ಶ್ಯಾಮಲಾ ಸತ್ಯ, ಬೆಂಗಳೂರುಹಿಂದೆಲ್ಲಾ ಪ್ರಸವವಾದ ಹತ್ತು ದಿವಸ ಆಸ್ಪತ್ರೆಯಲ್ಲಿಯೇ ಇದ್ದು, ವೈದ್ಯರು ಹೇಳಿದಂತೆ ಖಾರ ಕಮ್ಮಿ ಇರುವ ಆಹಾರವನ್ನೇ ಕೊಡುತ್ತಿದ್ದರು. ಹನ್ನೊಂದನೆಯ ದಿನದಿಂದ ತಾಯಿಗೆ ಪಥ್ಯ ಶುರುವಾಗುತ್ತಿತ್ತು. ಈಗಲೂ ಅದೇ ರೂಢಿಯಲ್ಲಿದೆ. ಹಾಲು ಚೆನ್ನಾಗಿ ಬರಲೆಂದು ಹಾಲು ಸೋರೆಕಾಯಿ, ಸಬ್ಬಸಿಗೆ ಸೊಪ್ಪನ್ನು ಕೊಡಬೇಕು. ಮೆಣಸಿನಕಾಯಿ ಬದಲು ಕಾಳುಮೆಣಸು ಅಥವಾ ಜೀರಿಗೆಯ ಉಪಯೋಗ ಜಾಸ್ತಿ. ಬಾಣಂತಿಯರಿಗೆ ತೆಂಗಿನಕಾಯಿ ವಜ್ರ್ಯ, ಆದರೆ ಕೊಬ್ಬರಿ ಬಳಕೆ ಜಾಸ್ತಿ.
ಹನ್ನೊಂದನೆಯ ದಿನ ಮಗುವಿಗೂ, ತಾಯಿಗೂ ನೀರನ್ನು ಹಾಕಿದ ನಂತರ ಒಣ ಶುಂಠಿಗೆ ಬೆಲ್ಲಹಾಕಿ ತುಪ್ಪದಲ್ಲಿಕಲಸಿ ಕೊಡಬೇಕು. ಹನ್ನೆರಡನೆಯ ದಿವಸ ಅರ್ಧ ಜಾಯಿಕಾಯಿಯನ್ನು ಕುಟ್ಟಿ ಪುಡಿ ಮಾಡಿ ತುಪ್ಪದಲ್ಲಿಹುರಿದು ಬೆಲ್ಲಹಾಗೂ ಒಣಕೊಬ್ಬರಿ ಪುಡಿ ಹಾಕಿ ಕೊಡಬೇಕು. ಹದಿಮೂರನೆಯ ದಿವಸ ಒಂದು ಟೇಬಲ್ ಚಮಚ ಲವಂಗವನ್ನು ಎರಡು ಲೋಟ ನೀರಿಗೆ ಹಾಕಿ ಒಂದು ಲೋಟ ಆಗುವವರೆಗೂ ಕುದಿಸಿ, ಸೋಸಿ, ರುಚಿಗೆ ತಕ್ಕಷ್ಟು ಬೆಲ್ಲಹಾಕಿ ಕುಡಿಯಲು ಕೊಡಬೇಕು. ಹದಿನಾಲ್ಕನೆಯ ದಿನ ಸುಲಿದ 20 ಬೆಳ್ಳುಳ್ಳಿಯನ್ನು ತುಪ್ಪದಲ್ಲಿಹುರಿದು ಹಾಲಿನಲ್ಲಿಬೇಯಿಸಿ ತುಪ್ಪ ಹಾಕಿ ರುಚಿಗೆ ಬೆಲ್ಲಹಾಕಿ ಕೊಡಬೇಕು.
ಹದಿನೈದನೆಯ ದಿವಸ ಎರಡು ಉತ್ತುತ್ತೆ, ಒಂದು ಚೂರು ಜೇಷ್ಠ ಮಧು, ಎರಡು ಏಲಕ್ಕಿ, ಸ್ವಲ್ಪ ಒಣ ಶುಂಠಿ ಎಲ್ಲವನ್ನೂ ಜಜ್ಜಿ ಒಂದು ಲೋಟ ಹಾಲಿನಲ್ಲಿನೆನೆಸಿ, ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ ಕುದಿಸಿ ಸ್ವಲ್ಪ ತುಪ್ಪ ಹಾಕಿ ಕುಡಿಸಬೇಕು. ಹದಿನಾರನೆಯ ದಿವಸದಿಂದ ಮೂರು ತಿಂಗಳವರೆಗೂ ಚಿಕ್ಕ ನಿಂಬೆ ಗಾತ್ರದಷ್ಟು ಶುಂಠಿ ಲೇಹ್ಯವನ್ನು ಬೆಳಗ್ಗೆ ಎದ್ದ ತಕ್ಷಣ ತುಪ್ಪದ ಜೊತೆಗೆ ತಿನ್ನಲು ಕೊಡಬೇಕು. ಒಂದೂವರೆ ತಿಂಗಳಾದ ಮೇಲೆ ಅಂಟಿನ ಉಂಡೆ ಕೊಡಲು ಶುರು ಮಾಡಬೇಕು. ಬೆಳಗ್ಗೆ ಹೆಪ್ಪು ಹಾಕಿದ ಮೊಸರನ್ನು ಮಧ್ಯಾಹ್ನದ ಊಟಕ್ಕೆ, ಮಧ್ಯಾಹ್ನ ಹೆಪ್ಪು ಹಾಕಿದ್ದನ್ನು ರಾತ್ರಿಯ ಊಟಕ್ಕೆ ಬಡಿಸಬೇಕು. ಒಣ ಕೊಬ್ಬರಿಯನ್ನು ಹೆಚ್ಚು ಬಳಸಿ, ಬೆಳ್ಳುಳ್ಳಿ ಚಟ್ನಿ ಪುಡಿ ಕೊಡಬೇಕು.
ಈ ಬಾಣಂತಿ ಪಥ್ಯವನ್ನು ಕಟ್ಟುನಿಟ್ಟಾಗಿ ಮಾಡುವುದರಿಂದ ಗರ್ಭಕೋಶವು ಯಥಾಸ್ಥಿತಿಗೆ ಬಂದು ತಾಯಿಯ ಆರೋಗ್ಯವೂ ಸುಧಾರಿಸುತ್ತದೆ. ಮಗುವಿಗೂ ಹಾಲಿನ ಮೂಲಕ ಈ ಸಾಂಬಾರ ಪದಾರ್ಥಗಳ ಒಗ್ಗುವಿಕೆಯಾಗುತ್ತದೆ. ಇದರ ಜೊತೆಗೆ ಊಟವಾದ ನಂತರ ಎಲೆ, ಅಡಿಕೆ, ಸುಣ್ಣದ ಉಪಯೋಗದಿಂದ ದೇಹಕ್ಕೆ ಕ್ಯಾಲ್ಷಿಯಂ ದೊರೆಯುತ್ತದೆ.