ಬೆಂಗಳೂರು: ಕೃಷಿ ಹೊಂಡದಲ್ಲಿ100 ಗ್ರಾಂ ಸೋಡಿಯಂ ಬಳಸಿ ವಿಜ್ಞಾನ ಪ್ರಯೋಗ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಹಾಗೂ ‘ಡ್ರೋನ್ ಪ್ರತಾಪ್ ’ ಅಲಿಯಾಸ್
ಎನ್ .ಎಂ. ಪ್ರತಾಪ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪ್ರತಾಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ‘‘ಪ್ರತಾಪ್ ನಡೆಸಿದ ಪ್ರಯೋಗವು 10ನೇ ತರಗತಿಯ ಎನ್ ಸಿಇಆರ್ ಟಿ ಪಠ್ಯಕ್ರಮದಲ್ಲಿರುವ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಪ್ರಯೋಗದ ಉದ್ದೇಶ ಶೈಕ್ಷಣಿಕವಾಗಿದ್ದು, ಯಾವುದೇ ದುರುದ್ದೇಶ ಕಂಡು ಬಂದಿಲ್ಲ,’’ ಎಂದು ನ್ಯಾಯಪೀಠ ತಿಳಿಸಿದೆ.