ್ಲದಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ನಲ್ಲಿಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆಲಸ ಮುಗಿಸಿಕೊಂಡು ಮದ್ದೂರಿನಿಂದ ಮಂಡ್ಯ ತಾಲೂಕಿನ ಕೆರಗೋಡು ಭಾಗದ ನಾನಾ ಗ್ರಾಮಗಳಿಗೆ ತೆರಳುತ್ತಿದ್ದರು. ಕೀಲಾರ ಗ್ರಾಮದ ಬಳಿ ವಾಹನದ ಸ್ಟೇರಿಂಗ್ ಸ್ಟ್ರಕ್ ಆಗಿದೆ. ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ಕಾಲುವೆಗೆ ಪಲ್ಟಿಯಾಗಿದೆ. ವಾಹನದಲ್ಲಿದ್ದ 24 ಕಾರ್ಮಿಕರು ಗಾಯಗೊಂಡಿದ್ದಾರೆ. 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಅವರು ರಾತ್ರಿ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕರು, ಸಂಬಂಧಿಕರು ಆತಂಕಪಡಬೇಕಾಗಿಲ್ಲ. ಗಾಯಾಳುಗಳ ಚಿಕಿತ್ಸೆಗೆ ಸರಕಾರದಿಂದ ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿದರು.

ಸ್ಥಳದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿದ ಶಾಸಕರು, ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಗಾರ್ಮೆಂಟ್ಸ್ ಕಾರ್ಮಿಕರ ಸುರಕ್ಷಿತ ಸಂಚಾರಕ್ಕೆ ಅಗತ್ಯ ವಾಹನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಶೋಭರಾಣಿ, ಎಎಸ್ ಪಿ ನಾಗೇಶ್ , ಡಿವೈಎಸ್ ಪಿ ಲಕ್ಷ್ಮೀನಾರಾಯಣ ಪ್ರಸಾದ್ , ಡಿಎಚ್ ಒ ಬೆಟ್ಟಸ್ವಾಮಿ ಸೇರಿದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಅಧಿ ಕಾರಿಗಳು ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಅಪಘಾತದಿಂದ ಗಾಯಗೊಂಡ ಕಾರ್ಮಿಕರ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದರಿಂದ ಆಸ್ಪತ್ರೆ ಆವರಣದಲ್ಲಿಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ನಿಖರ ಕಾರಣ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.